ಹೆದ್ದಾರಿ ಕಾಮಗಾರಿಯಿಂದ ಗ್ರಾಮದ ರಸ್ತೆ ಬಂದ್

KDR road
ತಂಗಲಿ ಗ್ರಾಮದಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಯುತ್ತಿರುವ ಸ್ಥಳವನ್ನು ಗ್ರಾಪಂ ಜನಪ್ರತಿನಿಧಿಗಳು ವೀಕ್ಷಿಸಿದರು. ಅಧ್ಯಕ್ಷ ರಘುರಾಮ್, ಸುನೀಲ್‌ಕುಮಾರ್ ಇತರರಿದ್ದರು.
Published on

ಕಡೂರು: ಪಟ್ಟಣದಲ್ಲಿ ರಾಷ್ಟ್ರೀಯ ಹೆದ್ದಾರಿಯ 206ರ ಬೈಪಾಸ್ ರಸ್ತೆ ಕಾಮಗಾರಿಯಿಂದ ತಂಗಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಸ್ತೆ ಬದಿ ಮನೆಗಳಿಗೆ ಸೂಕ್ತ ದಾರಿ ಇಲ್ಲದೆ ಎರಡು ವರ್ಷಗಳಿಂದ ಸಮಸ್ಯೆ ಉಂಟಾಗಿದ್ದರಿಂದ ಗ್ರಾಪಂ ಅಧ್ಯಕ್ಷ ರಘುರಾಮ್ ನೇತೃತ್ವದಲ್ಲಿ ಬುಧವಾರ ಸದಸ್ಯರು, ಅಧಿಕಾರಿಗಳು ಸ್ಥಳ ವೀಕ್ಷಿಸಿದರು.

ಕೆಲ ಅವೈಜ್ಞಾನಿಕ ಹೆದ್ದಾರಿ ಕಾಮಗಾರಿಯಿಂದ ತಂಗಲಿ ಗ್ರಾಮ ವ್ಯಾಪ್ತಿಯ ಸುಮಾರು 25 ಮನೆಗಳ ನಡುವೆ ಹೆದ್ದಾರಿ ಹಾದು ಹೋಯಿತು. ಈಗ ಮನೆಗಳಿಗೆ ಹೋಗಲು ಜಾಗ ಇಲ್ಲದಂತಾಗಿದೆ. ಸರ್ವೀಸ್ ರಸ್ತೆಗಿಂತ ಸುಮಾರು 10 ಅಡಿ ಕೆಳಗೆ ಮನೆಗಳಿದ್ದು, ಮನೆಗಳಿಗೆ ಹೋಗಲು ರಸ್ತೆ ನಿರ್ಮಿಸಿಲ್ಲ. ತಾತ್ಕಾಲಿಕವಾಗಿಯಾದರೂ ರಸ್ತೆ ನಿರ್ಮಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರಿಗೆ ನಿವಾಸಿಗಳು ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎಂದು ಸ್ಥಳೀಯರು ಗ್ರಾಪಂ ಜನಪ್ರತಿನಿಧಿಗಳು, ಅಧಿಕಾರಿಗಳ ಬಳಿ ಅಳಲು ತೋಡಿಕೊಂಡರು.
ಸರ್ವೀಸ್ ರಸ್ತೆ ಪಕ್ಲದಲ್ಲೇ ಇರುವ ರಾಜಕಾಲುವೆ ಗಿಡಗಂಟಿಗಳಿಂದ ಕೂಡಿದ್ದು, ಮಳೆಯ ನೀರು ಮನೆಗಳಿಗೆ ನುಗ್ಗುತ್ತದೆ. ಕೇವಲ ಮೂರು ಅಡಿ ಅಗಲದ ಸಿಮೆಂಟ್ ಕಟ್ಟೆ ಮೇಲೆ ನಡೆದು ಮನೆಗೆ ಹೋಗಬೇಕಾಗಿದೆ. ಆಯತಪ್ಪಿದರೆ ಹೆದ್ದಾರಿ ನಿರ್ಮಾಣದ ಸರಳುಗಳ ಮೇಲೆ ಬಿದ್ದು ಪ್ರಾಣಾಪಾಯವಾಗುವ ಸಂಭವವೂ ಇದೆ. ಹೆದ್ದಾರಿ ಕಾಮಗಾರಿಗೆ ನಮ್ಮ ವಿರೋಧವಿಲ್ಲ. ಆದರೆ ನಿವಾಸಿಗಳಿಗೆ ಆಗಿರುವ ತೊಂದರೆ ಪರಿಹರಿಸಬೇಕು ಎಂದು ಸ್ಥಳೀಯ ನಿವಾಸಿಗಳಾದ ರಾಧಾ, ಪ್ರಕಾಶ್ ಒತ್ತಾಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net