

ಬಸವನಬಾಗೇವಾಡಿ: ಗ್ರಾಮ ಪಂಚಾಯಿತಿ ಸರ್ವಸದಸ್ಯರು ಹಾಗೂ ಅಭಿವೃದ್ಧಿ ಅಧಿಕಾರಿಗಳ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಅ.4 ರಂದು ರಾಜ್ಯಾದ್ಯಂತ ಎಲ್ಲ ಗ್ರಾಪಂ ಸೇವೆಗಳನ್ನು ಸ್ಥಗಿತಗೊಳಿಸಿ ಅನಿರ್ದಿಷ್ಟಾವಧಿ ಹೋರಾಟ ಹಮ್ಮಿಕೊಳ್ಳುವ ಕುರಿತು ಪೂರ್ವಭಾವಿ ಸಭೆಯಲ್ಲಿ ಶುಕ್ರವಾರ ನಿರ್ಧರಿಸಲಾಯಿತು.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಎಲ್ಲ ವೃಂದ ಸಂಘಗಳು ಹಾಗೂ ಗ್ರಾಮ ಪಂಚಾಯಿತಿ ಸದಸ್ಯರ ಒಕ್ಕೂಟದ ಸಹಯೋಗದಲ್ಲಿ ಪಟ್ಟಣದ ತಾಲೂಕು ಪಂಚಾಯಿತಿ ಸಭಾಭವನದಲ್ಲಿ ಬಸವನಬಾಗೇವಾಡಿ ತಾಲೂಕಿನ ವಿವಿಧ ಗ್ರಾಮಗಳ ಗ್ರಾಮ ಪಂಚಾಯಿತಿಯ ಅಧ್ಯಕ್ಷರು, ಉಪಾಧ್ಯಕ್ಷರು, ಸರ್ವ ಸದಸ್ಯರು ಹಾಗೂ ಅಭಿವೃದ್ಧಿ ಅಧಿಕಾರಿಗಳ ಪೂರ್ವಭಾವಿ ಸಭೆಯಲ್ಲಿ ತೀರ್ಮಾನಿಸಲಾಯಿತು.
ಸಂಘದ ರಾಜ್ಯ ಘಟಕದ ಉಪಾಧ್ಯಕ್ಷ ಶರಣಬಸು ಬಿರಾದಾರ, ಸಭೆಯ ಅಧ್ಯಕ್ಷವಹಿಸಿದ್ದ ತಾಲೂಕು ಅಧ್ಯಕ್ಷ ಬಿ.ಎಸ್.ಬಡಿಗೇರ, ಜಿಲ್ಲಾ ಉಪಾಧ್ಯಕ್ಷ ಆನಂದ ಹಿರೇಮಠ, ಮಮ್ತಾಜ್ ಮಮದಾಪುರ ಮಾತನಾಡಿ, ರಾಜ್ಯ ಸರ್ಕಾರದ ಅವೈಜ್ಞಾನಿಕ ಆದೇಶದಿಂದ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳ ಮೇಲೆ ಒತ್ತಡ ಹೆಚ್ಚಾಗುತ್ತಿದೆ. ಗ್ರಾಪಂ ಚುನಾಯಿತ ಪ್ರತಿನಿಧಿಗಳಿಗೆ ಸಂಪೂರ್ಣ ಅಧಿಕಾರ ಸಿಗುತ್ತಿಲ್ಲ. ಹೀಗಾಗಿ ಸಮಸ್ಯೆಗಳ ಮೇಲೆ ಸಮಸ್ಯೆಗಳು ಹೆಚ್ಚಾಗುತ್ತಿದ್ದು ಯಾವುದೇ ಕೆಲಸ ಕಾರ್ಯ ಮಾಡಲು ಕೂಡ ಆಗುತ್ತಿಲ್ಲ ಎಂದು ಹೇಳಿದರು.
ಗ್ರಾಮ ಪಂಚಾಯಿತಿಯ ಸರ್ವಸದಸ್ಯರು ಹಾಗೂ ಅಭಿವೃದ್ಧಿ ಅಧಿಕಾರಿಗಳು ಮತ್ತು ಎಲ್ಲ ವೃಂದ ಸಂಘಗಳ ಸಿಬ್ಬಂದಿಗೆ ಕೇರಳ ಸರ್ಕಾರದಂತೆ ಮೂಲಸೌಲಭ್ಯಗಳನ್ನು ನೀಡಬೇಕು. ಇಲ್ಲವಾದಲ್ಲಿ ಅ.4 ರಿಂದ ರಾಜ್ಯಾದ್ಯಂತ ಎಲ್ಲ ಗ್ರಾಪಂ ಸೇವೆಗಳನ್ನು ಸ್ಥಗಿತಗೊಳಿಸಿ ಬೆಂಗಳೂರು ಫ್ರೀಡಂ ಪಾರ್ಕ್‌ದಲ್ಲಿ ಅನಿರ್ದಿಷ್ಟಾವಧಿ ಹೋರಾಟ ನಡೆಸಲಾಗುವುದು ಎಂದು ಹೇಳಿದರು.
ನಮ್ಮ ಈ ಹೋರಾಟಕ್ಕೆ 13 ವಿವಿಧ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿವೆ. ರಾಜ್ಯದಲ್ಲಿ 6 ಸಾವಿರ ಗ್ರಾಪಂ ಇದ್ದು, ಮೂರು ಲಕ್ಷಕ್ಕೂ ಹೆಚ್ಚು ಸಿಬ್ಬಂದಿ ಸೇವೆ ಸಲ್ಲಿಸುತ್ತಿದ್ದಾರೆ. ಅ.4ರ ಹೋರಾಟದಲ್ಲಿ 2 ಲಕ್ಷಕ್ಕೂ ಹೆಚ್ಚು ಪಂಚ ಸಿಬ್ಬಂದಿ ಭಾಗವಹಿಸಲಿದ್ದಾರೆ ಎಂದು ಹೇಳಿದರು.
ವಿವಿಧ 29 ಇಲಾಖೆಯ ಕೆಲಸ ಕಾರ್ಯ ಮಾಡುವ ಗ್ರಾಪಂ ಪಿಡಿಒಗಳು, ಸಿಬ್ಬಂದಿಯ ಹಿರಿಯ- ಕಿರಿಯ ಆಧಾರದ ಮೇಲೆ ವೇತನ ನಿಗದಿ ಮಾಡಬೇಕು. ರಾಜ್ಯದ ಎಲ್ಲ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಹುದ್ದೆಯನ್ನು ಗೆಜೆಟೆಡ್ ಗ್ರೂಪ್ ಬಿ ದರ್ಜೆಗೆ ಉನ್ನತಿಕರಿಸುವುದು, ಎಲ್ಲ ಗ್ರಾಪಂ ಎಸ್‌ಡಿ ಹುದ್ದೆ ನೇಮಕ ಮಾಡಬೇಕು, ಇಎ್ಪಿಎ್ ಜಾರಿ ಮಾಡಬೇಕು, ಗೌರವಧನ/ ಪಿಂಚಣಿ, ಉಚಿತ ಬಸ್ ಪಾಸ್, ಆರೋಗ್ಯ ವಿಮೆ ಸೇರಿ ಅನೇಕ ಮೂಲಸೌಲಭ್ಯಗಳ ಬೇಡಿಕೆ ಈಡೇರುವತನಕ ಅನಿರ್ದಿಷ್ಟಾವಧಿ ಹೋರಾಟ ಮಾಡಲಾಗುವುದು ಎಂದು ಹೇಳಿದರು.
ಸಭೆಯಲ್ಲಿ ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಹಾಗೂ ಸಿಬ್ಬಂದಿ ಭಾಗವಹಿಸಿದ್ದರು. ತಾಪಂ ಇಒ ಅವರಿಗೆ ಬರೆದ ಮನವಿ ಪತ್ರವನ್ನು ತಾಪಂ ಕಚೇರಿ ನೌಕರ ಶಶಿಧರ್ ಪಾಟೀಲ ಅವರಿಗೆ ಸಲ್ಲಿಸಿದರು.
ಪೂರ್ವಭಾವಿ ಸಭೆಯಲ್ಲಿ ಮುತ್ತಪ್ಪ ಇಂಗಳಗೇರಿ, ಎಂ. ಕೆ. ಗುಡಿಮನ್ನಿ, ಸುರೇಶ್ ಬ್ಯಾಕೋಡ್, ವ್ಹಾ.ಎಂ.ಜುಗಲಕಾರ, ಸಂಗಪ್ಪ ಗಂಗಶೇಟ್ಟಿ, ಮೋಹನ್ ಚಲವಾದಿ ಸೇರಿದಂತೆ ಅನೇಕರು ವೇದಿಕೆ ಮೇಲೆ ಉಪಸ್ಥಿತರಿದ್ದರು. ಅಪ್ಪು ಧನಶೆಟ್ಟಿ ವಂದಿಸಿದರು.