

ಮುಂಡಗೋಡ: ಟಿಬೆಟಿಯನ್ ಕ್ಯಾಂಪ್ ನಂ. 6ರಿಂದ ಹುನಗುಂದ ಗ್ರಾಮದವರೆಗೆ ಸಂಚಾರಕ್ಕೆ ಸಂಚಕಾರ ತಂದೊಡ್ಡುತ್ತಿದ್ದ ರಸ್ತೆ ಯಲ್ಲಿನ ಹೊಂಡ-ಗುಂಡಿಗಳನ್ನು ಮಂಗಳವಾರ ಗ್ರಾಮಸ್ಥರೇ ಮುಚ್ಚಿದ್ದಾರೆ.
ರಸ್ತೆಯುದ್ದಕ್ಕೂ ದೊಡ್ಡ ಪ್ರಮಾಣದ ಹೊಂಡಗಳು ಬಿದ್ದಿರುವ ಕಾರಣ ಎರಡು ದಿನಗಳಿಂದ ಹುನಗುಂದ ಗ್ರಾಮದ ಮೂಲಕ ಮುಂಡಗೋಡ-ಕಲಘಟಗಿ ಪಟ್ಟಣಕ್ಕೆ ಸಂಚರಿಸುತ್ತಿದ್ದ ಬಸ್ಗಳು ಬರುತ್ತಿರಲಿಲ್ಲ. ಇದರಿಂದ ಶಾಲೆ-ಕಾಲೇಜ್ ವಿದ್ಯಾರ್ಥಿಗಳು, ಪ್ರಯಾಣಿಕರು ತೀವ್ರ ತೊಂದರೆ ಅನುಭವಿಸಬೇಕಾಗಿತ್ತು. ಇದನ್ನು ಮನಗಂಡ ಗ್ರಾಮ ಪಂಚಾಯಿತಿ ಅಧ್ಯಕ್ಷ ಹಾಗೂ ಸದಸ್ಯರು ಗ್ರಾಮಸ್ಥರ ಜೊತೆಗೂಡಿ ಹೊಂಡ-ಗುಂಡಿಗಳಿಗೆ ಕಲ್ಲು, ಮಣ್ಣು ಹಾಕಿ ಮುಚ್ಚಿ ಬಸ್ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಇದರಿಂದ ಮುಂಡಗೋಡ-ಕಳಘಟಗಿ ಪಟ್ಟಣಕ್ಕೆ ಬಸ್ ಸಂಚಾರ ಶುರುವಾಗಿದೆ. ರಸ್ತೆಯಲ್ಲಿನ ಗುಂಡಿಗೆ ಮಣ್ಣು ಕಲ್ಲು ಹಾಕಿ ಮುಚ್ಚಿದ ಗ್ರಾಮಸ್ಥರ ಕಾರ್ಯಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.