ಕಾಡಾನೆಗಳ ದಾಳಿಗೆ ಗ್ರಾಮಸ್ಥರ ಹೈರಾಣ

5..npk -3
Published on

ನಾಪೋಕ್ಲು : ಚೈಯಂಡಾಣೆ ನರಿಯಂಡಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಲವು ಗ್ರಾಮಗಳಲ್ಲಿ ಕಾಡಾನೆಗಳ ಉಪಟಳಕ್ಕೆ ಗ್ರಾಮಸ್ಥರು ಹೈರಾಣಾಗಿದ್ದಾರೆ.
ಕಾಡಿನಿಂದ ಆಗಾಗ್ಗೆ ಲಗ್ಗೆ ಇಡುವ ಕಾಡಾನೆಗಳು ಫಸಲು ತುಳಿದು, ಬೆಳೆಗಳನ್ನು ತಿಂದು ರೈತರಿಗೆ ನಷ್ಟ ಉಂಟು ಮಾಡುತ್ತಿವೆ. ಆನೆ ಉಪಟಳವನ್ನು ನಿಯಂತ್ರಿಸದ ಅರಣ್ಯ ಇಲಾಖೆ ವಿರುದ್ಧ ಗ್ರಾಮಸ್ಥರು ಪ್ರತಿಭಟನೆಗೆ ಮುಂದಾಗಿದ್ದಾರೆ.


ಚೈಯಂಡಾಣೆ ನರಿಯಂದಡ ಗ್ರಾಮ ಪಂಚಾಯತಿ ವ್ಯಾಪ್ತಿಯ ಚೆಯ್ಯಂಡಾಣೆ, ನರಿಯಂದಡ, ಚೇಲಾವರ, ಕೋಕೇರಿ ಗ್ರಾಮಗಳಲ್ಲಿ ಕಾಡಾನೆಗಳ ಹಾವಳಿ ನಿರಂತರವಾಗಿದೆ. ತೋಟಗಳಲ್ಲಿ ಬೆಳೆಸಿಲಾದ ಅಡಿಕೆ, ಕಾಫಿ, ಬಾಳೆ ಗಿಡಗಳನ್ನು ನಾಶಪಡಿಸಿವೆ.ಇಲ್ಲಿನ ಸುಮಾರು 2 ಎಕರೆ ಕೃಷಿ ಪ್ರದೇಶದಲ್ಲಿ ನಷ್ಟ ಉಂಟಾಗಿದೆ ಎಂದು ಗ್ರಾಮಸ್ಥರು ದೂರಿದ್ದಾರೆ. ಕಾಡಾನೆಗಳ ಹಿಂಡು ಈ ಭಾಗದ ತೋಟಗಳಲ್ಲಿ ಬೀಡು ಬಿಟ್ಟಿವೆ. ಅರಣ್ಯ ಇಲಾಖೆಯ ಸಿಬ್ಬಂದಿ ಕಾಡಾನೆಗಳನ್ನು ಕಾಡಿಗಟ್ಟುವ ಕಾರ್ಯಚರಣೆ ಮಾಡಲು ಮುಂದಾಗಿದ್ದು ಕಾಡಾನೆಗಳು ಸಿಬ್ಬಂದಿಗಳ ಕಣ್ತಪ್ಪಿಸಿ ಪದೇ ಪದೆ ದಾಳಿ ಮಾಡಿ ತೊಂದರೆ ನೀಡುತ್ತಿವೆ ಎಂದು ನರಿಯಂದಡ ಗ್ರಾಮಸ್ಥ ಪೊಕ್ಕೋಳಂಡ್ರ ಧನೋಜ್ ಅಳಲು ತೋಡಿಕೊಂಡರು.


ಈ ಬಗ್ಗೆ ಅರಣ್ಯ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕು. ಕಾಡಾನೆಗಳನ್ನು ಕಾಡಿಗೆ ಅಟ್ಟುವುದರೊಂದಿಗೆ ಶಾಶ್ವತ ಪರಿಹಾರಕ್ಕೆ ಚಿಂತನೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ. ಇನ್ನು ಬೆಳೆ ಹಾನಿ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಡಿಎಫ್‌ಒ ಜಗನ್ನಾಥ್ ಕಾಡಾನೆಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಾಗುವುದು. ಸಾರ್ವಜನಿಕರು ಪ್ರತಿಭಟನೆ ಕೈ ಬಿಟ್ಟು ಸಹಕರಿಸಬೇಕು ಎಂದು ಮನವಿ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net