ಅಧಿವೇಶನಕ್ಕೂ ಮುನ್ನ ಹಳ್ಳಿ ಯಾತ್ರೆ: ಶಾಸಕಿ ಶಾರದಾ ಪೂರ್ಯನಾಯ್ಕ

mla office innuguration
ಕೃತಜ್ಞತಾ ಸಭೆಯಲ್ಲಿ ಶಾಸಕಿ ಶಾರದಾ ಪೂರ‌್ಯಾನಾಯ್ಕ ಮಾತನಾಡಿದರು.
Published on

ಶಿವಮೊಗ್ಗ: ವಿಧಾನಸಭೆ ಚುನಾವಣೆ ಬಳಿಕ ನಾನಾ ಕಾರಣಗಳಿಂದ ಎಲ್ಲ ಹಳ್ಳಿಗಳಿಗೂ ಭೇಟಿ ನೀಡಲು ಸಾಧ್ಯವಾಗಿಲ್ಲ. ಮುಂದಿನ ಬಜೆಟ್ ಅಧಿವೇಶನಕ್ಕೂ ಮುನ್ನ ಎಲ್ಲ ಹಳ್ಳಿಗಳಿಗೂ ಭೇಟಿ ನೀಡುವ ಗುರಿ ಹಾಕಿಕೊಂಡಿದ್ದೇನೆ ಎಂದು ಶಾಸಕಿ ಶಾರದಾ ಪೂರ್ಯನಾಯ್ಕ ಹೇಳಿದರು.

ನಗರದ ಮಹಾನಗರ ಪಾಲಿಕೆ ಕಟ್ಟಡದಲ್ಲಿ ಬುಧವಾರ ಕಚೇರಿ ಉದ್ಘಾಟಿಸಿ ಮಾತನಾಡಿದ ಅವರು, ಕ್ಷೇತ್ರದ ಜನರು ಈ ಬಾರಿ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಪ್ರತಿಪಕ್ಷದಲ್ಲಿರುವ ಕಾರಣ ಎಲ್ಲರ ನಿರೀಕ್ಷೆಗಳನ್ನು ಈಡೇರಿಸಲು ಸಾಧ್ಯವಾಗದಿದ್ದರೂ ಚುನಾವಣಾ ಪೂರ್ವದಲ್ಲಿ ಕೊಟ್ಟ ಭರವಸೆಗಳನ್ನು ಪ್ರಾಮಾಣಿಕವಾಗಿ ಈಡೇರಿಸುವ ಪ್ರಯತ್ನ ಮಾಡುತ್ತೇನೆ ಎಂದರು.
ಬರಲಿರುವ ಜಿಪಂ, ತಾಪಂ ಮತ್ತು ಎಪಿಎಂಸಿ ಚುನಾವಣೆಗಳಲ್ಲಿ ಗೆಲುವಿನ ಬಗ್ಗೆ ಚಿಂತಿಸಬೇಕಿದೆ. ಮುಂಬರುವ ಎಲ್ಲ ಚುನಾವಣೆಗಳಲ್ಲೂ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿ ಇಡೀ ಜಿಲ್ಲೆಯಲ್ಲಿ ಪಕ್ಷವನ್ನು ಸಂಘಟಿಸಬೇಕಿದೆ. ಕಳೆದುಕೊಂಡಿದ್ದ ಕ್ಷೇತ್ರವನ್ನು ಮರಳಿ ಪಡೆದುಕೊಂಡಿದ್ದೇವೆ. ಹಾಗಂತ ಸುಮ್ಮನೆ ಕೂರುವಂತಿಲ್ಲ. ಎಲ್ಲ ವರ್ಗದ ಜನರ ಮನ ಒಲಿಸಿಕೊಳ್ಳುತ್ತೇನೆ. ಕಾರ್ಯಕರ್ತರು ಮುಂದೆಯೂ ಜತೆಗಿದ್ದು ಸರ್ಕಾರದ ಯೋಜನೆ ಮತ್ತು ಶಾಸಕರ ಅನುದಾನಗಳನ್ನು ಕ್ಷೇತ್ರದ ಜನತೆಗೆ ಮುಟ್ಟಿಸಬೇಕಿದೆ ಎಂದರು.

ಒಮ್ಮೆ ಸೋಲಬೇಕು
ಶಾಸಕರಿಗೆ ಒಮ್ಮೆ ಸೋಲು ಎದುರಾಗಬೇಕು. ಇಲ್ಲವಾದರೆ ನಾನು ಎಂಬ ಅಹಂ ಹೆಚ್ಚಾಗುತ್ತದೆ. ಸೋತಾಗ ಮತ್ತಷ್ಟು ಪಕ್ವವಾಗುತ್ತಾರೆ. ತಪ್ಪುಗಳನ್ನು ತಿದ್ದಿಕೊಂಡು ಪರಿಪಕ್ಷ ರಾಜಕಾರಣಿ ಆಗಿರುತ್ತಾರೆ ಎಂದು ಆಯನೂರು ಮಂಜುನಾಥ್ ಹೇಳಿದರು.
ಚುನಾವಣೆಗಳಲ್ಲಿ ಗೆದ್ದಾಕ್ಷಣ ಕೆಲಸ ಮಾಡದೇ ಇರುವವರೂ ಹತ್ತಿರವಾಗುತ್ತಾರೆ. ಗೆಲುವಿಗೆ ಸಾಕಷ್ಟು ಪರಿಶ್ರಮ ಹಾಕಿದ್ದೇವೆ ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ. ಆದರೆ ನಿಜವಾಗಿಯೂ ಕೆಲಸ ಮಾಡಿದವರು ಎಲ್ಲೋ ದೂರದಲ್ಲಿ ನಿಂತಿರುತ್ತಾರೆ. ಗೆದ್ದ ಬಳಿಕ ಹತ್ತಿರ ಆಗುವವರ ಬಗ್ಗೆ ಶಾಸಕರು ಎಚ್ಚರಿಕೆ ವಹಿಸಬೇಕಾಗುತ್ತದೆ. ಪ್ರಾಮಾಣಿಕ ಕಾರ್ಯಕರ್ತರು ಮತ್ತು ಪಾರದರ್ಶಕ ಕೋಟೆಯನ್ನು ರಚನೆ ಮಾಡಿಕೊಳ್ಳಬೇಕಾಗುತ್ತದೆ ಎಂದು ಸಲಹೆ ನೀಡಿದರು.

ಕಾರ್ಯಕರ್ತನ ಹೇಳಿಕೆಗೆ ಗರಂ
ಆಯನೂರು ಮಂಜುನಾಥ್ ಮಾತನಾಡುವಾಗ ಕಾರ್ಯಕರ್ತನೊಬ್ಬ ಬಹಳ ಜನ ಕಾಯುತ್ತಿದ್ದಾರೆ. ಬೇಗ ಮುಗಿಸಿ ಎಂದಾಗ ಕೋಪಗೊಂಡ ಆಯನೂರು, ಬಹಳ ಜನ ಕಾಯುತ್ತಿದ್ದಾರೆ ಎಂದರೆ ಅರ್ಥವೇನು?, ಮಾತು ನಿಲ್ಲಿಸಲಿ ಎಂಬ ಅರ್ಥ ತಾನೆ. ಆಯ್ತು ನೀನೇ ಬಂದು ಮಾತನಾಡು ಎಂದು ಭಾಷಣ ಮುಗಿಸಲು ಮುಂದಾದರು. ಬಳಿಕ ವೇದಿಕೆಯಲ್ಲಿದ್ದವರು ಸಮಾಧಾನಪಡಿಸಿ ಭಾಷಣ ಮುಂದುವರಿಸುವಂತೆ ಮನವಿ ಮಾಡಿದರು. ಆಗ ನಿಮ್ಮಂತವರಿಂದಲೇ ಪಕ್ಷ ಹಾಳಾಗಿರುವುದು. ನನ್ನ ಮಾತು ಕೆಲವರಿಗೆ ಕಿರಿಕಿರಿ ಆಗುತ್ತಿದೆ ಎಂಬುದು ಸಾಬೀತಾಗಿದೆ ಎಂದು ಕಿಡಿಕಾರಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net