

ಚನ್ನಗಿರಿ: ತಾಲೂಕಿನ ಹರಳಘಟ್ಟ ಗ್ರಾಮದ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವಂತೆ ಒತ್ತಾಯಿಸಿ ಗ್ರಾಮಸ್ಥರು ಹಾಗೂ ರಾಜ್ಯ ರೈತ ಸಂಘದ ಕಾರ್ಯಕರ್ತರು ಮಂಗಳವಾರ ಹೆಬ್ಬಳಗೆರೆ ಗ್ರಾಮದಲ್ಲಿ ರಸ್ತೆ ತಡೆದು ಪ್ರತಿಭಟನೆ ಮಾಡಿದರು.
ಪ್ರತಿಭಟನೆ ನೇತೃತ್ವ ವಹಿಸಿದ್ದ ರೈತಸಂಘದ ರಾಜ್ಯ ಕಾರ್ಯದರ್ಶಿ ಮಲ್ಲಶೆಟ್ಟಿಹಳ್ಳಿ ಚನ್ನಬಸಪ್ಪ ಮಾತನಾಡಿ, ಪ್ರತಿ ವರ್ಷ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗುತ್ತಿದ್ದು, ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಸಮಸ್ಯೆ ಬಗೆಹರಿಸಿ ಕೊಡುವುದಾಗಿ ಹೇಳಿ ಸುಮ್ಮನಿದ್ದಾರೆ. ಕೂಲಿ, ಕೃಷಿ ಕೆಲಸ ಬಿಟ್ಟು ಸಂಜೆವರೆಗೆ ನೀರಿಗಾಗಿ ಅಕ್ಕಪಕ್ಕದ ತೋಟಕ್ಕೆ ಅಲೆದು ಮಾಲೀಕರು ನೀರು ಕೊಟ್ಟರೆ ತರುವ ಪರಿಸ್ಥಿತಿ ನಿರ್ವಣವಾಗಿದೆ ಎಂದರು.
ಹರಳಘಟ್ಟ ಗ್ರಾಮ ಕಂಚಿಗನಾಳು ಗ್ರಾಪಂ ವ್ಯಾಪ್ತಿಗೆ ಸೇರುತ್ತದೆ. ಕಳೆದ ಸಾಲಿನಲ್ಲಿ ನೀರಿನ ಸಮಸ್ಯೆ ಉಂಟಾದಾಗ ಗ್ರಾಪಂ ಟ್ಯಾಂಕರ್ ಮೂಲಕ ನೀರು ವಿತರಣೆ ಮಾಡಿತ್ತು. ಆದರೆ ಬಾಕಿ ಬಿಲ್ ಪಾವತಿ ಮಾಡಿಲ್ಲ ಎಂಬ ಕಾರಣಕ್ಕೆ ಟ್ಯಾಂಕರ್ಗಳು ಈ ಬಾರಿ ನೀರು ವಿತರಿಸಲು ಮುಂದೆ ಬರುತ್ತಿಲ್ಲ. ನೀರಿನ ಸಮಸ್ಯೆ ಬಗೆಹರಿಸದಿದ್ದಲ್ಲಿ ತಾಪಂ ಕಚೇರಿ ಮುತ್ತಿಗೆ ಹಾಕಿ ಪ್ರತಿಭಟನೆ ಮಾಡಲಾಗುತ್ತದೆ ಎಂದು ಹೇಳಿದರು.
ಜಿಲ್ಲಾ ರೈತ ಮುಖಂಡರಾದ ಜಕ್ಕಲಿ ನಾಗರಾಜ್, ದಾಗಿನಕಟ್ಟೆ ಬಸವರಾಜ್, ಗಣೇಶ್, ದೇವರಹಳ್ಳಿ ಶಂಕರಪ್ಪ, ತಾಲೂಕು ರೈತ ಸಂಘದ ಅಧ್ಯಕ್ಷ ಕಾಳೇಶ್, ಹಸಿರುಸೇನೆ ತಾಲೂಕು ಅಧ್ಯಕ್ಷ ಬಸವಾಪುರ ರಂಗನಾಥ್, ಕಲೀಂ ಹಾಗೂ ಹರಳಘಟ್ಟ ಗ್ರಾಮಸ್ಥರು ಇದ್ದರು.