

ಬಳ್ಳಾರಿ: ಹೊರ ದೇಶ ಹಾಗೂ ಜಿಲ್ಲೆಗಳಿಂದ ಗ್ರಾಮಗಳಿಗೆ ಆಗಮಿಸಿದವರ ಮಾಹಿತಿಯನ್ನು ಪ್ರಾಥಮಿಕ ಆರೋಗ್ಯ ಕೇಂದ್ರ ಅಥವಾ ಜಿಲ್ಲಾ ಆಸ್ಪತ್ರೆಗೆ ನೀಡಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆಯ ಬಳ್ಳಾರಿ ವಿಭಾಗೀಯ ಸರ್ವೇಕ್ಷಣಾಧಿಕಾರಿ ಡಾ.ಶ್ರೀಧರ್ ತಿಳಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ತಾಪಂ ಇಒ, ಗ್ರಾಪಂ ಪಿಡಿಒಗಳಿಗೆ ಆಯೋಜಿಸಿದ್ದ ವಿಡಿಯೋ ಕಾನ್ಫರೆನ್ಸ್‌ನಲ್ಲಿ ಮಾತನಾಡಿದರು. ಕೆಲಸಕ್ಕಾಗಿ ನಗರ ಹಾಗೂ ವಿದೇಶಗಳಿಗೆ ಹೋದವರು ತಮ್ಮ ಗ್ರಾಮಗಳಿಗೆ ಮರಳುತ್ತಿದ್ದಾರೆ. ಆದ್ದರಿಂದ ಆಶಾ ಕಾರ್ಯಕರ್ತೆಯರು ಅಂಥವರನ್ನು ಗುರುತಿಸಿ 14 ದಿನಗಳವರೆಗೆ ಅವರ ಆರೋಗ್ಯದ ಮೇಲೆ ನಿಗಾವಹಿಸಿಬೇಕು. ಒಂದು ವೇಳೆ ಕರೊನಾ ಲಕ್ಷಣ ಕಂಡು ಬಂದರೆ ಕೂಡಲೇ ಆಸ್ಪತ್ರೆಗೆ ದಾಖಲಿಸಬೇಕು ಎಂದು ತಿಳಿಸಿದರು.
ಗ್ರಾಮಗಳಲ್ಲಿ ಸ್ವಚ್ಛತೆ ಕಾಪಾಡುವ ಜತೆಗೆ 5ಕ್ಕಿಂತ ಹೆಚ್ಚು ಜನರು ಗುಂಪು ಸೇರದಂತೆ ನೋಡಿಕೊಳ್ಳಬೇಕು. ವಯೋವೃದ್ಧರು, ಗರ್ಭಿಣಿಯರ ಪಟ್ಟಿ ತಯಾರಿಸಿ ಅವರ ಆರೋಗ್ಯ ಬಗ್ಗೆ ಗಮನಹರಿಸಬೇಕು. ಕರೊನಾ ವೈರಸ್‌ಗೆ ಯಾವುದೇ ಔಷಧ ಕಂಡುಹಿಡಿದಿಲ್ಲ. ಈ ಬಗ್ಗೆ ಸುಳ್ಳು ಸುದ್ದಿ ಹರಡದಂತೆ ನಿಗಾವಹಿಸುವಂತೆ ಇಒ ಮತ್ತು ಪಿಡಿಒಗೆ ಸೂಚಿಸಿದರು.
ಟಾಸ್ಕ್ ಫೋರ್ಸ್ ಸಮಿತಿ ರಚನೆ
ಕರೊನಾ ವೈರಸ್ ತಡೆಗಾಗಿ ಗ್ರಾಮ ಮಟ್ಟದ ಟಾಸ್ಕ್ ಫೋರ್ಸ್ ಸಮಿತಿ ರಚಿಸಿ ಅಧ್ಯಕ್ಷರನ್ನಾಗಿ ಆಯಾ ಗ್ರಾಪಂ ಅಧ್ಯಕ್ಷರನ್ನು ನೇಮಿಸಬೇಕು. ಪಂಚಾಯಿತಿ ಸದಸ್ಯರು, ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಸ್ಥಳೀಯ ವೈದ್ಯರು ಹಾಗೂ ಬೀಟ್ ಪೊಲೀಸರು ಸದಸ್ಯರಾಗಿ ಕಾರ್ಯನಿರ್ವಹಿಸಬೇಕು ಎಂದು ಪಿಡಿಒಗಳಿಗೆ ಡಾ.ಶ್ರೀಧರ್ ಸೂಚಿಸಿದರು.