

ಲಕ್ಷ್ಮೇಶ್ವರ: ಕೈಗಾ-ಇಳಕಲ್ ರಾಜ್ಯ ಹೆದ್ದಾರಿಯಲ್ಲಿ ಗೊಜನೂರ ಗ್ರಾಮದ ಹತ್ತಿರ ನಿರ್ಮಿಸಿರುವ ಅವೈಜ್ಞಾನಿಕ ರೋಡ್ ಹಂಪ್ಸ್‌ಗಳಿಂದ ನಿತ್ಯ ತೊಂದರೆ, ಅನಾಹುತ ಅನುಭವಿಸಿ ಬೇಸತ್ತಿದ್ದ ಗ್ರಾಮಸ್ಥರು ಬುಧವಾರ ಸ್ವತಃ ರೋಡ್ ಹಂಪ್ಸ್‌ಗಳನ್ನು ಜೆಸಿಬಿಯಿಂದ ತೆರವುಗೊಳಿಸಿದರು.
ಗ್ರಾಮದ ಎರಡೂ ಬದಿ ಅವೈಜ್ಞಾನಿಕವಾಗಿ ಹಾಕಿದ್ದ ರೋಡ್ ಬ್ರೇಕರ್‌ನಿಂದ ಅನಾಹುತಗಳಾಗುತ್ತಿರುವ ಬಗ್ಗೆ ಪಿಡಬ್ಲುೃಡಿ ಇಲಾಖೆ ಮತ್ತು ಜನಪ್ರತಿನಿಧಿಗಳಿಗೆ ಹಲವಾರು ಸಲ ಹೇಳಿದರೂ ಪ್ರಯೋಜವಾಗಿರಲಿಲ್ಲ. ನಿತ್ಯ ಹತ್ತಾರು ಅನಾಹುತಗಳು ಕಣ್ಣೆದುರೇ ಸಂಭವಿಸುತ್ತಿರುವುದನ್ನು ಕಂಡು ಗ್ರಾಮಸ್ಥರು ಬೇಸತ್ತಿದ್ದರು.
ಸೋಮವಾರ ಬೈಕ್ ಚಕ್ರದಡಿ ಸಿಲುಕಿ ಹಸುಗೂಸೊಂದು ಮೃತಪಟ್ಟ ಹಿನ್ನೆಲೆಯಲ್ಲಿ ಗ್ರಾಮಸ್ಥರೇ ರೋಡ್ ಹಂಪ್ಸ್ ತೆರವುಗೊಳಿಸಿದರು.
ಯರೆಬೂದಿಹಾಳ ಗ್ರಾಮದ ಬೈಕ್ ಸವಾರನೊಬ್ಬ ಮಹಿಳೆ ಹಾಗೂ ಹಸುಗೂಸಿನೊಂದಿಗೆ ಹೋಗುತ್ತಿರುವಾಗ ರೋಡ್‌ಬ್ರೇಕ್ ನೋಡಿ ಬೈಕ್ ನಿಲ್ಲಿಸಲು ಪ್ರಯತ್ನಿಸಿದ್ದನು. ಅಷ್ಟರ‌್ಲಲಾಗಲೇ ಮಹಿಳೆ ನೆಲಕ್ಕೆ ಬಿದ್ದು ಕೂಸು ಚಕ್ರದಡಿ ಸಿಲುಕಿ ಅಸ್ವಸ್ಥಗೊಂಡಿತ್ತು.
ಮಗುವನ್ನು ಕೂಡಲೇ ಲಕ್ಷ್ಮೇಶ್ವರ ಆಸ್ಪತ್ರೆಗೆ ಕರೆದುಕೊಂಡು ಹೋಗುವಷ್ಟರಲ್ಲೇ ಮೃತಪಟ್ಟಿತ್ತು. ‘ಈ ಅನಾಹುತಕ್ಕೆ ಅಧಿಕಾರಿಗಳೇ ಹೊಣೆಯಾಗಿದ್ದಾರೆ. ಇಂತಹ ಅನೇಕ ಅವೈಜ್ಞಾನಿಕ ರೋಡ್‌ಬ್ರೇಕ್‌ರಗಳನ್ನು ಕೂಡಲೇ ತೆರವುಗೊಳಿಸಬೇಕು’ ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.