ಬದುಕಿನ ಹೊಳಪು ಹೆಚ್ಚಿಸಿದ ರೇಷ್ಮೆ ಉದ್ಯಮ

RPD Story
Published on

ಸಿ.ಎಸ್.ವಿಶ್ವನಾಥ ಶಾಸ್ತ್ರಿ ರಾಯಲ್ಪಾಡು

ಯಾವುದೇ ಒಂದು ಉದ್ಯಮ, ಉದ್ಯೋಗ ಆರಂಭದಲ್ಲಿ ಆಮೆಯಂತಾದರೂ ಪ್ರಾಮಾಣಿಕವಾಗಿ ತೊಡಗಿಸಿಕೊಂಡರೆ ಅದು ಕಾಲಾನಂತರದಲ್ಲಿ ಜಿಂಕೆಯ ವೇಗ ಪಡೆಯತ್ತದೆ ಎಂಬುವುದಕ್ಕೆ ಬಿ.ಕಾಂ ಪದವೀಧರನ ನೂತನ ಉದ್ಯಮವೇ ಸಾಕ್ಷಿಯಾಗಿದೆ.

ಶ್ರೀನಿವಾಸಪುರ ತಾಲೂಕು ತಾಟಿಮಾನಪಲ್ಲಿ ಗ್ರಾಮದ ನರೇಶ್ ಅವರೇ ವಿಶಿಷ್ಟ ಸಾಧಕರಾಗಿದ್ದು, ಗ್ರಾಮೀಣ ಭಾಗದಲ್ಲಿಯೂ ಸ್ವಂತ ಉದ್ಯೋಗದಿಂದ ಸ್ವಾವಲಂಬನೆ ಜೀವನ ನಡೆಸಬಹುದು ಎಂದು ತೋರಿಸಿಕೊಟ್ಟಿದ್ದಾರೆ.

ನರೇಶ್ ಬೆಂಗಳೂರು ಖಾಸಗಿ ಕಂಪನಿಯಲ್ಲಿ 6 ವರ್ಷ ಕಾರ್ಯನಿರ್ವಹಿಸಿ, ನಂತರ ಕಂಪನಿಯಿಂದ ಹೊರಬಂದು, ಸ್ವಾಲವಂಬಿ ಜೀವನ ನಡೆಸುವ ಛಲದಿಂದ ಸ್ವಂತ ಆಲೋಚನೆಗಳೊಂದಿಗೆ ಸ್ನೇಹಿತರು ಹಾಗೂ ಹಿತೈಷಿಯೊಂದಿಗೆ ಪಾಲುದಾರಿಕೆ ಮಾಡಿಕೊಂಡು ರೇಷ್ಮೆ ನೂಲು ತೆಗೆಯುವ ಕೈಗಾರಿಕಾ ಉದ್ಯಮಕ್ಕೆ ಕೈ ಹಾಕಿ ಯಶಸ್ವಿಯಾಗಿದ್ದು, ಸಣ್ಣದಾಗಿ ಆರಂಭಿಸಿದ ಉದ್ಯಮ ಈಗ ಬೃಹತ್‌ಆಗಿ ಬೆಳೆದಿದ್ದು, ಇಂದು ಹತ್ತಾರು ಜನಕ್ಕೆ ಕೆಲಸ ನೀಡಿದ್ದಾರೆ.

2021ರಲ್ಲಿ ಆರಂಭ: ಶ್ರೀನಿವಾಸಪುರ ತಾಲೂಕಿನ ಎಂ.ವ್ಯಾಪಲಪಲ್ಲಿ ಗ್ರಾಮದಲ್ಲಿ ಸ್ನೇಹಿತ ಸುರೇಶ್ ಮಾರ್ಗದರ್ಶನದಂತೆ 2021ರಲ್ಲಿ ಸಿದ್ದಿವಿನಾಯಕ ರೇಷ್ಮೆ ನೂಲು ತೆಗೆಯುವ ಕೈಗಾರಿಕೆ ಪ್ರಾರಂಭಿಸಿದ ನರೇಶ್, ಆರಂಭದಲ್ಲಿ ಸ್ವಲ್ಪ ಅಡೆತಡೆಗಳು ಅನುಭವಿಸಿದರೂ ನಿರಂತರ ಪ್ರಯತ್ನ ಮತ್ತು ಕುಟುಂಬದವರ ಸಹಕಾರದೊಂದಿಗೆ ಪ್ರಸ್ತುತ ಉತ್ತಮ ಆದಾಯ ಗಳಿಸುತ್ತಿದ್ದಾರೆ.

ಅಂತಾರಾಜ್ಯ ಮಾರುಕಟ್ಟೆ: ಕೈಗಾರಿಕೆಯಲ್ಲಿ ಕುಟುಂಬದ ಸದಸ್ಯರೊಂದಿಗೆ ಬೇರೆ ರಾಜ್ಯಗಳ 16 ಕಾರ್ಮಿಕರು ಕಾರ್ಯನಿರ್ವಹಿಸುತ್ತಿದ್ದು, ಎಲ್ಲರಿಗೂ ಆವರಣದಲ್ಲಿಯೇ ವಸತಿ ನಿರ್ಮಿಸಿಕೊಟ್ಟಿದ್ದಾರೆ. ರೇಷ್ಮೆ ಗೂಡನ್ನು ಕೆಲ ರೈತರು, ಕೋಲಾರ ಸರ್ಕಾರಿ ರೇಷ್ಮೆ ಮಾರುಕಟ್ಟೆ, ಆಂಧ್ರದ ಪಲಮನೇರು ರೇಷ್ಮೆ ಮಾರುಕಟ್ಟೆಯಿಂದಲೂ ತಂದು ನೂಲನ್ನು ತೆಗೆದು ಬೆಂಗಳೂರು, ಸೇಲಂನ ಮಾರುಕಟ್ಟೆಗೆ ಮಾರುತ್ತಿದ್ದಾರೆ. ದಿನಕ್ಕೆ 13 ಕೆಜಿ ರೇಷ್ಮೆ ನೂಲು ಸಿದ್ಧಪಡಿಸುತ್ತಿದ್ದಾರೆ. ರೇಷ್ಮೆ ಖರೀದಿ, ಸಿದ್ಧಪಡಿಸುವಿಕೆ, ನೂಲು ಸರಬರಾಜು, ಅದಕ್ಕೆ ತಗಲುವ ವಿದ್ಯುತ್ ಮತ್ತಿತರೆ ಸೇರಿ ದಿನಕ್ಕೆ ಒಟ್ಟು 70 ಸಾವಿ ರೂ. ಖರ್ಚು ಬರುತ್ತಿದೆ ಎನ್ನುತ್ತಾರೆ ಮಾಲೀಕರು.

ತಾಂತ್ರಿಕ ಶಿಕ್ಷಣ ಅಗತ್ಯ: ಯಾವುದೇ ಉದ್ಯಮಕ್ಕೂ ತಾಂತ್ರಿಕ ಶಿಕ್ಷಣ ಅವಶ್ಯ. ಇದು ತಾಂತ್ರಿಕತೆಯ ಬಗ್ಗೆ ಕ್ರಿಯಾತ್ಮಕ ರೂಪದಲ್ಲಿ ನೀಡಲಿದೆ. ಇದರಲ್ಲಿ ವಿದ್ಯಾರ್ಥಿಗಳು ಕೈಗಾರಿಕೆಗೆ ಅವಶ್ಯವಿರುವ ತರಬೇತಿ ಪಡೆದು ಮುಂದೆ ಕೈಗಾರಿಕೆಗಳಲ್ಲಿ ಕೆಲಸ ಮಾಡಬಹುದು ಅಥವಾ ಅದೇ ಕೈಗಾರಿಕೆಗೆ ಬೇಕಾಗುವ ಕಚ್ಚಾ ವಸ್ತುಗಳನ್ನು ಅಥವಾ ಪೂರಕ ಕೆಲಸಗಳನ್ನು ಮಾಡುವಷ್ಟು ಪ್ರಬುದ್ಧರಾಗುತ್ತಾರೆೆ. ನರೇಶ್ ಕೂಡ ಸಾಕಷ್ಟು ಶಿಕ್ಷಣದ ವೇಳೆ ಪಡೆದ ತಾಂತ್ರಿಕ ಅರಿವು ಈಗ ಉದ್ಯಮಕ್ಕೆ ವರದವಾಗಿದೆ.

ವಿದ್ಯಾರ್ಥಿಗಳಿಗೆ ಮಾರ್ಗದರ್ಶನ: ಕೈಗಾರಿಕೆಯಲ್ಲಿ ನೂಲು ಸಿದ್ಧಪಡಿಸುವುದಷ್ಟೇ ಅಲ್ಲದೆ ಇತರ ಯುವಕರು ಭವಿಷ್ಯದಲ್ಲಿ ಸ್ವಂತ ಉದ್ಯಮ ಮಾಡಿಕೊಳ್ಳಲು ಬೇಕಾಗುವ ಕೌಶಲ್ಯಗಳನ್ನೂ ಇಲ್ಲಿ ಕಲಿಸಲಾಗುತ್ತಿದೆ. ಈಗಾಗಲೇ ರಾಯಲ್ಪಾಡು ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಕಾಲೇಜು ಬಿಡುವಿನ ವೇಳೆ ಇವರ ಕೈಗಾರಿಕೆಗೆ ವಾರದಲ್ಲಿ ಇಂತಿಷ್ಟು ದಿನ ಭೇಟಿ ನೀಡಿ, ನರೇಶ್ ಅವರೊಂದಿಗೆ ಮಾರ್ಗದರ್ಶನ ಪಡೆಯುತ್ತಿರುವುದ ವಿಶೇಷ.

ಹಳ್ಳಿಯಲ್ಲೇ ಇದ್ದು ಕೆಲಸ ಮಾಡಿ: ಹಳ್ಳಿಗಳಿಂದ ನಗರ ಪ್ರದೇಶಗಳ ಖಾಸಗಿ ಕಂಪನಿ ಕೆಲಸಕ್ಕೆ ಯುವಕರು ವಲಸೆ ಹೋಗುತ್ತಿದ್ದು, ಅಲ್ಲಿ ಹಗಲಿರುಳು ದುಡಿದರೂ ನೆಮ್ಮದಿಯ ಜೀವನವಿಲ್ಲದಂತಾಗಿದೆ. ಇದರಿಂದ ಆರೋಗ್ಯದ ಮೇಲೆ ಅನೇಕ ಪ್ರಭಾವ ಬೀರುತ್ತಿದೆ. ಇನ್ನು ಕೆಲವರು ಸರ್ಕಾರಿ ಕೆಲಸ ಸಿಗಲಿಲ್ಲವೆಂದು ಕಾಲಕಳೆಯುತ್ತಿದ್ದಾರೆ. ಯುವಕರು ತನ್ನಲ್ಲಿರುವ ಕೌಶಲ, ಚಿಂತನೆ ಬಳಸಿಕೊಂಡು ಸ್ವಾವಲಂಬಿ, ನೆಮ್ಮದಿ ಜೀವನ ನಡೆಸಬೇಕು. - ನರೇಶ್ ಸಿದ್ಧಿವಿನಾಯಕ ಕೈಗಾರಿಕೆ ಮಾಲೀಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net