ಕೋಟೆಕಲ್ಲ-ನೀಲಾನಗರ ರಸ್ತೆ ನಿರ್ಮಾಣಕ್ಕೆ ಗ್ರಾಮಸ್ಥರ ಆಗ್ರಹ

Villagers demand for construction of Kotekalla-Neelanagar road
ಗುಳೇದಗುಡ್ಡ ಸಮೀಪದ ಕೋಟೆಕಲ್ - ನೀಲಾನಗರ ಮಾರ್ಗದ ರಸ್ತೆ ಹಾಳಾಗಿರುವುದು.
Published on

ಗುಳೇದಗುಡ್ಡ: ಕೋಟೆಕಲ್ಲ ಗ್ರಾಮದಿಂದ ನೀಲಾನಗರಕ್ಕೆ ತೆರಳುವ ಅಂದಾಜು 5 ಕಿಮೀ ರಸ್ತೆ ಸಾಕಷ್ಟು ಹದಗೆಟ್ಟಿದ್ದು, ಕೂಡಲೇ ರಸ್ತೆ ನಿರ್ಮಿಸಬೇಕೆಂದು ಗ್ರಾಮಸ್ಥರು, ಪ್ರಯಾಣಿಕರು ಆಗ್ರಹಿಸಿದ್ದಾರೆ.

ಕೋಟೆಕಲ್ ಮಾರ್ಗದ ಮೂಲಕ ಹೋಗುವ ರಸ್ತೆಯು ಲಿಂಗಾಪುರ, ಕೆಲವಡಿ, ಬಾಗಲಕೋಟೆ, ನೀಲಾನಗರ, ಶಿರೂರ, ಮಲ್ಲಾಪುರ ಗ್ರಾಮಗಳಿಗೆ ಸಂಪರ್ಕ ಕಲ್ಪಿಸಲಿದೆ. ಆದರೆ, ಒಂದು ವರ್ಷದಿಂದ ರಸ್ತೆ ಹಾಳಾಗಿ ಹೋಗಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.

ಈ ಮಾರ್ಗದ ಮೂಲಕ ಬಾಗಲಕೋಟೆಗೆ ತೆರಳುವವರಿಗೆ ಸಾಕಷ್ಟು ಅನುಕೂಲವಾಗುತ್ತಿದ್ದು, ಅಲ್ಲದೆ, ಸಮಯ ಮತ್ತು ಪೆಟ್ರೋಲ್ ಎರಡೂ ಉಳಿಯುತ್ತವೆ. ಈ ರಸ್ತೆ ಮಾರ್ಗವಾಗಿ ಕೋಟೆಕಲ್ ಗ್ರಾಮದ ಅನೇಕರ ಜಮೀನುಗಳು ಬರುತ್ತವೆ. ಈ ರಸ್ತೆ ಮೂಲಕವೇ ನಿತ್ಯವೂ ಗ್ರಾಮಸ್ಥರು ತಮ್ಮ ಜಮೀನುಗಳಿಗೆ ತೆರಳುತ್ತಾರೆ. ರಸ್ತೆಯಲ್ಲಿ ಕಲ್ಲುಗಳು, ತಗ್ಗುದಿನ್ನೆಗಳು ಬಿದ್ದಿದ್ದು, ಸಾರ್ವಜನಿಕರು ಸಂಚರಿಸಲು ಹರಸಾಹಸ ಪಡುವಂತಾಗಿದೆ.

ರೈತರು ತಮ್ಮ ಹೊಲಗಳಲ್ಲಿ ಬೆಳೆದ ತರಕಾರಿ ಸೇರಿ ಇನ್ನಿತರ ಬೆಳೆಗಳನ್ನು ಮಾರುಕಟ್ಟೆಗೆ ಸಾಗಿಸಲು ಕಷ್ಟಪಡುವಂತಾಗಿದೆ. ಹಾಳಾದ ರಸ್ತೆಯಿಂದಾಗಿ ಬೆಳೆಗಳೂ ಧೂಳು ಹಿಡಿಯುತ್ತಿವೆ ಎಂದು ರೈತರು ದೂರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net