ಅಕ್ರಮ ಮದ್ಯ ಮಾರಾಟಕ್ಕೆ ಗ್ರಾಮಸ್ಥರ ಆಕ್ರೋಶ

2 vikram 3
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ತಾಲೂಕಿನ ಹೊಲ್ತಿಕೋಟಿ ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟದಿಂದ ರೋಸಿ ಹೋಗಿರುವ ಗ್ರಾಮಸ್ಥರು ಅಂಗಡಿಕಾರರನ್ನು ತರಾಟೆಗೆ ತೆಗೆದುಕೊಂಡ ಘಟನೆ ಇತ್ತೀಚೆಗೆ ನಡೆದಿದೆ.

ಧಾರವಾಡದಿಂದ ಸುಮಾರು 24 ಕಿಮೀ ದೂರದಲ್ಲಿರುವ ಹೊಲ್ತಿಕೋಟಿ ಗ್ರಾಮದಲ್ಲಿ ಮದ್ಯದ ಅಂಗಡಿ ಇಲ್ಲದ್ದನ್ನೇ ಬಂಡವಾಳ ಮಾಡಿಕೊಂಡು ಗ್ರಾಮದ ಬಹುತೇಕ ಅಂಗಡಿಕಾರರು ಅಕ್ರಮ ಮದ್ಯ ಮಾರಾಟಕ್ಕೆ ಮುಂದಾಗಿದ್ದಾರೆ. ಇದರಿಂದ ಸಾಕಷ್ಟು ಯುವಕರು ಕುಡಿತದ ಚಟಕ್ಕೆ ದಾಸರಾಗಿ ದುಡಿಯಲು ಹೋಗದಂತಹ ಸ್ಥಿತಿ ನಿರ್ಮಾಣವಾಗಿದೆ. ಇದೇ ಕಾರಣಕ್ಕೆ ಮಹಿಳೆಯರು ಅಕ್ರಮ ಮದ್ಯ ಮಾರಾಟಗಾರರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಗ್ರಾಮದ ಕಿರಾಣಿ ಅಂಗಡಿ ಸೇರಿ ಎಲ್ಲೆಡೆ ಅಕ್ರಮ ಮದ್ಯ ಮಾರಾಟ ಆರಂಭವಾಗಿದ್ದು, ಮದ್ಯ ಪ್ರಿಯರ ಸಂಖ್ಯೆಯೂ ಹೆಚ್ಚಿದೆ. ಇಷ್ಟು ದಿನಗಳ ಕಾಲ ಮದ್ಯ ಕಾಟ ಇಲ್ಲದ ಗ್ರಾಮದಲ್ಲಿ ಎಲ್ಲೆಂದರಲ್ಲಿ ಅದೂ ಅಂಗವಾಡಿ, ಶಾಲೆ, ದೇವಸ್ಥಾನ ಹೀಗೆ ಎಲ್ಲ ಕಡೆಗಳಲ್ಲಿ ಮದ್ಯದ ಪಾಕೆಟ್​ಗಳೇ ರಾರಾಜಿಸುತ್ತಿವೆ. ಮದ್ಯ ಕುಡಿದು ಬಿಸಾಡಿದ ಪ್ಯಾಕೆಟ್​ಗಳನ್ನು ಶಾಲೆ ವಿದ್ಯಾರ್ಥಿಗಳು ಹಾಗೂ ದೇವಸ್ಥಾನಕ್ಕೆ ಬರುವ ಭಕ್ತರು ಆರಿಸುವಂತಾಗಿದೆ ಎಂದು ಗ್ರಾಮಸ್ಥರು ಬೇಸರ ವ್ಯಕ್ತಪಡಿಸಿದ್ದಾರೆ.

ಮದ್ಯ ಸೇವನೆ ವಿರುದ್ಧ ಹರಿಹಾಯುವ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್​ ಕ್ಷೇತ್ರದಲ್ಲೇ ಈ ಗ್ರಾಮವಿದ್ದು, ಅಬಕಾರಿ ಇಲಾಖೆ ಅಧಿಕಾರಿಗಳು ಈವರೆಗೂ ಯಾವುದೇ ಕ್ರಮಕೈಗೊಂಡಿಲ್ಲ. ಮದ್ಯ ಮಾರಾಟ ಮಾಡುತ್ತಿದ್ದ ಅಂಗಡಿಗಳಿಗೆ ಹೋಗಿ ಎಚ್ಚರಿಕೆ ನೀಡಿದರೂ ಕೇಳುತ್ತಿಲ್ಲ. ಇದೇ ರೀತಿ ಅಕ್ರಮ ಮದ್ಯ ಮಾರಾಟ ಮುಂದುವರೆದರೆ ಅಂಗಡಿಗಳಿಗೆ ಹೊಕ್ಕು ಹೊಡೆದು ಬುದ್ಧಿ ಕಲಿಸಬೇಕಾಗುತ್ತದೆ ಎಂದು ಗ್ರಾಮದ ಮಹಿಳೆಯರು ಎಚ್ಚರಿಸಿದ್ದಾರೆ.

ಗ್ರಾಮದಲ್ಲಿನ ಬಹುತೇಕ ಯುವಕರು ಮದ್ಯದ ದಾಸರಾಗಿದ್ದಾರೆ. ಇತ್ತೀಚಿನ ದಿನಗಳಲ್ಲಿ ಮಕ್ಕಳು ಸಹ ಮದ್ಯ ಸೇವನೆಯಲ್ಲಿ ತೊಡಗಿದ್ದಾರೆ. ಇದರಿಂದ ಪಾಲಕರು ತೀವ್ರ ಆತಂಕಕ್ಕೊಳಗಾಗಿದ್ದಾರೆ. ಗ್ರಾಮದಲ್ಲಿ ನಿತ್ಯ ಹೊಸ ಹೊಸ ಮದ್ಯ ವ್ಯಸನಿಗಳು ಹುಟ್ಟಿಕೊಳ್ಳುತ್ತಿದ್ದಾರೆ. ಅಬಕಾರಿ ಇಲಾಖೆ ಹಾಗೂ ಪೊಲೀಸರು ಕೂಡಲೇ ಅಕ್ರಮ ಮದ್ಯ ಮಾರಾಟಗಾರ ವಿರುದ್ಧ ಕ್ರಮಕ್ಕೆ ಮುಂದಾಗಬೇಕು ಎಂದು ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net