ಗುಡುಗಳಲೆ ಜಾತ್ರೆಗೆ ಜೀವ ತುಂಬಿದ ಹಳ್ಳಿಕಾರ್

4ss1hallikar
ಹಳ್ಳಿಕಾರ್ ಎತ್ತುಗಳು.
Published on

ಶನಿವಾರಸಂತೆ: ಜನವರಿ 22ರಿಂದ ಪ್ರಾರಂಭವಾಗಿರುವ ಇತಿಹಾಸ ಪ್ರಸಿದ್ಧ 81ನೇ ವರ್ಷದ ಗುಡುಗಳಲೆ ಜಯದೇವ ಜಾನುವಾರುಗಳ ಜಾತ್ರೆ ಇದೇ ಫೆ.7ರ ಶುಕ್ರವಾರ ಮುಕ್ತಾಯವಾಗಲಿದೆ. ಜಾನುವಾರು ಜಾತ್ರೆ ಎಂದೇ ಫೇಮಸ್ ಆಗಿರುವ ಜಾತ್ರೆಯಲ್ಲಿ ಈ ಬಾರಿ ಜಾನುವಾರುಗಳಿಲ್ಲದೇ ಕಳೆಗುಂದಿತ್ತು.

ಕೃಷಿ ಚಟುವಟಿಕೆಗಳಿಗಾಗಿ ಜಾನುವಾರುಗಳ ಖರೀದಿಸಲು ಹಾಗೂ ಮಾರಾಟ ಮಾಡಲು ಈ ಜಾತ್ರೆ ರೈತರಿಗೆ ಸೂಕ್ತ ವೇದಿಕೆಯಾಗಿತ್ತು. ಹಾಗಾಗಿ 30 ದಿನಗಳ ಕಾಲ ನಡೆಯುತ್ತಿತ್ತು. ಆದರೆ, ಇತ್ತೀಚೆಗೆ ಜಾನುವಾರುಗಳ ಸಾಕಣೆ ಕಡಿಮೆಯಾಗುತ್ತಿರುವ ಕಾರಣ ಕೇವಲ 15ರಿಂದ 17 ದಿನಕ್ಕೆ ಸೀಮಿತವಾಗಿದೆ.

ಜಾತ್ರೆಯೇ ಮುಗಿಯುವ ದಿನ ಹತ್ತಿರ ಬಂದರೂ ಈ ಬಾರಿ ಅಷ್ಟಾಗಿ ಜಾನುವಾರುಗಳು ಆಗಮಿಸಿಲ್ಲ. ಜಾನುವಾರುಗಳಿಗಿಂತ ಬರೀ ಜನರೇ ಸೇರಿದ್ದು ಜಾತ್ರಾ ಸಮಿತಿಯ ಬೇಸರಕ್ಕೆ ಕಾರಣವಾಗಿತ್ತು. ಆದರೆ 12 ದಿನ ನಂತರ ಸೋಮವಾರದ ಜಾತ್ರೆಗೆ ಹಳ್ಳಿಕಾರ್ ಹಾಗೂ ನಾಟಿ ತಳಿಗಳ ಹಸು, ಎತ್ತುಗಳ ಆಗಮನದಿಂದ ಜಾನುವಾರು ಜಾತ್ರೆಗೆ ಹೊಸ ಕಳೆ ಬಂದಿದೆ.

ಈ ಹಿಂದೆ ಗುಡುಗಳಲೆ ಜಯದೇವ ಜಾನುವಾರುಗಳ ಜಾತ್ರೆಯಲ್ಲಿ ಸಾವಿರಾರು ಜಾನುವಾರು ಸೇರುತ್ತಿದ್ದವು. ಆದರೆ ಈಗ ಜಾನುವಾರು ಸಾಕಣೆ ಕಡಿಮೆಯಾಗುತ್ತಿದೆ. ಜಾನುವಾರುಗಳು ಹಾಗೂ ಜಾತ್ರೆಯ ವೈಶಿಷ್ಟೃ ಕಳೆಗುಂದಬಾರದು ಎಂದು ಶನಿವಾರಸಂತೆ ಜೈ ಹಳ್ಳಿಕಾರ್ ಯುವ ತಂಡ ರಾಸುಗಳ ಸಾಕಣೆ ಮಾಡೋರನ್ನು ಸಂಪರ್ಕಿಸಿತು. ಅದರಂತೆ ಚನ್ನರಾಯಪಟ್ಟಣದ ಜೆನಿವಾರ ಗ್ರಾಮದ ಹಳ್ಳಿಕಾರ್ ತಳಿಯ ಎತ್ತುಗಳನ್ನು ಸಾಕುತ್ತಿರುವ ರೈತ ಸಂತೋಷ್ ಅವರನ್ನು ಭೇಟಿ ಮಾಡಿತು. ಗುಡುಗಳಲೆ ಜಯದೇವ ಜಾನುವಾರು ಜಾತ್ರೆಗೆ ಹಳ್ಳಿಕಾರ್ ಎತ್ತುಗಳನ್ನು ತಂದು ಪ್ರದರ್ಶನ ಹಾಗೂ ಮಾರಾಟಕ್ಕೆ ಮನವಿ ಮಾಡಿದರು. ಅದರಂತೆ ಸಂತೋಷ್ ಹಾಗೂ ಅವರ ಜತೆಗಾರರು ಆರು ಜತೆ ಹಳ್ಳಿಕಾರ್ ಎತ್ತುಗಳನ್ನು ಜಾತ್ರೆಗೆ ತಂದಿದ್ದಾರೆ. ಶನಿವಾರಸಂತೆ ಕೆಆರ್‌ಸಿ ವೃತ್ತದಲ್ಲಿ ಹಳ್ಳಿಕಾರ್ ಎತ್ತುಗಳನ್ನ ಜಾತ್ರಾ ಸಮಿತಿ ಸ್ವಾಗತಿಸಿದೆ. ಬಳಿಕ ಗುಡುಗಳಲೆ ಜಾತ್ರಾ ಮೈದಾನದವರೆಗೆ ಮೆರವಣಿಗೆ ಮೂಲಕ ಎತ್ತುಗಳನ್ನು ಕರೆ ತಂದಿದ್ದಾರೆ.

ಹಳ್ಳಿಕಾರ್ ಎತ್ತುಗಳ ಜತೆ ನಾಟಿ ಹಸುಗಳು, ಎಚ್‌ಎಫ್ ತಳಿ, ಗಿರ್ ಲ್ಯಾಡ್ ತಳಿ ಆಗಮನದಿಂದ ಜಾತ್ರೆಗೆ ಹೆಚ್ಚಿನ ಕಳೆ ಬಂದಿದೆ. ಈಗ ಬಂದಿರುವ ಹಳ್ಳಿಕಾರ್ ತಳಿ ಎತ್ತುಗಳ ಒಂದು ಜೋಡಿಗೆ 2.5 ಲಕ್ಷ ರೂ.ನಿಂದ 7.50 ಲಕ್ಷ ರೂ ಬೆಲೆ ಬಾಳಲಿದೆ. ಇದರಲ್ಲಿ 4 ವರ್ಷದ 7.50 ಲಕ್ಷ ರೂ.ಗಳ ಹಳ್ಳಿಕಾರ್ ಜೋಡಿಗೆ ವ್ಯಾಪಾರಿಗಳು 6 ಲಕ್ಷ ರೂ.ಗೆ ಕೇಳುತ್ತಿದ್ದರೂ ಮಾಲೀಕರು ಒಪ್ಪುತ್ತಿಲ್ಲ. 6.10 ಲಕ್ಷ ರೂ.ಬೆಲೆ ಬಾಳುವ 2 ವರ್ಷದ ಹಾಲು ಹಲ್ಲಿನ ಜೋಡಿ ಎತ್ತಿಗೆ ವ್ಯಾಪಾರಿಗಳು 5.10 ಲಕ್ಷ ರೂ.ಗೆ ಕೇಳುತ್ತಿದ್ದರೂ ಮಾರಾಟಕ್ಕೆ ಮಾಲೀಕರು ಒಪ್ಪುತ್ತಿಲ್ಲ. ಈಗ ಹಳ್ಳಿಕಾರ್ ಎತ್ತುಗಳನ್ನು ನೋಡಲು ರೈತರು, ಸಾರ್ವಜನಿಕರು ಜಾತ್ರೆಗೆ ಬರುತ್ತಿದ್ದಾರೆ. ಸೋಮವಾರ ರಾತ್ರಿ 5 ಸಾವಿರಕ್ಕಿಂತ ಹೆಚ್ಚಿನ ಜನರು ಹಳ್ಳಿಕಾರ್ ಎತ್ತುಗಳ ಮಧ್ಯ ನಿಂತುಕೊಂಡು ಸೆಲ್ಫಿ ತೆಗೆದುಕೊಂಡಿದ್ದಾರೆ.

 ಜಾನುವಾರುಗಳಿಗೆ ಪ್ರಖ್ಯಾತಿ ಪಡೆದಿದ್ದ ಗುಡುಗಳಲೆ ಜಾತ್ರೆ ಇತ್ತೀಚಿನ ವರ್ಷಗಳಲ್ಲಿ ಜಾನುವಾರುಗಳಿಲ್ಲದೆ ಕ್ಷೀಣಿಸುತ್ತಿದೆ. ಜನರಲ್ಲಿ ಮತ್ತು ರೈತರಲ್ಲಿ ಹಳ್ಳಿಕಾರ್ ಎತ್ತುಗಳ ಸಾಕಣೆ ಬಗ್ಗೆ ಅರಿವು ಇಲ್ಲ. ಜಾತ್ರೆಗೆ ಹಿಂದಿನ ವೈಭವ ಮರುಕಳಿಸುವ ಸಲುವಾಗಿ ಶನಿವಾರಸಂತೆ ಜೈ ಹಳ್ಳಿಕಾರ್ ಯುವ ತಂಡದವರೆಲ್ಲರೂ ಚನ್ನರಾಯಪಟ್ಟಣದ ಹಳ್ಳಿಕಾರ್ ಎತ್ತುಗಳ ಸಾಕಣೆದಾರರನ್ನು ಸಂಪರ್ಕಿಸಿ ಜಾತ್ರೆಗೆ ಹಳ್ಳಿಕರ್ ಎತ್ತುಗಳನ್ನು ತರುವಂತೆ ಮನವಿ ಮಾಡಲಾಯಿತು. ಮುಂದಿನ ಜಾತ್ರೆಯಲ್ಲಿ ಹಳ್ಳಿಕಾರ್ ಶೀರ್ಷಿಕೆ ಮುಂದುವರೆಯುತ್ತದೆ.

-ಮಹೇಂದ್ರ , ರೈತ, ಕೆರಳ್ಳಿ ಗ್ರಾಮ,

ಕರ್ನಾಟಕದಲ್ಲಿ ಹಳ್ಳಿಕಾರ್ ತಳಿಯ ಎತ್ತುಗಳು ತನ್ನದೇ ಆದ ಮಹತ್ವ ಪಡೆದಿದೆ. ಹಳ್ಳಿಕಾರ್ ಎತ್ತುಗಳ ಸಂತತಿ ವೃದ್ಧಿಯಾಗಬೇಕು. ರೈತರ ವ್ಯವಸಹಾಯಕ್ಕೆ ಯೋಗ್ಯವಾದ ಎತ್ತುಗಳಾಗಿರುವುದರಿಂದ ಈ ತಳಿಗೆ ಹೆಚ್ಚಿನ ಬೇಡಿಕೆ ಇದೆ. ಈಗ ನಾವು ಈ ಜಾತ್ರೆಗೆ ತಂದಿರುವ ಜೋಡಿ ಎತ್ತಿಗೆ 2.5 ಲಕ್ಷ ರೂ.ಯಿಂದ 7.50 ಲಕ್ಷ ವರೆಗೆ ಬೆಲೆ ಇದೆ.

-ಸಂತೋಷ್, ಹಳ್ಳಿಕಾರ್ ಎತ್ತು ಸಾಕಣೆದಾರ ರೈತ, ಜೆನಿವಾರ, ಚನ್ನರಾಯಪಟ್ಟಣ

ನಾನು 45 ವರ್ಷಗಳಿಂದ ಈ ಜಾತ್ರೆಗೆ ಜಾನುವಾರುಗಳನ್ನು ಕಟ್ಟುತ್ತಿದ್ದೇನೆ. ಆದರೆ ಮೂರು ನಾಲ್ಕು ವರ್ಷಗಳಿಂದ ಜಾತ್ರೆಯಲ್ಲಿ ಜಾನುವಾರುಗಳು ಸೇರುವುದು ಕಮ್ಮಿಯಾಗುತ್ತಿದೆ.

-ನಟರಾಜ್, ಹಿರಿಯ ರೈತ, ರಾಯರಕೊಪ್ಪಲು ಗ್ರಾಮ

ಜಾತ್ರೆಯನ್ನು ಆಕರ್ಷಿಸಲು ಹಲವು ವ್ಯವಸ್ಥೆ ಮಾಡಿರುವುದರಿಂದ ರಾತ್ರಿಯಲ್ಲಿ ಜನರು ಹೆಚ್ಚಿನ ಜನರು ಬರುತ್ತಿದ್ದಾರೆ. ಆದ್ರೆ, ಜಾನುವಾರುಗಳನ್ನು ಕರೆತರಬೇಕು. ಇದರಿಂದ ರೈತರಿಗೆ ಅನುಕೂಲವಾಗಲಿದೆ.

-ವೀರೇಂದ್ರಕುಮಾರ್, ಕಾರ್ಯದರ್ಶಿ, ಜಾತ್ರಾ ಸಮಿತಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net