

ಮೂಡಿಗೆರೆ: ಕಿರುಗುಂದ ಗ್ರಾಮದ ಕಜ್ಜೆಹಳ್ಳಿ ಮೂಲಕ ದೇವವೃಂದಕ್ಕೆ ತೆರಳುವ 8 ಕಿಮೀ ರಸ್ತೆ ಡಾಂಬರೀಕರಣಕ್ಕೆ 7.5 ಕೋಟಿ ರೂ. ಅನುದಾನ ಮೀಸಲಿಟ್ಟಿದ್ದೇವೆ. ಸದ್ಯದಲ್ಲೇ ಕಾಮಗಾರಿ ಆರಂಭವಾಗುತ್ತದೆ ಎಂದು ವರ್ಷದ ಹಿಂದೆ ಶಾಸಕ ತಿಳಿಸಿದ್ದರು. ಆದರೆ ಈವರೆಗೂ ರಸ್ತೆ ಅಭಿವೃದ್ಧಿ ಸೂಚನೆಯೇ ಕಂಡುಬಂದಿಲ್ಲ.
1990 ರಲ್ಲಿ ಕಜ್ಜೇಹಳ್ಳಿ ಎಸ್ಟೇಟ್ವರೆಗೆ 3 ಕಿಮೀ ಡಾಂಬರೀಕರಣವಾಗಿತ್ತು. ನಂತರ ಕಜ್ಜೆಹಳ್ಳಿ-ದೇವವೃಂದ ರಸ್ತೆ ಡಾಂಬರೀಕರಣಗೊಂಡಿಲ್ಲ. ಚರಂಡಿಯನ್ನೂ ದುರಸ್ತಿ ಮಾಡಿಲ್ಲ. ಡಾಂಬರು ಮಳೆ ನೀರಿನಲ್ಲಿ ಕೊಚ್ಚಿಹೋಗಿ ಮಣ್ಣಿನ ರಸ್ತೆ ಮಾತ್ರ ಉಳಿದಿದೆ. ಕಿರುಗುಂದ ಗ್ರಾಮ ಕೊನೆಗೊಂಡ ಕಜ್ಜೇಹಳ್ಳಿ ಬಳಿ 200 ಮೀಟರ್ ಗಿರಿಜನ ಅಭಿವೃದ್ಧಿ ಯೋಜನೆ ಅಡಿ ರಸ್ತೆಗೆ ಕಾಂಕ್ರಿಟೀಕರಣ ನಡೆದಿದೆ. ಮಾನಲ್ ಗ್ರಾಮದಲ್ಲಿ 1 ಕಿಮೀ ಕಾಂಕ್ರಿಟ್ ರಸ್ತೆಯಾಗಿದೆ. ಉಳಿದಂತೆ ಇದುವರೆಗೂ ರಸ್ತೆ ದುರಸ್ತಿಗೆ ಜನಪ್ರತಿನಿಧಿಗಳಾಗಲೀ, ಅಧಿಕಾರಿಗಳಾಗಲೀ ಗಮನಹರಿಸಿಲ್ಲ.
ಕಳೆದ ವರ್ಷ ಶಾಸಕ ಎಂ.ಪಿ.ಕುಮಾರಸ್ವಾಮಿ ಅವರಿಗೆ ಮನವಿ ನೀಡಿ ರಸ್ತೆ ದುರಸ್ತಿಪಡಿಸುವಂತೆ ಒತ್ತಾಯಿಸಿದಾಗ ರಸ್ತೆ ಅಭಿವೃದ್ಧಿಗೆ ಅನುದಾನ ಮೀಸಲಿಟ್ಟಿದ್ದೇವೆ. ಸದ್ಯದಲ್ಲೇ ಕಾಮಗಾರಿ ಆರಂಭವಾಗುತ್ತದೆ ಎಂದು ತಿಳಿಸಿದ್ದರು. ನಂತರ ಮರೆತಿದ್ದಾರೆ ಎಂಬುದು ಗ್ರಾಮಸ್ಥರ ಆರೋಪ.
ಜನಪ್ರತಿನಿಧಿಗಳು, ಅಧಿಕಾರಿಗಳು ಭರವಸೆ ನೀಡಿ ಕಾಲ ಕಳೆಯುತ್ತಿದ್ದಾರೆ. ಶಾಲೆ ಕಾಲೇಜು ಆರಂಭವಾದರೆ ವಿದ್ಯಾರ್ಥಿಗಳು ತಿರುಗಾಡಲು ಕಷ್ಟವಾಗುತ್ತದೆ. ತುರ್ತಾಗಿ ರಸ್ತೆ ಕಾಮಗಾರಿ ಆರಂಭಿಸದಿದ್ದರೆ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಕಿರುಗುಂದ ಗ್ರಾಮದ ಕೆ.ಕೆ.ರಾಮಯ್ಯ ಎಚ್ಚರಿಕೆ.
ಕಿರುಗುಂದ ಗ್ರಾಮದಿಂದ ದೇವವೃಂದ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಅಭಿವೃದ್ಧಿಗೆ 7.5 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ. ಟೆಂಡರ್ ಪ್ರಕ್ರಿಯೆ ನಡೆದಿದೆ. ಸದ್ಯದಲ್ಲೇ ಕಾಮಗಾರಿ ಆರಂಭಿಸಲಾಗುವುದು. ಪಿಎಂಜೆಎಸ್ವೈಗೆ ಕಾಮಗಾರಿ ಉಸ್ತುವಾರಿ ವಹಿಸಲಾಗಿದೆ ಎಂದು ಶಾಸಕ ಎಂ.ಪಿ.ಕುಮಾರಸ್ವಾಮಿ ಮಾಹಿತಿ ನೀಡಿದ್ದಾರೆ.