

ಹೊಳೆನರಸೀಪುರ : ತಾಲೂಕಿನ ಹಳ್ಳಿಮೈಸೂರು ಹೋಬಳಿಯ ನಗರನಹಳ್ಳಿ ಹಾಗೂ ಮೂಡಲ ಮಾಯಿಗೌಡನಹಳ್ಳಿ ಗ್ರಾಮದಲ್ಲಿ ಜಾನುವಾರುಗಳನ್ನು ಕಳವು ಮಾಡಿ ಪರಾರಿಯಾಗಲು ಯತ್ನಿಸಿದ ಮೂವರು ಕಳ್ಳರನ್ನು ಗ್ರಾಮದ ಜನರೇ ಅಟ್ಟಾಡಿಸಿ ಹಿಡಿದು ಕಂಬಕ್ಕೆ ಕಟ್ಟಿ ಪೊಲೀಸರಿಗೆ ಒಪ್ಪಿಸಿದ್ದಾರೆ.
ಸಾಲಿಗ್ರಾಮ ತಾಲೂಕಿನ ಭೇರ್ಯ ಗ್ರಾಮದ ಮೊಹಮ್ಮದ್ ಶಫಿ, ಜಬಿವುಲ್ಲಾ ಮತ್ತು ಪುನೀತ್ ಗ್ರಾಮಸ್ಥರ ಕೈಗೆ ಸಿಕ್ಕಿಬಿದ್ದವರು. ಮಂಗಳವಾರ ತಡರಾತ್ರಿ ಗೂಡ್ಸ್ ವಾಹನದಲ್ಲಿ ಮೂಡಲಮಾಯಿಗೌಡನ ಹಳ್ಳಿಯಲ್ಲಿ ಜಾನುವಾರುಗಳನ್ನು ಕಳವು ಮಾಡಿಕೊಂಡು ನಗರನಹಳ್ಳಿ ಗ್ರಾಮದಲ್ಲಿ ಎಮ್ಮೆಗಳನ್ನು ಕಳವು ಮಾಡುವ ವೇಳೆ ಗ್ರಾಮಸ್ಥರ ಕೈಗೆ ಸಿಕ್ಕಿಬಿದ್ದಾರೆ. ಗ್ರಾಮಸ್ಥರು ಮೂವರನ್ನು ಕಂಬಕ್ಕೆ ಕಟ್ಟಿ ಚೆನ್ನಾಗಿ ಥಳಿಸಿ ನಂತರ ಪೊಲೀಸರಿಗೆ ಒಪ್ಪಿಸಿದ್ದಾರೆ.
ಆರೋಪಿಗಳ ಜತೆ ಪಿಎಸ್‌ಐ ನಂಟು : ಸ್ಥಳಕ್ಕೆ ಆಗಮಿಸಿದ ಹಳ್ಳಿಮೈಸೂರು ಪೊಲೀಸರು ಮೂವರನ್ನು ವಶಕ್ಕೆ ಪಡೆದರು. ಇದಕ್ಕೆ ಒಪ್ಪದ ಗ್ರಾಮಸ್ಥರು ಈ ಹಿಂದೆ ಇದೇ ರೀತಿ ಕಳವು ಪ್ರಕರಣಗಳನ್ನು ಹಿಡಿದು ಪಿಎಸ್‌ಐ ಸಲ್ಮಾನ್ ಅವರಿಗೆ ಒಪ್ಪಿಸಿದ್ದರೂ ಸಹ ಆರೋಪಿಗಳ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಇಂತಹ ಪ್ರಕರಣಗಳು ಮರುಕಳಿಸಲು ಕಾರಣವಾಗಿದೆ ಎಂದು ಪಿಎಸ್‌ಐ ವಿರುದ್ಧ ಘೋಷಣೆ ಕೂಗಿದರು. ಅಲ್ಲದೆ ಸ್ಥಳಕ್ಕೆ ಪಿಎಸ್‌ಐ ಸಲ್ಮಾನ್ ಅವರನ್ನು ಕರೆಯಿಸಿ ನಮ್ಮೇದುರೇ ಅವರ ವಿಚಾರಣೆ ಮಾಡಬೇಕೆಂದು ಪಟ್ಟು ಹಿಡಿದರು. ಪರಿಸ್ಥಿತಿ ಅರಿತ ಪೊಲೀಸರು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ತಮ್ಮಯ್ಯ ಹಾಗೂ ಪ್ರೊಬೇಷನರಿ ಐಪಿಎಸ್ ಅಧಿಕಾರಿ ಶಾಲು ಅವರಿಗೆ ವಿಷಯ ಮುಟ್ಟಿಸಿದರು. ಸ್ಥಳಕ್ಕೆ ಆಗಮಿಸಿದ ಇಬ್ಬರು ಅಧಿಕಾರಿಗಳಿಗೆ ಗ್ರಾಮಸ್ಥರು ಪಿಎಸ್‌ಐ ಸನ್ಮಾನ್ ವಿರುದ್ಧ ದೂರಿನ ಸುರಿಮಳೆಯನ್ನೇ ಸುರಿಸಿದರು. ಈ ವೇಳೆ ಗ್ರಾಮಸ್ಥರನ್ನು ಸಮಾಧಾನ ಪಡಿಸಿದ ಅಧಿಕಾರಿಗಳು, ಪಿಎಸ್‌ಐ ಸಲ್ಮಾನ್ ಅವರುನ್ನು ಸುತ್ತೂರು ಜಾತ್ರೆಗೆ ನಿಯೋಜಿಸಲಾಗಿದ್ದು, ಜತ್ರೆ ಮುಗಿದ ಬಳಿಕ ಅವರನ್ನು ವಿಚಾರಣೆಗೆ ಒಳಪಡಿಸಿ ಅವರ ವಿರುದ್ಧ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದ ನಂತರ ಪ್ರತಿಭಟನೆ ಕೈಬಿಟ್ಟರು.