

ಮದ್ದೂರು: ತಾಲೂಕಿನ ದೇಶಹಳ್ಳಿ ಗ್ರಾಮದ ಗಾಂಧಿನಗರ ರಸ್ತೆ ಸರಿಪಡಿಸದ ಕಾರಣ ಸಂಚಾರಕ್ಕೆ ತೊಂದರೆಯಾಗಿದೆ ಎಂದು ಆರೋಪಿಸಿ ಗ್ರಾಮಸ್ಥರು ರಸ್ತೆಯಲ್ಲಿ ನಾಟಿ ಮಾಡುವ ಮೂಲಕ ವಿಭಿನ್ನವಾಗಿ ಬುಧವಾರ ಪ್ರತಿಭಟನೆ ನಡೆಸಿದರು.
ರಸ್ತೆ ಸರಿಪಡಿಸದ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ದೇಶಹಳ್ಳಿ ಗ್ರಾಮದ ಗಾಂಧಿನಗರದಲ್ಲಿ ಹಲವಾರು ವರ್ಷಗಳಿಂದ ರಸ್ತೆ ಹದಗೆಟ್ಟಿದ್ದು, ಸುಗಮ ಸಂಚಾರಕ್ಕೆ ತೊಂದರೆಯಾಗುತ್ತಿದೆ ಎಂದು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜವಾಗುತ್ತಿಲ್ಲ ಎಂದು ಆರೋಪಿಸಿದರು.
ರಸ್ತೆ ಹದಗೆಟ್ಟಿರುವ ಹಿನ್ನೆಲೆಯಲ್ಲಿ ನಿತ್ಯ ಶಾಲಾ-ಕಾಲೇಜಿಗೆ ತೆರಳುವ ಮಕ್ಕಳಿಗೆ ತೊಂದರೆಯಾಗುತ್ತಿದೆ ಮತ್ತು ದ್ವಿಚಕ್ರ ವಾಹನ ಚಲಾಯಿಸಲೂ ಆಗದೆ ಎಷ್ಟೋ ಜನರು ಬಿದ್ದು ಗಾಯ ಮಾಡಿಕೊಂಡಿದ್ದಾರೆ. ಮಳೆ ಬಂದರಂತೂ ರಸ್ತೆ ಕೆಸರು ಗದ್ದೆಯಂತಾಗಿ ನಾಟಿ ಮಾಡುವ ಹಂತಕ್ಕೆ ತಲುಪುತ್ತದೆ. ಆದ್ದರಿಂದ, ತಕ್ಷಣವೇ ರಸ್ತೆ ದುರಸ್ತಿ ಕಾರ್ಯ ನಡೆಸಿ ಗ್ರಾಮಸ್ಥರಿಗೆ ಅನುಕೂಲ ಕಲ್ಪಿಸಬೇಕು. ಇಲ್ಲದಿದ್ದರೆ, ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ರೂಪಿಸಬೇಕಾಗುತ್ತದೆ ಎಂದು ಗ್ರಾಮಸ್ಥರು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.
ಗ್ರಾಮಸ್ಥರಾದ ಶಿವರಾಮ, ರವಿ, ಗೋವಿಂದ, ಗಿರೀಶ್, ಬಾಲಪ್ಪ, ಸೀನು, ಚಿನ್ನಮ್ಮ, ಬೋರಪ್ಪ ಇದ್ದರು.