

ಯಲ್ಲಾಪುರ: ತಾಲೂಕಿನ ದೇಹಳ್ಳಿ ಕ್ರಾಸ್ನಿಂದ ಬಿಸಗೋಡವರೆಗಿನ ರಸ್ತೆ ಹದಗೆಟ್ಟ ಹಿನ್ನೆಲೆಯಲ್ಲಿ ಗ್ರಾಮಸ್ಥರೇ ತಾತ್ಕಾಲಿಕ ದುರಸ್ತಿ ಕೈಗೊಳ್ಳುವ ನಿರ್ಧಾರಕ್ಕೆ ಬಂದಿದ್ದಾರೆ.
ಸುಮಾರು 2 ಕಿಮೀಯಷ್ಟು ರಸ್ತೆ ಸಂಪೂರ್ಣ ಹದಗೆಟ್ಟಿದ್ದು ವಾಹನಗಳ ಸಂಚಾರಕ್ಕೆ ತೊಂದರೆಯಾಗಿದೆ. ರಸ್ತೆಯಲ್ಲಿ ಹೊಂಡ-ಗುಂಡಿ ಕಾರಣಕ್ಕಾಗಿ ಬಸ್ ಸಂಚಾರವೂ ನಿಂತಿದೆ. ಇದರಿಂದ ವಿದ್ಯಾರ್ಥಿಗಳು, ಶಿಕ್ಷಕರು 2 ಕಿಮೀ ನಡೆದೇ ಹೋಗಬೇಕಾಗಿದೆ.
ರಸ್ತೆ ಅವ್ಯವಸ್ಥೆಯಿಂದ ಬೇಸತ್ತ ಗ್ರಾಮಸ್ಥರು ರಸ್ತೆಯ ಹೊಂಡಗಳಲ್ಲಿ ಗಿಡಗಳನ್ನು ನೆಟ್ಟು ಆಕ್ರೋಶ ವ್ಯಕ್ತಪಡಿಸಿದ್ದರು. ಈ ಬಗ್ಗೆ ಸೆ.23 ರಂದು ’ವಿಜಯವಾಣಿ’ ವಿಶೇಷ ವರದಿ ಪ್ರಕಟಿಸಿತ್ತು. ರಸ್ತೆ ಅವ್ಯವಸ್ಥೆ ಬಗ್ಗೆ ಪ್ರತಿಕ್ರಿಯಿಸಿದ ಜಿ.ಪಂ ಇಂಜಿನಿಯರಿಂಗ್ ಉಪವಿಭಾಗದ ಎಇಇ ಅಶೋಕ ಬಂಟ, ರಸ್ತೆ ದುರಸ್ತಿಗೆ ಇಲಾಖೆಯಲ್ಲಿ ಯಾವುದೇ ಅನುದಾನ ಇಲ್ಲ ಎಂದು ಹೇಳಿದ್ದರು. ಗ್ರಾಮ ಪಂಚಾಯಿತಿಯಲ್ಲಿಯೂ ಈ ಕೆಲಸಕ್ಕೆ ಯಾವುದೇ ಅನುದಾನ ಇಲ್ಲ.
ಇಲಾಖೆಯಿಂದ ಅನುದಾನ ಸಿಗುವುದಿಲ್ಲ ಎಂಬುದನ್ನು ಅರಿತ ಗ್ರಾಮಸ್ಥರು ಮಂಗಳವಾರ ಸಂಜೆ ಬಿಸಗೋಡಿನಲ್ಲಿ ಸಭೆ ನಡೆಸಿ, ತಾವೇ ಖರ್ಚು ಭರಿಸಿ ರಸ್ತೆ ದುರಸ್ತಿಗೆ ಮುಂದಾಗುವ ನಿರ್ಣಯಕ್ಕೆ ಬಂದಿದ್ದಾರೆ.
ಗ್ರಾಮಸ್ಥರು ತಮ್ಮಿಂದಾದ ಸಹಕಾರ ನೀಡುವುದು, ಆನಗೋಡ ಹಾಗೂ ದೇಹಳ್ಳಿ ಗ್ರಾ.ಪಂನಿಂದ ನೀಡುವ ಸಹಾಯ, ಸ್ಥಳೀಯ ಸಹಕಾರಿ ಸಂಘಗಳ ನೆರವು ಹಾಗೂ ದಾನಿಗಳ ಸಹಾಯದಿಂದ ರಸ್ತೆ ದುರಸ್ತಿ ಪಡಿಸಲು ಮುಂದಾಗಿದ್ದಾರೆ. ರಸ್ತೆಯ ಸಂಪೂರ್ಣ ಡಾಂಬರೀಕರಣಕ್ಕೆ ಅನುದಾನ ನೀಡಲು ಶಾಸಕರು ಹಾಗೂ ಸಂಸದರು ಭರವಸೆ ನೀಡಿದ್ದಾರೆ. ಅಲ್ಲಿಯವರೆಗೆ ಓಡಾಟಕ್ಕೆ ಅನುಕೂಲವಾಗುವಂತೆ ಶ್ರಮದಾನದ ಮೂಲಕ ರಸ್ತೆ ದುರಸ್ತಿ ಮಾಡಲು ನಿರ್ಣಯಿಸಲಾಗಿದೆ. ರಸ್ತೆ ದುರಸ್ತಿಯಾದಲ್ಲಿ ಬಸ್ ಸಂಚಾರ ಆರಂಭಿಸುವುದಾಗಿ ಸಾರಿಗೆ ಘಟಕದ ಅಧಿಕಾರಿಗಳು ತಿಳಿಸಿದ್ದಾರೆ.
ಸದ್ಯಕ್ಕೆ ವಾಹನಗಳ ಓಡಾಟಕ್ಕೆ ತೊಂದರೆಯಾಗದ ರೀತಿಯಲ್ಲಿ ರಸ್ತೆ ದುರಸ್ತಿಯನ್ನು ನಾವೇ ಶ್ರಮದಾನದ ಮೂಲಕ ಮಾಡುತ್ತೇವೆ. ಸರ್ಕಾರದಿಂದ ರಸ್ತೆಗೆ ಅನುದಾನ ಮಂಜೂರು ಮಾಡಲು ಶಾಸಕರು, ಸಂಸದರಿಗೆ, ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಮಾಡಿದ್ದೇವೆ. ಡಾ.ರವಿ ಭಟ್ಟ ಬರಗದ್ದೆ, ಬಿಸಗೋಡ ಗ್ರಾಮಸ್ಥ