ಕಸದ ವಾಹನ ತಡೆದ ಚಿತ್ರಿಗಿ ಗ್ರಾಮಸ್ಥರು

14KMT1_Horabhag
Published on

ಕುಮಟಾ: ಒಣ ಕಸದ ಬದಲು ಹಸಿ ಕಸವನ್ನು ಪಟ್ಟಣದ ಚಿತ್ರಿಗಿ ಹೊರಭಾಗದ ತ್ಯಾಜ್ಯ ನಿರ್ವಹಣಾ ಘಟಕಕ್ಕೆ ತಂದ ಪುರಸಭೆಯ ಕಸದ ವಾಹನಗಳನ್ನು ಸ್ಥಳೀಯರು ತಡೆದು ನಿಲ್ಲಿಸಿದ ಘಟನೆ ಗುರುವಾರ ನಡೆದಿದೆ.

ಕಳೆದ ಎರಡು ವರ್ಷದ ಹಿಂದೆ ಕಡೆಭಾಗದ ಸರ್ವೆ ನಂಬರ್ 84 ರಲ್ಲಿ ತ್ಯಾಜ್ಯ ವಿಂಗಡಣೆ ಮತ್ತು ನಿರ್ವಹಣೆಗಾಗಿ ಘಟಕ ಆರಂಭಿಸಿದ್ದಾರೆ. ಆದರೆ, ಇಲ್ಲಿ ಅವೈಜ್ಞಾನಿಕವಾಗಿ ಕಸ ಸುರಿಯುತ್ತಿದ್ದು, ಒಣ ಕಸವನ್ನು ಮಾತ್ರ ಹಾಕುವ ಬದಲು, ಹಸಿ ಕಸವನ್ನು ತಂದು ಗುಡ್ಡೆ ಹಾಕಲಾಗುತ್ತಿದೆ. ಎಷ್ಟೋ ದಿನಗಳ ನಂತರ ಹೊಂಡ ತೋಡಿ ಕಸ ಹೂಳಲಾಗುತ್ತಿದೆ. ಇದರಿಂದಾಗಿ ಇಲ್ಲಿಯ ಶುಚಿತ್ವ ಹಾಳಾಗಿದೆ. ಯಾವುದೇ ಕಾರಣಕ್ಕೂ ಹಸಿ ಕಸ ತರಬಾರದು ಎಂದು ಸ್ಥಳೀಯರಾದ ವಿಷ್ಣು ನಾರಾಯಣ ಪಟಗಾರ, ರಾಘವೇಂದ್ರ ಬಾಬು ಶಾನಭಾಗ, ಕೃಷ್ಣಮೂರ್ತಿ ಪಟಗಾರ, ಪ್ರೇಮಾ ಸೀತಾರಾಮ ಪಟಗಾರ, ನವೀನ ಪಟಗಾರ, ಸುನೀತಾ ಗೋಪಾಲ ಪಟಗಾರ, ಮಂಜುನಾಥ ನಾಯ್ಕ, ಲಕ್ಷ್ಮೀಕಾಂತ ಪಟಗಾರ ಇನ್ನಿತರರು ಕಸದ ವಾಹನದವರಿಗೆ ತಾಕೀತು ಮಾಡಿದ್ದಾರೆ.

ಈ ವೇಳೆ ಸ್ಥಳೀಯ ಸಾವಿತ್ರಿ ಪಟಗಾರ ಪತ್ರಕರ್ತರೊಂದಿಗೆ ಮಾತನಾಡಿ, ಕಸದ ತೊಂದರೆ ವಿಪರೀತವಾಗಿದೆ. ಸಮಸ್ಯೆ ದಿನೇದಿನೆ ಹೆಚ್ಚುತ್ತಿದ್ದು, ಈ ಬಗ್ಗೆ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net