ಹುಲಿ, ಚಿರತೆಗಳ ಸೆರೆಗೆ ಗ್ರಾಮಸ್ಥರ ಒತ್ತಾಯ

29-GPT-3
ಗುಂಡ್ಲುಪೇಟೆ ತಾಲೂಕಿನ ದೇಶೀಪುರ ಗ್ರಾಮದಲ್ಲಿ ಚಿರತೆ ದಾಳಿಯಿಂದ ಸಾವಿಗೀಡಾದ ಜಾನುವಾರು ಮಾಲೀಕರಿಗೆ ಕೂಡಲೇ ಪರಿಹಾರ ನೀಡುವಂತೆ ಒತ್ತಾಯಿಸಿ ರೈತ ಸಂಘಟನೆಯವರು ಪ್ರತಿಭಟನೆ ನಡೆಸಿದರು. ಸುರೇಶ್, ನಾಗಪ್ಪ ಇದ್ದರು.
Published on

ಗುಂಡ್ಲುಪೇಟೆ: ತಾಲೂಕಿನ ಗ್ರಾಮಾಂತರ ಪ್ರದೇಶಗಳಲ್ಲಿ ಹುಲಿ, ಚಿರತೆಗಳ ದಾಳಿ ತೀವ್ರವಾಗುತ್ತಿದ್ದರೂ ಅರಣ್ಯ ಇಲಾಖೆ ಯಾವುದೇ ಕ್ರಮಕೈಗೊಳ್ಳದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಕಾಡಂಚಿನ ಗ್ರಾಮಗಳಿಗಿಂತಲೂ ಹೆಚ್ಚಾಗಿ ಬಫರ್ ವಲಯದಲ್ಲಿಯೇ ಹುಲಿಗಳು ಜಾನುವಾರುಗಳ ಮೇಲೆ ದಾಳಿ ನಡೆಸಿ ಕೊಲ್ಲುತ್ತಿವೆ. ಅಲ್ಲದೆ ನೂರಾರು ವಾಹನಗಳು ಸಂಚರಿಸುವ ಗುಡ್ಡ-ಬೆಟ್ಟದಲ್ಲಿ ಕಾಣಿಸಿಕೊಳ್ಳುತ್ತಿರುವುದು ಶ್ರೀಸಾಮಾನ್ಯರಲ್ಲಿ ಭೀತಿಯುಂಟು ಮಾಡುತ್ತಿದೆ.

ಕಳೆದ ನಾಲ್ಕು ದಿನಗಳ ಹಿಂದೆ ತಾಲೂಕಿನ ಕಡತಾಳ ಕಟ್ಟೆಹುಂಡಿ ಗ್ರಾಮದ ದೇವಪ್ಪ ಎಂಬುವರ ಮನೆಯ ಮುಂದೆ ಕಟ್ಟಿಹಾಕಿದ್ದ ಹಸುವನ್ನು ಕೊಂದಿದ್ದ ಹುಲಿ ಮರುದಿನ ಕರಕಲಮಾದಹಳ್ಳಿ, ನಂತರ ಸೋಮನಪುರ ಗ್ರಾಮದಲ್ಲಿಯೂ ತಲಾ ಒಂದೊಂದು ಹಸುಗಳನ್ನು ಕೊಂದುಹಾಕಿದ್ದು ಸುತ್ತಮುತ್ತಲ ಪ್ರದೇಶದಲ್ಲೇ ಸುಳಿದಾಡುತ್ತಿದೆ.

ಗುರುವಾರ ರಾತ್ರಿ ಭಾರಿ ಗಾತ್ರದ ಹುಲಿ ಕಂದೇಗಾಲ ಕೊಡಸೋಗೆ ನಡುವೆ ರಸ್ತೆಯಲ್ಲಿ ಜನರ ಕಣ್ಣಿಗೆ ಬಿದ್ದಿದೆ. ರಾತ್ರಿ 10 ಗಂಟೆ ಸಮಯದಲ್ಲಿ ಪಟ್ಟಣದ ಕಲ್ಯಾಣ ಮಂಟಪದಲ್ಲಿ ಮದುವೆ ಮುಗಿಸಿಕೊಂಡು ಸ್ವಗ್ರಾಮಕ್ಕೆ ತೆರಳುತ್ತಿದ್ದ ಸಾರ್ವಜನಿಕರು ನಡು ರಸ್ತೆಯಲ್ಲಿ ಮಲಗಿದ್ದ ಹುಲಿಯನ್ನು ಕಂಡು ಹೆದರಿದ್ದಾರೆ. ಹಿಂದೆಯೇ ಬರುತ್ತಿದ್ದ ಇತರ ವಾಹನಗಳವರು ನಿಂತು ಜೋರಾಗಿ ಹಾರ್ನ್ ಮಾಡಿದರೂ ಕದಲದೆ ದುರುಗುಟ್ಟಿ ನೋಡಿದ್ದರಿಂದ ಭೀತಿಗೊಳಗಾಗಿ ವಾಪಸ್ಸಾಗಿದ್ದಾರೆ.

ಚಿರತೆ ದಾಳಿಗೆ ಹಸುಗಳು ಬಲಿ: ತಾಲೂಕಿನ ದೇಶೀಪುರ ಗುರುವಾರ ರಾತ್ರಿ ಚಿರತೆ ದಾಳಿ ನಡೆಸಿ ಗ್ರಾಮದ ರಾಜಪ್ಪ ಮತ್ತು ನಾಗಮಲ್ಲಪ್ಪ ಎಂಬುವರಿಗೆ ಸೇರಿದ ಎರಡು ಹಸುಗಳನ್ನು ಕೊಂದುಹಾಕಿದೆ. ವಿಷಯ ತಿಳಿದ ಅರಣ್ಯ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿದರು.

ಹಲವಾರು ದಿನಗಳಿಂದ ಈ ಭಾಗದಲ್ಲಿ ಹುಲಿ, ಚಿರತೆಗಳು ಜಾನುವಾರುಗಳನ್ನು ಕೊಂದು ಹಾಕುತ್ತಿದ್ದರೂ ಅರಣ್ಯ ಇಲಾಖೆ ಯಾವುದೇ ಕ್ರಮಕೈಗೊಳ್ಳದ ಬಗ್ಗೆ ಸಾಮೂಹಿಕ ನಾಯಕತ್ವದ ರೈತ ಸಂಘಟನೆಯ ತಾಲೂಕು ಅಧ್ಯಕ್ಷ ನಾಗಪ್ಪ ನೇತೃತ್ವದಲ್ಲಿ ಜಾನುವಾರುವಿನ ಕಳೇಬರ ಇಟ್ಟುಕೊಂಡು ಪ್ರತಿಭಟನೆ ನಡೆಸಿದರು. ಕೂಡಲೇ ಚಿರತೆಯನ್ನು ಸೆರೆಹಿಡಿಯಬೇಕು, ಸ್ಥಳಕ್ಕೆ ಹಿರಿಯ ಅಧಿಕಾರಿಗಳು ಆಗಮಿಸಿ ಸ್ಥಳದಲ್ಲಿಯೇ ಜಾನುವಾರು ನಷ್ಟಕ್ಕೆ ಮಾಲೀಕರಿಗೆ ಪರಿಹಾರ ನೀಡಬೇಕು ಎಂದು ಪಟ್ಟುಹಿಡಿದರು.

ಸ್ಥಳಕ್ಕೆ ಆಗಮಿಸಿದ ಗುಂಡ್ಲುಪೇಟೆ ಉಪವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸುರೇಶ್ ಒಂದು ವಾರದಲ್ಲಿ ಪರಿಹಾರ ಕೊಡಿಸುವ ಭರವಸೆ ನೀಡಿದ ನಂತರ ಪ್ರತಿಭಟನೆ ಕೈಬಿಡಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net