ಗ್ರಾಮಲೆಕ್ಕಿಗನ ವಿರುದ್ಧ ಕ್ರಮ ಕೈಗೊಳ್ಳಿ

25ckd1-Web
ಗ್ರಾಮಲೆಕ್ಕಾಧಿಕಾರಿ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ರೈತ ಸಂಘ, ಹಸಿರು ಸೇನೆ ಬೆಳಗಾವಿ ಜಿಲ್ಲಾ ಘಟಕದ ಪದಾಧಿಕಾರಿಗಳು ಗುರುವಾರ ಎಸಿಗೆ ಮನವಿ ಸಲ್ಲಿಸಿದರು. ತ್ಯಾಗರಾಜ ಕದಂ, ಗಂಪತಿ ಈಳಗೇರ, ಭೀಮಶಿ ಗದಾಡಿ ಇತರರು ಇದ್ದರು.
Published on

ಚಿಕ್ಕೋಡಿ: ವಾರಸಾ ಬದಲಾವಣೆಗೆ ಲಂಚ ಕೊಡದಿದ್ದರೆ ನಿನ್ನ ವಿರುದ್ಧ ಕೇಸ್ ಹಾಕುವುದಾಗಿ ರೈತನಿಗೆ ಎಚ್ಚರಿಕೆ ನೀಡಿದ್ದ ಬೆಳಕೂಡ ಗ್ರಾಮಲೆಕ್ಕಾಧಿಕಾರಿ ಎಸ್.ವಿ.ಪಾಟೀಲ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ರೈತ ಸಂಘ ಮತ್ತು ಹಸಿರು ಸೇನೆ ಬೆಳಗಾವಿ ಜಿಲ್ಲಾ ಘಟಕದ ಪದಾಧಿಕಾರಿಗಳು ಗುರುವಾರ ಉಪವಿಭಾಗಾಧಿಕಾರಿ ಯುಕೇಶಕುಮಾರ ಅವರಿಗೆ ಮನವಿ ಸಲ್ಲಿಸಿ, ಆಗ್ರಹಿಸಿದರು.

ಪಟ್ಟಣದ ಪ್ರವಾಸಿ ಮಂದಿರದಿಂದ ಪ್ರತಿಭಟನಾ ಮೆರವಣಿಗೆ ಆರಂಭಿಸಿದ ರೈತರು ಮಿನಿವಿಧಾನ ಸೌಧದ ಎದುರು ಪ್ರತಿಭಟನೆ ನಡೆಸಿ ಸರ್ಕಾರ ರೈತ ವಿರೋಧಿ ಕಾನುನೂಗಳನ್ನು ತಕ್ಷಣ ರದ್ದು ಪಡಿಸಬೇಕು ಎಂದು ಆಗ್ರಹಿಸಿದರು.

ಬೆಳಕೂಡ ಗ್ರಾಮದ ಆನಂದ ಬಸವಣ್ಣಿ ಪಾಶ್ಚಾಪುರೆ ಎಂಬ ರೈತ ಮುಖಂಡ ಕೃಷಿ ಭೂಮಿಯ ವಾರಸಾ ಬದಲಾವಣೆ ಮಾಡಲು ಗ್ರಾಮಲೆಕ್ಕಾಧಿಕಾರಿ ಬಳಿ ಕೇಳಿಕೊಂಡಿದ್ದ. ಇದಕ್ಕೆ ಒಪ್ಪಿದ್ದ ಪಾಟೀಲ 2,000 ರೂ. ಲಂಚಕ್ಕೆ ಬೇಡಿಕೆ ಇಟ್ಟು 500 ರೂ. ಮುಂಗಡ ಹಣ ಪಡೆದಿದ್ದ. ಬಾಕಿ ಹಣ ನೀಡಲು ರೈತ ತಡಮಾಡಿದ ಕಾರಣ ಆತನ ವಿರುದ್ಧ ಕೇಸ್ ಹಾಕುವುದಾಗಿ ಪಾಟೀಲ ಎಚ್ಚರಿಕೆ ನೀಡಿದ್ದ. ನಿನ್ನ ಕೆಲಸ ನಾನು ಮಾಡಿಕೊಳ್ಳವುದಿಲ್ಲ. ನೀನು ಏನು ಬೇಕಾದರೂ ಮಾಡಿಕೋ ಎಂದು ಉತ್ತರ ನೀಡಿದ್ದ ಎಂದು ರೈತ ಆನಂದ ದೂರಿದ್ದಾರೆ.

ಬೇಡಿಕೆ ಈಡೇರಿಕೆಗೆ ಆಗ್ರಹ: ರೈತ ಮುಖಂಡ ಟೇಕಾಯಿತ ಅವರು ಶಿವಮೊಗ್ಗದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದಕ್ಕೆ ಅವರ ವಿರುದ್ಧ ಪ್ರಕರಣ ದಾಖಲಿಸಿದ್ದು, ಅದನ್ನು ಸರ್ಕಾರ ಕೂಡಲೇ ಹಿಂಪಡೆಯಬೇಕು. ಹೆಸ್ಕಾಂ, ಕೃಷಿ ಹಾಗೂ ಬ್ಯಾಂಕ್‌ಗಳು ರೈತರಿಗೆ ಬಾಕಿ ಪಾವತಿಗೆ ಕಿರುಕುಳು ನೀಡುತ್ತಿವೆ. ಕಿರುಕುಳಕ್ಕೆ ಬ್ರೇಕ್ ಹಾಕಬೇಕು. ಕೇಂದ್ರ ಸರ್ಕಾರ ಜಾರಿಗೊಳಿಸಿರುವ ರೈತ ವಿರೋಧಿ ಕಾಯ್ದೆ ರದ್ದುಗೊಳಿಸಬೇಕು. ನೆರೆ ಸಂತ್ರಸ್ತರಿಗೆ ಸರ್ಕಾರದಿಂದ ಬರಬೇಕಾದ ಅನುದಾನ ಸಿಗುವಂತೆ ನೋಡಿಕೊಳ್ಳಬೇಕು. ಕಾರ್ಖಾನೆಗಳು ಉಳಿಸಿಕೊಂಡಿರುವ ಕಬ್ಬಿನ ಬಾಕಿ ಪಾವತಿಗೆ ಶೀಘ್ರ ಕ್ರಮ ವಹಿಸಬೇಕು ಎಂದು ರೈತರು ಆಗ್ರಹಿಸಿದರು.

ಸಂಘದ ವಕ್ತಾರ ತ್ಯಾಗರಾಜ ಕದಂ, ರಾಜ್ಯ ಸಂಚಾಲಕ ಗಂಪತಿ ಈಳಗೇರ, ರಾಜ್ಯ ಪ್ರಧಾನ ಕಾರ್ಯದರ್ಶಿ ಭೀಮಶಿ ಗದಾಡಿ, ಜಿಲ್ಲಾಧ್ಯಕ್ಷ ಸತ್ಯಪ್ಪ ಮಲ್ಲಾಪುರೆ, ಮಹಾದೇವ ಮಡಿವಾಳ, ರವೀಂದ್ರ ಪಟ್ಟೇಗಾರ, ರಂಗನಾಥ ಪಾಂಡ್ರಿ, ಬಾಬು ಹಿರೇಮಠ, ಶಂಕರ ಮದಿಹಳ್ಳಿ, ಗುರುನಾಥ ಹೆಗಡೆ, ಲಕ್ಷ್ಮಣ ಹೊಸಟ್ಟಿ, ಹನುಮಂತ ಹನುಮಣ್ಣವರ ಇದ್ದರು.

ರೈತರ ಬೇಡಿಕೆಗಳನ್ನು ಸರ್ಕಾರದ ಗಮನಕ್ಕೆ ತರಲಾಗುವುದು. ಬೆಳಕೂಡ ಗ್ರಾಪಂ ಗ್ರಾಮ ಲೆಕ್ಕಾಧಿಕಾರಿ ಪ್ರಕರಣವನ್ನು ತಹಸೀಲ್ದಾರ್ ಮೂಲಕ ಮಾಹಿತಿ ಪಡೆದು ಬಗೆಹರಿಸಲಾಗುವುದು.| ಯುಕೇಶಕುಮಾರ ಎಸ್. ಎಸಿ ಚಿಕ್ಕೋಡಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net