ಬಾಗಲಿ ಗ್ರಾಮಕ್ಕೆ ಬೇಕಿದೆ ಕಾಯಕಲ್ಪ

MAR16-HRP-1a
ಬಾಗಳಿ ಗ್ರಾಮದ ಬಸ್ ನಿಲ್ದಾಣದ ಸಮೀಪ ಕುಡಿಯುವ ನೀರು ತೆಗೆದುಕೊಂಡು ಹೋಗುತ್ತಿರುವ ಗ್ರಾಮಸ್ಥರು.
Published on

ಕರಿಬಸಪ್ಪ ಪರಶೆಟ್ಟಿ ಹರಪನಹಳ್ಳಿ
ವಿಜಯನಗರ ಸಾಮ್ರಾಜ್ಯದ ಹೆಬ್ಬಾಗಿಲಾಗಿದ್ದ ಬಾಗಳಿ ಗ್ರಾಮ ತಾಲೂಕು ಕೇಂದ್ರದಿಂದ ಉತ್ತರಕ್ಕೆ 8 ಕಿ.ಮೀ.ದೂರದಲ್ಲಿದ್ದು, 5954 ಸಾವಿರ ಜನಸಂಖ್ಯೆ ಹೊಂದಿದೆ. ಐತಿಹಾಸಿಕ ಮಹತ್ವವನ್ನು ಹೊಂದಿರುವ ಇಲ್ಲಿ ಮೂಲಸೌಕರ್ಯಗಳ ಕೊರತೆಯಿದೆ.

ಗ್ರಾಪಂ ಕೂಡ ಆಗಿರುವ ಇಲ್ಲಿ 9 ಜನ ಚುನಾಯಿತ ಸದಸ್ಯರಿದ್ದಾರೆ. 1 ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, 1 ಅನುದಾನಿತ ಖಾಸಗಿ ಶಾಲೆ, 1 ಅನುದಾನಿತ ಪ್ರೌಢಶಾಲೆ ಹಾಗೂ 3 ಅಂಗನವಾಡಿ ಕೇಂದ್ರಗಳಿವೆ. ವಿಎಸ್‌ಎಸ್‌ಎನ್, ನ್ಯಾಯಬೆಲೆ ಅಂಗಡಿ, ಗ್ರಾಪಂ ಕಚೇರಿ, ಪಶು ಆಸ್ಪತ್ರೆ, ಪ್ರಾಥಮಿಕ ಆರೋಗ್ಯ ಕೇಂದ್ರ ಇವೆ.
ಹಿಂದಿನಷ್ಟು ನೀರಿನ ಸಮಸ್ಯೆ ಇಲ್ಲವಾದರೂ ನಿರ್ವಹಣೆ ಸರಿಯಾಗಿಲ್ಲ ಎಂಬ ಆರೋಪವಿದೆ. 6 ಕೊಳವೆ ಬಾವಿಗಳು ಚಾಲ್ತಿಯದ್ದು, 3 ದುರಸ್ಥಿಗೆ ಬಂದಿವೆ. 3 ಓವರ್‌ಹೆಡ್‌ಟ್ಯಾಂಕ್ ಇದ್ದರೂ 2 ಟ್ಯಾಂಕ್‌ಗಳು ಗ್ರಾಪಂಗೆ ಹಸ್ತಾಂತರವಾಗಿಲ್ಲ. ನದಿ ನೀರು ಗ್ರಾಮಕ್ಕೆ ಸರಿಯಾಗಿ ಬರುತ್ತಿಲ್ಲ. ಬಸ್ ನಿಲ್ದಾಣದ ಬಳಿ ಇರುವ ನೀರು ಉತ್ತಮವಾಗಿದೆ. ಕೆಲ ಕಡೆ ನೀರು ವ್ಯರ್ಥವಾಗಿ ಹರಿದು ಹೋಗುತ್ತಿದೆ. ಜೆ.ಜೆ.ಎಂ.ಕಾಮಗಾರಿ ಪ್ರಗತಿಯಲ್ಲಿದೆ. ವಾರ್ಡ್‌ಗಳಲ್ಲಿ ಸುಸಜ್ಜಿತ ಚರಂಡಿಗಳಿಲ್ಲ. ಅನೇಕ ಕಡೆ ಅವೈಜ್ಞಾನಿವಾದ ಗಟಾರಗಳೇ ಹೆಚ್ಚು. ಕೆಲ ಕಡೆಗಳಲ್ಲಿ ಚರಂಡಿಗಳಿದ್ದರೂ ಹೂಳು ತುಂಬಿದೆ. ಕೆಲ ಚರಂಡಿಗಳು ಚಿಕ್ಕದಾಗಿದ್ದರಿಂದ ಕೊಚ್ಚೆ ನೀರು ರಸ್ತೆ ಮೇಲೆ ಹರಿಯುತ್ತಿವೆ.

ಬಾಗಳಿ ಗ್ರಾಮದ ಬುಧವಾರದ ಸಂತೆ ಮಾರುಕಟ್ಟೆ.
ಬಾಗಳಿ ಗ್ರಾಮದ ಬುಧವಾರದ ಸಂತೆ ಮಾರುಕಟ್ಟೆ.

ಈ ಊರಿಗಿದೆ ಐತಿಹಾಸಿಕ ಹಿನ್ನೆಲೆ
ರಾಜ್ಯದ ಹೆಸರಾಂತ ಅರಸರಾದ ಗಂಗರು, ರಾಷ್ಟ್ರಕೂಟರು, ಕಲ್ಯಾಣಿ ಚಾಲುಕ್ಯರು, ಕಲಚೂರಿಗಳು, ಹೊಯ್ಸಳರು, ಯಾದವರು, ವಿಜಯನಗರ ದೊರೆಗಳ ಆಳ್ವಿಕೆಗೆ ಒಳಪಟ್ಟ ಗ್ರಾಮ ಇದಾಗಿದೆ. ಪ್ರಾಚೀನ ಕಾಲದ ದೊಡ್ಡ ಪಟ್ಟಣವೂ ಮಹಾ ಅಗ್ರಹಾರವೂ ಆಗಿದ್ದ ಈ ಗ್ರಾಮ ವಿಜಯನಗರದ ನಂತರ ಅಸ್ಥಿತ್ವಕ್ಕೆ ಬಂದ ಹರಪನಹಳ್ಳಿ ಪಾಳೆಯಗಾರರು ಬಾಗಳಿ ಗ್ರಾಮದವರೇ. ಮರುಳಸಿದ್ಧ ಕಾವ್ಯ ರಚಿಸಿದ ದೇವಕವಿಯು ಬಾಗಳಿ ಗ್ರಾಮದವನು. ಇಲ್ಲಿನ ಅನೇಕ ಐತಿಹಾಸಿಕ ದೇಗುಲಗಳಿವೆ.

ಕೆರೆಯಲ್ಲಿ ಹೂಳು, ಜಾಲಿಗಿಡ
350ಕ್ಕೂ ಅಧಿಕ ಹೆಕ್ಟೇರ್ ಪ್ರದೇಶದಲ್ಲಿರುವ ಐತಿಹಾಸಿಕ ಕೆರೆಯಲ್ಲಿ ಸಾಕಷ್ಟು ಹೂಳು ತುಂಬಿದೆ. ಇದರಿಂದಾಗಿ ಕೆರೆ ಬೇಗನೆ ಭರ್ತಿಯಾಗುತ್ತಿದೆ. ಕೆರೆಯ ಅಂಗಳದಲ್ಲಿ ಜಾಲಿ ಬೆಳೆಯುತ್ತಿದ್ದು, ಜಲಜರಗಳಿಗೆ, ಪಕ್ಷಿಗಳಿಗೆ ಮಾರಕವಾಗುತ್ತಿದೆ. ಕೆರೆ ನೀರು ಖಾಲಿಯಾದಾಗ ರೈತರು ಇದರ ಫಲವತ್ತಾದ ಮಣ್ಣನ್ನು ಹೊಲ-ಗದ್ದೆಗಳಿಗೆ ಬಳಕೆ ಮಾಡಿಕೊಳ್ಳುತ್ತಾರೆ. ನೂರಾರು ಎಕರೆ ಕೃಷಿ ಭೂಮಿಗೆ ನೀರೊದಗಿಸುವ ಕೆರೆಗೆ ಕೊಳಚೆ ನೀರು ಸೇರುತ್ತಿರುವುದರಿಂದ ಕೆರೆಯ ನೀರು ಕೂಡ ಕಲುಷಿತವಾಗುತ್ತಿದೆ.

ಬಾಗಳಿ ಗ್ರಾಮದ ಪ್ರಮುಖ ರಸ್ತೆಯ ಮೇಲೆ ಹರಿಯುತ್ತಿರುವ ಚರಂಡಿ ನೀರು.
ಬಾಗಳಿ ಗ್ರಾಮದ ಪ್ರಮುಖ ರಸ್ತೆಯ ಮೇಲೆ ಹರಿಯುತ್ತಿರುವ ಚರಂಡಿ ನೀರು.


ಇದ್ದೂ ಇಲ್ಲದಂತಿರುವ ಗ್ರಂಥಾಲಯ
ಸರ್ಕಾರಿ ಶಾಲಾವರಣದಲ್ಲಿ ಗ್ರಂಥಾಲಯದ ಸ್ವಂತ ಕಟ್ಟಡ ಶಿಥಿಲಗೊಂಡಿದೆ. ಹಳೇ ಗ್ರಾಪಂ ಕಟ್ಟಡದ ಕೊಠಡಿಗೆ ಸ್ಥಳಾಂತರಿಸಲಾಗಿದೆ. ಅದು ಸಹ ಶಿಥಿಲಗೊಂಡು ಮಳೆಗಾಲದಲ್ಲಿ ಸೋರುತ್ತಿದೆ. ಕುರ್ಚಿಗಳು ಹಾಕಲು ಸ್ಥಳವಿಲ್ಲ. 4300ಕ್ಕೂ ಅದಿಕ ಪುಸ್ತಕಗಳನ್ನು ಇನ್ನೊಂದು ಕಟ್ಟಡದಲ್ಲಿ ಇಡಲಾಗಿದೆ. ಪಿಠೋಪಕರಣಗಳ ಕೊರತೆಯಿದೆ. ಕಟ್ಟಡ ನಿರ್ಮಾಣಕ್ಕೆ ಬಂದ ಅನುದಾನ ಸ್ಥಳಾವಕಾಶ ಸಿಗದ ಕಾರಣ ಬೇರೊಂದು ಗ್ರಾಪಂ ಪಾಲಾಗಿದೆ.

ಸ್ಮಶಾನ ಅಭಿವೃದ್ಧಿಯಾಗಲಿ
ಗ್ರಾಮದ ಹೊರಗೆ ರಾಮಕಟ್ಟಿಹಳ್ಳದ ಬಳಿ ಸ್ಮಶಾನ ಇದೆ. ಆದರೆ, ಮೂಲ ಸೌಕರ್ಯಗಳಿಲ್ಲ. ಜಾಲಿ ಬೆಳದಿದ್ದು, ಶವಗಳನ್ನು ಹೂಳಿದ ಜಾಗದಲ್ಲೇ ಹೂಳುವ ಸ್ಥಿತಿ ಇದೆ. ಕೆಲವು ಸಮುದಾಯಗಳ ಸ್ಮಶಾನಕ್ಕೆ ಸ್ಥಳಾವಕಾಶ ಇಲ್ಲದಂತಾಗಿದೆ. ಸ್ಮಶಾನಕ್ಕೆ ಸ್ಥಳ ನೀಡಿ, ಅಭಿವೃದ್ಧಿಪಡಿಸುವುದು ಅಗತ್ಯವಾಗಿದೆ.

ಬಾಗಳಿ ಗ್ರಾಮದ ಕೆರೆಗೆ ಚರಂಡಿ ನೀರು ಸೇರುತ್ತಿರುವುದು.
ಬಾಗಳಿ ಗ್ರಾಮದ ಕೆರೆಗೆ ಚರಂಡಿ ನೀರು ಸೇರುತ್ತಿರುವುದು.


ಆಸ್ಪತ್ರೆಗೆ ಇಲ್ಲ ಕಾಂಪೌಂಡ್
ಬಾಗಳಿಯಿಂದ ಚಿಕ್ಕಹಳ್ಳಿ ಸಂಪರ್ಕಿಸುವ ರಸ್ತೆಗೆ ಹೊಂದಿಕೊಂಡ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಾಯಂ ವೈದ್ಯರಿಲ್ಲ. ಸುತ್ತಲಿನ ಗ್ರಾಮಗಳು ಇದರ ಸದುಪಯೋಗ ಪಡೆಯುತ್ತಿವೆ. ಆದರೆ, ಹಗಲು ಮಾತ್ರ ಸೇವೆ ಲಭ್ಯವಿದ್ದು, ಪ್ರಾಥಮಿಕ ಚಿಕಿತ್ಸೆಗೆ ಸೀಮಿತವಾಗಿದೆ. ರಾತ್ರಿ ತುರ್ತು ಪರಿಸ್ಥಿತಿ ಎದುರಾದರೆ, ಪಟ್ಟಣಕ್ಕೆ ಹೋಗುವುದು ಅನಿವಾರ್ಯ. ಎರಡು ಎಕರೆ ಜಾಗದಲ್ಲಿ ಆಸ್ಪತ್ರೆ ನಿರ್ಮಾಣಗೊಂಡಿದೆ. ಕಾಂಪೌಂಡ್ ಇಲ್ಲದ ಭದ್ರತೆ ಕೊರತೆ ಕಾಡುತ್ತಿದೆ.

ನಿರ್ಲಕ್ಷ್ಯಕ್ಕೊಒಳಗಾದ ಪುರಾತನ ದೇಗುಲಗಳು
ಐತಿಹಾಸಿಕ ದೇವಾಲಯಗಳು ಇಲ್ಲಿದ್ದು, ನಿರ್ವಹಣೆಯಿಲ್ಲದೇ ಪಾಳು ಬಿದ್ದಿವೆ. ಕೆರೆಯ ಅಂಚಿನ ಚನ್ನಬಸವೇಶ್ವರ ದೇವಸ್ಥಾನ ಕುಸಿಯುವ ಸ್ಥಿತಿಯಲ್ಲಿದೆ. ಗಿಡಗಳು ಗುಡಿಯನ್ನು ಅವರಿಸಿಕೊಂಡಿವೆ. ಸಂಗನಬಸವೇಶ್ವರ ದೇಗುಲ ಹೊರನೋಟದಲ್ಲಿ ಚಪ್ಪಟೆಯಾಗಿದ್ದರೂ ಒಳಗೆ ಸುಂದರವಾದ ಕೆತ್ತನೆಯಿವೆ. ಕಟ್ಟಡ ಶಿಥಿಲಗೊಂಡಿದ್ದರಿಂದ ಲಕ್ಷ್ಮೀ ನರಸಿಂಹ ದೇವಸ್ಥಾನ, ಹೊರವಲಯದ ಮಳೆ ಮಲ್ಲಪ್ಪ ದೇವಸ್ಥಾನ ಮೊದಲಾದವುಗಳ ಜೀಣೋದ್ಧಾರದ ಅಗತ್ಯವಿದೆ. ಶ್ರೀ ಕಲ್ಲೇಶ್ವರ ದೇವಸ್ಥಾನ ಅತ್ಯಂತ ಪುರಾತನವಾದದ್ದು. ವಿಮಾನ ಆಕಾರದಲ್ಲಿರುವ ಇದನ್ನು ಕರ್ನಾಟಕದ ಖಜುರಾಹೋ ಎನ್ನುತ್ತಾರೆ. ಸೂಕ್ಷ,್ಮಸುಂದರ ಕೆತ್ತನೆಗಳು ಇಲ್ಲಿವೆ. ನಿತ್ಯ ನೂರಾರು ಪ್ರವಾಸಿಗರು ವೀಕ್ಷಣೆಗೆ ಬರುತ್ತಾರೆ. ಪುರಾತತ್ವ ಇಲಾಖೆ ನಿರ್ವಹಣೆಯಲ್ಲಿರುವ ಇಲ್ಲಿ ಬೆಳಕಿನ ವ್ಯವಸ್ಥೆ ಮಾಡಬೇಕಿದೆ. ತಾಲೂಕಿನಲ್ಲಿ ಪ್ರಾಚಿವಸ್ತು ಸಂಗ್ರಾಹಲಯವಿದ್ದು, ಇನ್ನೂ ಉದ್ಘಾಟನೆಯಾಗಿಲ್ಲ.

ಬಾಗಳಿ ಗ್ರಾಮದ ವಾರ್ಡವೊಂದರಲ್ಲಿ ರಸ್ತೆ, ಚರಂಡಿ ಒಂದಾಗಿರುವುದು.
ಬಾಗಳಿ ಗ್ರಾಮದ ವಾರ್ಡವೊಂದರಲ್ಲಿ ರಸ್ತೆ, ಚರಂಡಿ ಒಂದಾಗಿರುವುದು.

ನಾಟಿ ಔಷಧಕ್ಕೆ ಪ್ರಸಿದ್ಧಿ
ನಾಟಿ ಔಷಧಕ್ಕೆ ಈ ಗ್ರಾಮ ಪ್ರಸಿದ್ಧಿ. ಬಡಮ್ಮನವರ ಕೆಂಚಪ್ಪನವರ ಮತ್ತವರ ಕುಟುಂಬ ಕೀಲು-ಮೂಳೆಗೆ ಮುರಿತಕ್ಕೆ ಕೊಡುವ ನಾಟಿ ಔಷಧ ಬಹಳ ಪ್ರಸಿದ್ಧಿ. ಇದೂ ಸೇರಿ ಅನೇಕ ನಾಟಿ ಔಷಧ ಕೇಂದ್ರಗಳಿದ್ದು, ಜಿಲ್ಲೆ ಮತ್ತು ವಿವಿಧ ಜಿಲ್ಲೆಗಳಿಂದ ನಾಟಿ ಚಿಕಿತ್ಸೆಗಾಗಿ ಜನ ಗ್ರಾಮಕ್ಕೆ ಆಗಮಿಸುತ್ತಾರೆ.

ಊರಲ್ಲಿ ಸ್ವಚ್ಛತೆ ಅಷ್ಟಕಷ್ಟೆ
ಗ್ರಾಪಂ ಕಚೇರಿಯಲ್ಲಿ 6 ಕಾಯಂ ನೌಕರರಿದ್ದು, 4 ಜನ ಅರೆ ಕಾಲಿಕ ಮತ್ತು ಒಬ್ಬ ಪೌರಕಾರ್ಮಿಕರಿದ್ದಾರೆ. ಸ್ವಚ್ಛತೆ ಅಷ್ಟಕ್ಕಷ್ಟೆ. ಕಸ ಸಂಗ್ರಹಣೆಯ ವಾಹನ ಇದೆಯಾದರೂ ವಾಹನ ಚಾಲಕನಿಲ್ಲ. ಹೀಗಾಗಿ ಅದು ಬಳಕೆಯಿಲ್ಲದಂತಾಗಿದೆ. ಸಾರ್ವಜನಿಕರು ಕಸದ ಬುಟ್ಟಿ ಪಡೆದಿದ್ದರಾದರೂ ಬಳಕೆ ಮಾಡುತ್ತಿಲ್ಲ.

ಬಾಗಳಿ ಗ್ರಾಮದ ಸರ್ಕಾರಿ ಶಾಲಾ ಕಟ್ಟಡ ಕಾಮಗಾರಿ ಸ್ಥಗಿತಗೊಂಡಿರುವುದು.
ಬಾಗಳಿ ಗ್ರಾಮದ ಸರ್ಕಾರಿ ಶಾಲಾ ಕಟ್ಟಡ ಕಾಮಗಾರಿ ಸ್ಥಗಿತಗೊಂಡಿರುವುದು.

ಶಾಲೆಗೆ ಬೇಕು ಸೌಕರ್ಯ
ಸರ್ಕಾರಿ ಪ್ರಾಥಮಿಕ ಶಾಲೆಯಿದ್ದು, 1ರಿಂದ 7ನೇ ತರಗತಿವರೆಗೆ 247 ವಿದ್ಯಾರ್ಥಿಗಳು ಓದುತ್ತಿದ್ದಾರೆ. 9 ಶಿಕ್ಷಕರಿದ್ದು, 7 ಕೊಠಡಿಗಳು ಉತ್ತಮವಾಗಿದ್ದರೆ 4 ಶಿಥಿಲಗೊಂಡಿವೆ. ಹೊಸದಾಗಿ ಕೊಠಡಿಗಳು ಕಾಮಗಾರಿ ಸ್ಥಗಿತಗೊಂಡಿದೆ. ಶುದ್ಧಕುಡಿಯುವ ನೀರಿನ ಅಗತ್ಯವಿದ್ದು, ಮಕ್ಕಳಿಗೆ ಮನೆ ನೀರು ಇಲ್ಲವೇ ಬೊರ್‌ವೆಲ್ ನೀರೇ ಗತಿ. ತರಗತಿ ಕೊಠಡಿಯಲ್ಲೇ ಬಿಸಿ ಊಟ ತಯಾರಿಸಲಾಗುತ್ತಿದೆ. 2 ಶೌಚಗೃಹಗಳು ದುರಸ್ತಿಯಲ್ಲಿವೆ. ಸಮಸ್ಯೆ ಪರಿಹರಿಸಲು ಗ್ರಾಪಂಗೆ ಮನವಿ ಮಾಡಿಕೊಳ್ಳಲಾಗಿದೆ ಎನ್ನುತ್ತಾರೆ ಮುಖ್ಯ ಶಿಕ್ಷಕ ಜೆ.ಪ್ರಭಾಕರ. ಅಂಗನವಾಡಿ ಕಟ್ಟಡ ಹಳೆಯದಾಗಿದ್ದು, ಸೋರುತ್ತದೆ. ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕಿದೆ. ನರೇಗಾದಡಿ ಕಳೆದ ವರ್ಷ 49 ಸಾವಿರ ಮಾನವ ದಿನಗಳನ್ನು ಬಳಸಿಕೊಳ್ಳಲಾಗಿದೆ. ಜಮೀನುಗಳಿಗೆ ತೆರಳಲು ಉತ್ತಮ ರಸ್ತೆಗಳಿಲ್ಲ. ವಾರ್ಡ್‌ಗಳಲ್ಲಿ ರಸ್ತೆಗಳು ಸಮರ್ಪಕವಾಗಿಲ್ಲ.

ಬಾಗಳಿ ಗ್ರಾಮದ ಕೆರೆ ಏರಿಗೆ ಹೊಂದಿಕೊಂಡಿರುವ ಐತಿಹಾಸಿಕ ಶ್ರೀ ಕಲ್ಲೇಶ್ವರ ದೇವಸ್ಥಾನ.
ಬಾಗಳಿ ಗ್ರಾಮದ ಕೆರೆ ಏರಿಗೆ ಹೊಂದಿಕೊಂಡಿರುವ ಐತಿಹಾಸಿಕ ಶ್ರೀ ಕಲ್ಲೇಶ್ವರ ದೇವಸ್ಥಾನ.

ಬಾಗಳಿ ಗ್ರಾಮವನ್ನು ಹಂತ ಹಂತವಾಗಿ ಅಭಿವೃದ್ಧಿಗೊಳಿಸಲು ಯತ್ನಿಸಲಾಗುವುದು. ಸಾರ್ವಜನಿಕರ ಸಮಸ್ಯೆಗಳಿಗೆ ಮೊದಲ ಆದ್ಯತೆ ನೀಡಲಾಗುವುದು.ನಾನು ಬಂದ ಮೇಲೆ ಸಾದ್ಯವಾದಷ್ಟು ಸಮಸ್ಯೆಗಳನ್ನು ಬಗೆಹರಿಸಲಾಗಿದೆ. ಉಳಿದ ಸಮಸ್ಯೆಗಳನ್ನು ಆದ್ಯತೆ ಮೇರೆಗೆ ಪರಿಹರಿಸಲು ಯತ್ನಿಸಲಾಗುವುದು.ಎಚ್.ಪ್ರಭುನಾಯ್ಕ, ಬಾಗಳಿ ಪಿಡಿಒ

ಗ್ರಾಮದಲ್ಲಿ ರಸ್ತೆಗಳು ಸರಿ ಇಲ್ಲ. ಚರಂಡಿಗಳ ಸ್ವಚ್ಛತೆ, ಕುಡಿಯುವ ನೀರು, ವಿದ್ಯುತ್ ಬೀದಿ ದೀಪದ ನಿರ್ವಹಣೆ ಮಾಡಲು ಕ್ರಮವಹಿಸಲಾಗುವುದು.ಕೆ.ನೀಲಮ್ಮ, ಬಾಗಳಿ ಗ್ರಾಪಂ ಅಧ್ಯಕ್ಷೆ

ಗ್ರಾಮದ ಕೆರೆಗೆ ಚರಂಡಿ ನೀರು ಸೇರುತ್ತಿದೆ. ಈ ಬಗ್ಗೆ ಡಿಸಿ ಗಮನಕ್ಕೆ ತರಲಾಗಿದೆ. ಆದಷ್ಟು ಬೇಗ ಸಮಸ್ಯೆ ಸರಿಪಡಿಸಬೇಕು. ಸ್ಮಶಾನ ಅಭಿವೃದ್ಧಿಗೊಳಿಸಬೇಕು. ಗ್ರಾಮವನ್ನು ಪ್ರವಾಸಿತಾಣವನ್ನಾಗಿ ಮಾಡಲು ಅಧಿಕಾರಿಗಳು ಶ್ರಮಿಸಬೇಕು.ಪಂಡಿತ್ ಬಿ.ಬಿ. ಹೊಸೂರಪ್ಪ, ಕೀಲು-ಮೂಳೆ ತಜ್ಞ, ಬಾಗಳಿ

ವ್ಯರ್ಥವಾಗಿ ಹರಿಯುವ ಕುಡಿಯುವ ನೀರಿನ ನಿರ್ವಹಣೆ ಮಾಡಬೇಕಿದೆ. ಸ್ವಚ್ಛತೆ ಕಾಪಾಡಬೇಕು. ಗ್ರಾಮಕ್ಕೆ ದ್ವಾರಬಾಗಿಲಿನ ಅಗತ್ಯವಿದೆ. ಸಾರಿಗೆ ಸಂಚಾರ ಆರಂಭಿಸಬೇಕು.ಬಿ.ಹನುಮಂತಪ್ಪ, ಕೀಲು-ಮೂಳೆ ನಾಟಿ ವೈದ್ಯ

ಗ್ರಾಮದಲ್ಲಿ ಜೆ.ಜೆ.ಎಂ.ಕಾಮಗಾರಿ ಪ್ರಗತಿಯಲ್ಲಿದೆ. ಶಾಸಕರ ಅನುದಾನದಲ್ಲಿ 3 ಕಡೆ ಸಿ.ಸಿ.ರಸ್ತೆ, ಕೆರೆ ಏರಿ ಡಾಂಬರೀಕರಣ ಮಾಡಲಾಗಿದೆ. ಮಾದರಿ ಗ್ರಾಮ ಮಾಡಲು ಎಲ್ಲರ ಸಹಕಾರ ಅಗತ್ಯ.ಎನ್.ಮಂಜುನಾಥ, ಗ್ರಾಪಂ ಸದಸ್ಯ, ಬಾಗಳಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net