ವಿಲೇಜ್ ಟಾಸ್ಕ್ ಫೋರ್ಸ್ ಅಲರ್ಟ್, ಕರೊನಾ ತಡೆಗೆ ಕಟ್ಟುನಿಟ್ಟಿನ ಕ್ರಮ

taskforce
Published on

ಉಡುಪಿ: ಕರೊನಾ ಮುಂಜಾಗ್ರತೆ ಹಿನ್ನೆಲೆಯಲ್ಲಿ, ಗ್ರಾಮೀಣ ಭಾಗದಲ್ಲಿ ಸಾರ್ವಜನಿಕ ಆರೋಗ್ಯ ಕಾಪಾಡುವ ದೃಷ್ಟಿಯಿಂದ ಪ್ರತೀ ಗ್ರಾಪಂ ಮಟ್ಟದಲ್ಲಿ ವಿಲೇಜ್ ಟಾಸ್ಕ್ ಫೋರ್ಸ್ ರಚಿಸಲಾಗಿದೆ.

ಗ್ರಾಮಕ್ಕೆ ಹೊರಗಿನಿಂದ ಬಂದವರ ಮೇಲೆ ಟಾಸ್ಕ್ ಫೋರ್ಸ್ ನಿಗಾ ಇಡಲಿದೆ. ಹಿರಿಯರ, ಮಕ್ಕಳ ಆರೋಗ್ಯದ ಬಗ್ಗೆ ಸ್ಪಂದನೆ ನೀಡಲಿದೆ. ಈ ಟಾಸ್ಕ್ ಫೋರ್ಸ್ ಗ್ರಾಪಂ ಅಧ್ಯಕ್ಷರು, ಸದಸ್ಯರನ್ನು ಒಳಗೊಂಡಿರುತ್ತದೆ. ಜಿಲ್ಲೆಯ 158 ಗ್ರಾಪಂಗಳಲ್ಲಿ ಟಾಸ್ಕ್ ಫೋರ್ಸ್ ರಚಿಸಲಾಗಿದೆ. ಬೆಳಗ್ಗೆನಿಂದ ಸಾಯಂಕಾಲವರೆಗೆ ಈ ಪಡೆ ಅಲರ್ಟ್ ಆಗಿ ಕಾರ್ಯನಿರ್ವಹಿಸುತ್ತಿದ್ದು, ತಮ್ಮ ಗ್ರಾಮಕ್ಕೆ ಕರೊನಾ ಬಾರದಂತೆ ಎಚ್ಚರಿಕೆ ವಹಿಸಲಿದ್ದಾರೆ.

ಬಹುತೇಕ ಗ್ರಾಪಂಗಳಲ್ಲಿ ಗ್ರಾಮದ ಮೂಲೆ ಮೂಲೆ ಸಂಚರಿಸಿ ಕರೊನಾ ಬಗ್ಗೆ ಜಾಗೃತಿ ಮೂಡಿಸುವುದು, ಜತೆಗೆ ಸ್ವಚ್ಛತಾ ಕಾರ್ಯ, ಅಂಗಡಿ, ಮುಂಗಟ್ಟುಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳುವಂತೆ ಟಾಸ್ಕ್‌ಫೋರ್ಸ್ ಕಾರ್ಯನಿರ್ವಹಿಸಲಿದೆ.

ಹೊರ ಊರಿನಿಂದ, ವಿದೇಶದಿಂದ ಗ್ರಾಮಕ್ಕೆ ಆಗಮಿಸಿದವರ ಮಾಹಿತಿ ಪಡೆದು ಅವರ ಮನೆಗೆ ತೆರಳಿ ಸಲಹೆ, ಸೂಚನೆ ನೀಡಲಾಗುತ್ತಿದೆ. ಅಗತ್ಯ ಕೆಲಸ ಹೊರತುಪಡಿಸಿ ಜನರಿಗೆ ಸುಮ್ಮನೆ ತಿರುಗಾಡಲು ಅವಕಾಶ ನೀಡದಿರುವುದು ಕೂಡಾ ಈ ಪಡೆಯ ಕೆಲಸ.

ಟಾಸ್ಕ್‌ಫೊರ್ಸ್‌ನಲ್ಲಿ ಯಾರ‌್ಯಾರು?: ಟಾಸ್ಕ್‌ಫೋರ್ಸ್ ಅಧ್ಯಕ್ಷರಾಗಿ ಗ್ರಾಪಂ ಅಧ್ಯಕ್ಷ, ಸದಸ್ಯ ಕಾರ್ಯದರ್ಶಿ ಪಿಡಿಒ, ಸದಸ್ಯರಾಗಿ ಗ್ರಾಪಂ ಉಪಾಧ್ಯಕ್ಷ, ಸದಸ್ಯರು, ಗ್ರಾಮ ಲೆಕ್ಕಾಧಿಕಾರಿ, ಗ್ರಾಮದ ಬೀಟ್ ಪೊಲೀಸ್, ಆರೋಗ್ಯ ಕೇಂದ್ರದ ಸಿಬ್ಬಂದಿ, ಅಂಗನವಾಡಿ ಕಾರ್ಯಕರ್ತರು, ಆಶಾ ಕಾರ್ಯಕರ್ತರು, ನೋಂದಾಯಿತ ಸ್ಥಳೀಯ ವೈದ್ಯರು ಇರುತ್ತಾರೆ.

ಕರ್ತವ್ಯ ಏನು?: ಗ್ರಾಮೀಣ ಭಾಗದ ದೇವಳ, ಮೈದಾನ, ಕೆರೆ, ಬಾವಿ ಬಳಿ ಸಾರ್ವಜನಿಕರ ಗುಂಪು ನಿಷೇಧಿಸುವುದು, ಕರೊನಾ ಬಗ್ಗೆ ವದಂತಿ ಹರಡದಂತೆ ನೋಡಿಕೊಳ್ಳಬೇಕು. ಮದುವೆ, ಜಾತ್ರೆ, ಗುಂಪು ಚಟುವಟಿಕೆ ನಿಯಂತ್ರಿಸುವುದು, 65 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರ ಮತ್ತು ವಿದೇಶದಿಂದ ಆಗಮಿಸಿದ್ದ ವ್ಯಕ್ತಿಗಳ ಆರೋಗ್ಯದ ಮೇಲೆ ನಿಗಾ ಇಡಬೇಕು, ಕೆಮ್ಮು, ನೆಗಡಿ, ಜ್ವರದಿಂದ ಬಳಲುತಿದ್ದವರನ್ನು ಗುರುತಿಸಿ ಸಮೀಪದ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುವುದು. ಗ್ರಾಮದ ಬಸ್ ನಿಲ್ದಾಣದಲ್ಲಿ ಕೈ ತೊಳೆಯಲು ವ್ಯವಸ್ಥೆ, ಶುಚಿತ್ವ ಮತ್ತು ಕರೊನಾ ಕಾಯಿಲೆ ಬಗ್ಗೆ ಮೈಕ್ ಮೂಲಕ ಜಾಗೃತಿ ಮೂಡಿಸುವುದು.

ಅನುದಾನ ಬಳಕೆಗೆ ಅವಕಾಶ: ಗ್ರಾಪಂಗಳು ಈ ತುರ್ತು ಪರಿಸ್ಥಿತಿಯಲ್ಲಿ 14ನೇ ಹಣಕಾಸಿನ ಅನುದಾನ ಅಥವಾ ಸ್ವಂತ ಸಂಪನ್ಮೂಲ ಬಳಕೆ ಮಾಡಲು ಸೂಚಿಸಿದೆ. ಇದರಲ್ಲಿ ಮಾಸ್ಕ್, ಸ್ಯಾನಿಟೈಸರ್, ಶುಚಿತ್ವ ಪರಿಕರ ಖರೀದಿಸಬಹುದಾಗಿದೆ.

ಗ್ರಾಮೀಣ ಭಾಗದಲ್ಲಿ ಕರೊನಾ ಹರಡದಂತೆ ಮುಂಜಾಗ್ರತೆ ವಹಿಸುವ ನಿಟ್ಟಿನಲ್ಲಿ ಟಾಸ್ಕ್‌ಫೋರ್ಸ್ ರಚಿಸಲಾಗಿದೆ. ಎಲ್ಲ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳಿಗೆ ಸಭೆ ನಡೆಸಿ ಸಲಹೆ, ಸೂಚನೆ ನೀಡಿದ್ದು, ಪ್ರತೀ ದಿನ ವರದಿ ಪಡೆಯಲಾಗುತ್ತಿದೆ. ಜಿಲ್ಲೆಯ ಎಲ್ಲ ಗ್ರಾಪಂನ ಗ್ರಾಮೀಣ ಪಡೆಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ.

- ಪ್ರೀತಿ ಗೆಹ್ಲೋಟ್, ಉಡುಪಿ ಜಿಪಂ ಸಿಇಒ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net