

ನಾಪೋಕ್ಲು: ಸಮೀಪದ ಕೊಣಂಜಗೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಳ್ಳಡ, ಪೆಬ್ಬಾಟಂಡ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ಗ್ರಾಮಸ್ಥರು ಶ್ರಮದಾನದ ಮೂಲಕ ದುರಸ್ತಿಪಡಿಸಿದರು.
ಪಾರಾಣೆ ಬೇತ್ರಿ ಸಂಪರ್ಕ ರಸ್ತೆಯಿಂದ ಮಳ್ಳಡ, ಪೆಬ್ಬಾಟಂಡ ಕುಟುಂಬಸ್ಥರ ಮನೆಗೆ ಸಂಪರ್ಕ ಕಲ್ಪಿಸುವ ಬಲಮುರಿಯ ನಾಲ್ಕು ರಸ್ತೆ ದುರಸ್ತಿ ಕಾಣದೆ ತೀವ್ರ ಹದಗೆಟ್ಟಿತ್ತು. ಇದರಿಂದಾಗಿ ಈ ಮಾರ್ಗದಲ್ಲಿ ಸಂಚಾರ ದುಸ್ತರವಾಗಿತ್ತು. ಅಲ್ಲದೆ ಇತ್ತ ಯಾರೂ ಗಮನಹರಿಸದ ಕಾರಣ ಗ್ರಾಮಸ್ಥರೇ ಶ್ರಮದಾನದ ಮೂಲಕ ದುರಸ್ತಿ ಕಾರ್ಯ ನಡೆಸಿದರು.
ರಸ್ತೆಗಳಲ್ಲಿ ದೊಡ್ಡ ಪ್ರಮಾಣದ ಗುಂಡಿಗಳಾಗಿ ಸಂಚಾರ ಕಷ್ಟಕರವಾಗಿತ್ತು. ಇದರಿಂದ ಎಚ್ಚೆತ್ತ ಗ್ರಾಮಸ್ಥರು, ರಸ್ತೆ ಬದಿಯಲ್ಲಿ ಆವರಿಸಿದ್ದ ಗಿಡಗಂಟಿಗಳನ್ನು ಕಡಿದು ಸ್ವಚ್ಛಗೊಳಿಸಿ ಗುಂಡಿಮುಚ್ಚಿ ಸಮಸ್ಯೆಯನ್ನು ಬಗೆಹರಿಸಿಕೊಂಡರು.
ಶ್ರಮದಾನದಲ್ಲಿ ಗ್ರಾಮಸ್ಥರಾದ ಬೈರಿಕುಂದಿರ ಅಯ್ಯಪ್ಪ, ಸೋಮಯ್ಯ , ಮನು, ವಿನು ಮಳ್ಳಡ ಚಿಣ್ಣಪ್ಪ, ಸುಬ್ಬಯ್ಯ, ತಿಮ್ಮಯ್ಯ, ಗಣೇಶ, ಪೊನ್ನಚನ ಸೋಮಣ್ಣ, ಹರೀಶ್ , ರೋಹನ್ ಇತರರು ಪಾಲ್ಗೊಂಡಿದ್ದರು.