ಸಮೃದ್ಧಿಗಾಗಿ ಊರು ತೊರೆದ ಜನರು

dj clk upparahatti
Published on

ಕೊರಲಕುಂಟೆ ತಿಪ್ಪೇಸ್ವಾಮಿ ಚಳ್ಳಕೆರೆ
ತಾಲೂಕಿನ ಡಿ.ಉಪ್ಪಾರಹಟ್ಟಿ ಗ್ರಾಮಸ್ಥರು ಪೂರ್ವಜರ ಆಚರಣಾ ಪದ್ಧತಿ ಅನುಸರಣೆಯಂತೆ ಗ್ರಾಮದ ಪೆಟ್ಟಿಗೆ ದೇವರುಗಳಾದ ರಂಗಪ್ಪ, ತಿಮ್ಮಪ್ಪ, ಜುಂಜಪ್ಪರನ್ನು ಹೊತ್ತು ಶನಿವಾರ ಹೊರಬೀಡು ತೆರಳಿ, ಗ್ರಾಮ ಹಿತ ಮತ್ತು ಉತ್ತಮ ಮಳೆ-ಬೆಳೆಗಾಗಿ ಪ್ರಾರ್ಥಿಸಿದರು.

ಗ್ರಾಮದಲ್ಲಿ ಒಂದು ವಾರ ಮುಂಚಿತವಾಗಿ ಹಿರಿಯರು ಚರ್ಚೆ ಮೂಲಕ ನಿಗದಿಪಡಿಸಿದ ದಿನಕ್ಕೆ ಸರಿಯಾಗಿ ಪ್ರತಿ ಕುಟುಂಬದವರು ಮನೆಯಲ್ಲಿ ನೆಲಕರಣೆ ಮಾಡಿ, ಒಂದು ದಿನದ ಅಡುಗೆ ಸಾಮಗ್ರಿಗಳನ್ನು ಸಿದ್ಧಪಡಿಸಿಕೊಂಡು ಮನೆಯಲ್ಲಿನ ಕುರಿ, ಕೋಳಿ, ಮೇಕೆ ಜಾನುವಾರುಗಳ ಸಹಿತ ಊರ ಹೊರಭಾಗಕ್ಕೆ ಹೋಗುವ ಹಬ್ಬ ಬಹಳ ವಿಶೇಷ.

ಅಡುಗೆ ಪರಿಕರಗಳನ್ನು ಬಿದಿರು ಬುಟ್ಟಿಗಳಿಗೆ ತುಂಬಿಕೊಂಡು ಊರಲ್ಲಿ ಒಬ್ಬರೂ ಉಳಿಯದಂತೆ ಬೆಳಗ್ಗೆ 10 ಗಂಟೆಗೆ ಗ್ರಾಮ ದೇವತೆಗಳ ಮುಂದೆ ಗೋಪೂಜೆ ಸಲ್ಲಿಸಿ, ಊರು ತೊರೆದರು. ದಿನವಿಡೀ ಗ್ರಾಮಕ್ಕೆ ಯಾರೂ ಪ್ರವೇಶ ಮಾಡದಂತೆ ಗ್ರಾಮ ಪ್ರವೇಶಿಸುವ ದಾರಿಗಳಿಗೆ ಮುಳ್ಳು ಬೇಲಿ ಹಾಕಿ, ಕಾವಲು ಇರಿಸಲಾಗಿತ್ತು.

ಗ್ರಾಮದ ಹೊರವಲಯ ಹಸಿರು ಗಿಡಗಳ ಬಳಿ ಬೀಡುಬಿಟ್ಟ ಗ್ರಾಮಸ್ಥರು, ಸಮೀಪದ ಹೊಳೆದಂಡೆಯಲ್ಲಿ ಗ್ರಾಮದ ರಂಗಪ್ಪ, ತಿಮ್ಮಪ್ಪ, ಜುಂಜಪ್ಪ ದೇವರುಗಳಿಗೆ ಗಂಗಾ ಪೂಜೆ ನೆರವೇರಿಸಿ ಬಳಿಕ ಕರಿ ಕಂಬಳಿ ಗದ್ದುಗೆ ಹಾಕಿ 101 ಎಡೆ ಇರಿಸಿ, ಸಿಹಿ ಪದಾರ್ಥಗಳ ನೈವೇದ್ಯ ಅರ್ಪಿಸಿದರು.

ಗ್ರಾಮದಲ್ಲಿನ ಜನ-ಜಾನುವಾರುಗಳಿಗೆ ಯಾವುದೇ ರೋಗ-ರುಜಿನಗಳು ಬಾರದಿರಲಿ, ಉತ್ತಮ ಮಳೆ-ಬೆಳೆಯಿಂದ ಸಕಲ ಜೀವ ಸಂಕುಲಕ್ಕೆ ಸಮೃದ್ಧ ಭಾಗ್ಯ ಕರುಣಿಸು ಎಂದು ಪ್ರಾರ್ಥಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು.

ಹೊರಬೀಡು ಪದ್ಧತಿ ಪ್ರತಿ ಶ್ರಾವಣದಲ್ಲಿ ಆಚರಿಸುತ್ತೇವೆ. ಗ್ರಾಮದ ಶಾಂತಿ, ನೆಮ್ಮದಿ ಮತ್ತು ಉತ್ತಮ ಮಳೆ-ಬೆಳೆಗೆ ದೇವರುಗಳ ಪೂಜಾ ಕಾರ್ಯಗಳೊಂದಿಗೆ ಹೊಲಗದ್ದೆಗಳಿಗೆ ಬಂದು ಅಡುಗೆ ಮಾಡಿಕೊಂಡು ಒಂದು ದಿನ ಊರ ಹೊರಗೆ ಉಳಿಯುತ್ತೇವೆ. ಸಿಹಿ ಅಡುಗೆ ಮಾಡಿ ದೇವರುಗಳಿಗೆ ಅರ್ಪಿಸಿ, ಪೂಜೆ ಬಳಿಕ ಊಟ ಮಾಡುತ್ತೇವೆ. ಸಂಜೆ ಗ್ರಾಮಕ್ಕೆ ತೆರಳಿ ಊರ ಸುತ್ತ ಮುಸುರೆ ಹಾಕಿ ಮನೆಗಳನ್ನು ಪ್ರವೇಶಿಸುತ್ತೇವೆ.ಸಿ.ಚಿಕ್ಕಣ್ಣ, ಉಪ್ಪಾರಹಟ್ಟಿ ಗ್ರಾಮಸ್ಥಕೃಷಿಕರಲ್ಲಿ ಹೊಲದ ದೇವರು ಆಚರಿಸುವ ಪದ್ಧತಿ ರೂಢಿಯಲ್ಲಿತ್ತು. ಇತ್ತೀಚಿನ ದಿನಗಳಲ್ಲಿ ಮಳೆಯ ಕೊರತೆಯಿಂದ ಹೊಲದ ಫಸಲುಗಳ ಸಂಭ್ರಮ ಕಾಣುತ್ತಿಲ್ಲ. ಒಳ್ಳೆಯ ಫಸಲಿಗಾಗಿ ಮಳೆಯನ್ನು ಕರುಣಿಸಲಿ ಎಂದು ಹೋಳಿಗೆಮ್ಮ, ಹೊರಬೀಡು ಆಚರಣೆ ವೇಳೆ ಪ್ರಾರ್ಥಿಸುವುದು ವಿಶೇಷ.ಡಾ.ಸಿ.ಶಿವಲಿಂಗಪ್ಪ, ನಿವೃತ್ತ ಪ್ರಾಚಾರ್ಯ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net