ಸಿಎಂ ಸಿದ್ದರಾಮಯ್ಯ ತವರು ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ಬಹಿಷ್ಕಾರ ಹಾಕಿದ ಗ್ರಾಮಸ್ಥರು

Villagers boycott Congress in CM Siddaramaiah's home constituency
Published on

ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿನಿಧಿಸುತ್ತಿರುವ ವರುಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ನಗರ್ಲೆ ಗ್ರಾಮದ ದಲಿತ ಸಮುದಾ ಯದ ಮುಖಂಡರು ‘ಕಾಂಗ್ರೆಸ್ ನಾಯಕರಿಗೆ ಗ್ರಾಮಕ್ಕೆ ನಿಷೇಧಿಸಲಾಗಿದೆ’ ಎಂಬ ಫ್ಲೆಕ್ಸ್‌ಅನ್ನು ಗ್ರಾಮದಲ್ಲಿ ಹಾಕಿದ್ದು, ಇದು ಕಾಂಗ್ರೆಸ್ ನಾಯಕರನ್ನು ಮುಜುಗರಕ್ಕೀಡು ಮಾಡಿದೆ.

ಗ್ರಾಮದಲ್ಲಿ ಅಂಬೇಡ್ಕರ್ ಪ್ರತಿಮೆ ನಿರ್ಮಾಣ ಮಾಡಲಾಗುವುದು ಎಂದು ಚುನಾವಣೆ ಸಂದರ್ಭ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಭರವಸೆ ನೀಡಿದ್ದರು. ಆದರೆ, ಅವರು ಕೊಟ್ಟ ಮಾತಿನಂತೆ ನಡೆದು ಕೊಂಡಿಲ್ಲ. ವಿಧಾನ ಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ಪ್ರತಿಮೆ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿದ್ದರು. ನಂತರ 3 ಲಕ್ಷ ರೂ.ವೆಚ್ಚದಲ್ಲಿ ಬೇಸ್‌ಮೆಂಟ್ ನಿರ್ಮಾಣ ಮಾಡಲಾಗಿದೆ. ಉಳಿದ ಕಾಮಗಾರಿಗೆ 20 ಲಕ್ಷ ರೂ. ಅವಶ್ಯಕತೆ ಇದ್ದು, ಅನುದಾನ ನೀಡಿಲ್ಲ. ಹೀಗಾಗಿ ಪ್ರತಿಮೆ ನಿರ್ಮಾಣ ಕಾಮಗಾರಿ ಅರ್ಧಕ್ಕೆ ನಿಂತಿದೆ ಎಂದು ಗ್ರಾಮಸ್ಥರು ಅಸಮಾಧಾನ ಹೊರಹಾಕಿದ್ದಾರೆ.

ಇದೀಗ ಪ್ರತಿಮೆ ನಿರ್ಮಾಣಕ್ಕೆ ಕೇವಲ 3 ಲಕ್ಷ ರೂ. ನೀಡುತ್ತೇನೆ ಎಂದು ಮುಖ್ಯಮಂತ್ರಿ ಆಪ್ತರಾದ ಸಿ.ಟಿ. ಕುಮಾರ್ ಹೇಳುತ್ತಿದ್ದಾರೆ. 3 ಲಕ್ಷ ರೂ. ಮೊತ್ತದಲ್ಲಿ ಕಾಮಗಾರಿ ಪೂರ್ಣಗೊಳಿಸಲು ಸಾಧ್ಯವೇ? ಕಾಂಗ್ರೆಸ್ ನಾಯಕರು ಕೊಟ್ಟ ಮಾತಿಗೆ ತಪ್ಪಿ ನಡೆದಿದ್ದಾರೆ. ಹಾಗಾಗಿ ಯಾವುದೇ ಕಾಂಗ್ರೆಸ್ ನಾಯಕರು ಗ್ರಾಮಕ್ಕೆ ಪ್ರವೇಶಿಸುವುದು ಬೇಡ ಎಂದು ಗ್ರಾಮಸ್ಥರು ಫ್ಲೆಕ್ಸ್ ಹಾಕಿದ್ದಾರೆ. ‘ನಗರ್ಲೆ ಗ್ರಾಮದ ಕಾಂಗ್ರೆಸ್ ಮುಖಂಡರು ಕೈಲಾಗದವರು. ಆದ ಕಾರಣ ಯಾವುದೇ ಕಾಂಗ್ರೆಸ್ ಮುಖಂಡರನ್ನು ಗ್ರಾಮಕ್ಕೆ ನಿಷೇಧಿಸಲಾಗಿದೆ’ ಎಂದು ಫ್ಲೆಕ್ಸ್ ಹಾಕಲಾಗಿದೆ. ಈ ಫ್ಲೆಕ್ಸ್ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ.

ಸಿದ್ದರಾಮಯ್ಯ ಕಾಲೆಳೆದ ಬಿಜೆಪಿ

ನಗರ್ಲೆ ಗ್ರಾಮಕ್ಕೆ ಕಾಂಗ್ರೆಸ್ ಮುಖಂಡರ ಪ್ರವೇಶಕ್ಕೆ ನಿಷೇಧ ಹೇರಿರುವ ವಿಚಾರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಬಿಜೆಪಿ ತೀವ್ರವಾಗಿ ಟೀಕಿಸಿದೆ. ‘ಸಿಎಂ ಸಿದ್ದರಾಮಯ್ಯ ತವರು ಕ್ಷೇತ್ರ ವರುಣಾ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮಗಳಲ್ಲಿಯೇ ಕಾಂಗ್ರೆಸ್‌ಗೆ ನೋ ಎಂಟ್ರಿಯಾಗಿದೆ. ಅಭಿವೃದ್ಧಿಗೆ ಅನುದಾನ ನೀಡದ ಕಾಂಗ್ರೆಸ್ ಸರ್ಕಾರದ ವಿರುದ್ಧ ಕ್ಷೇತ್ರದ ಜನರು ಸಿಡಿದೆದ್ದಿದ್ದಾರೆ. ಈ ಹಿನ್ನೆಲೆಯ್ಲಲಿ ಕಾಂಗ್ರೆಸ್ ನಾಯಕರು ಗ್ರಾಮಕ್ಕೆ ಕಾಲಿಡಬೇಡಿ ಎಂದು ಫ್ಲೆಕ್ಸ್ ಹಾಕಿಸಿದ್ದಾರೆ. ಸಿದ್ದರಾಮಯ್ಯ ಅವರೇ, ನಿಮ್ಮ ಆಡಳಿತ ಹೇಗಿದೆ ಎಂಬುದರ ರಿಯಾಲಿಟಿ ಚೆಕ್ ಮಾಡಬೇಕೆಂದರೆ, ನೀವೊಮ್ಮೆ ವರುಣಾ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ನಗರ್ಲೆ ಗ್ರಾಮಕ್ಕೆ ಕಾಲಿಡಲೇಬೇಕು’ ಎಂದು ‘ಬಿಜೆಪಿ ಕರ್ನಾಟಕ’ ಫೇಸ್‌ಬುಕ್ ಪೇಜ್‌ನಲ್ಲಿ ಸಿದ್ದರಾಮಯ್ಯ ಅವ್ರ ಕಾಲೆಳೆಯಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net