ಹಳ್ಳಿಗಳ ಸಮಸ್ಯೆ ಪರಿಹಾರಕ್ಕೆ ಶ್ರಮಿಸಿ

Village, Problem, MLA, C.S. Nadagowda, Public Relations Sabha, Muddebihala, Krishna River Bank,
ಮುದ್ದೇಬಿಹಾಳ ಕ್ಷೇತ್ರದ ಕಂದಗನೂರ ಗ್ರಾಮದಲ್ಲಿನ ಜನಸಂಪರ್ಕ ಸಭೆಯಲ್ಲಿ ಶಾಸಕ ಸಿ.ಎಸ್.ನಾಡಗೌಡ ಮಾತನಾಡಿದರು. ಮಲ್ಲು ಅಪರಾ, ಗುರು ತಾರನಾಳ, ಬಿ.ಕೆ.ಬಿರಾದಾರ, ಸುರೇಶ ಭಾವಿಕಟ್ಟಿ, ಖೂಬಾಸಿಂಗ್ ಜಾಧವ, ಆರ್.ಎಸ್.ಹಿರೇಗೌಡರ, ಶಿವಮೂರ್ತಿ ಕುಂಬಾರ ಇತರರಿದ್ದರು.
Published on

ಮುದ್ದೇಬಿಹಾಳ: ಗ್ರಾಮೀಣ ಭಾಗದ ಹಳ್ಳಿಗಳ ಸಮಸ್ಯೆಗಳ ಪರಿಹಾರಕ್ಕೆ ಪಂಚಾಯಿತಿಯವರು, ಅಧಿಕಾರಿಗಳು ಹೆಚ್ಚಿನ ಮುತುವರ್ಜಿ ವಹಿಸಬೇಕು. ಶಾಲೆಗಳ ಸ್ವಚ್ಛತೆ, ದುರಸ್ತಿ ಮುಂತಾದವುಗಳಿಗೆ ಎಸ್‌ಡಿಎಂಸಿಯವರು ಕ್ರಿಯಾಶೀಲರಾಗಿ ಕೆಲಸ ಮಾಡಬೇಕು ಎಂದು ಶಾಸಕ, ಕೆಎಸ್‌ಡಿ ನಿಗಮದ ಅಧ್ಯಕ್ಷ ಸಿ.ಎಸ್.ನಾಡಗೌಡ ಹೇಳಿದರು.

ಕೃಷ್ಣಾ ನದಿ ತೀರದ ಗ್ರಾಮಗಳಲ್ಲಿ ಶನಿವಾರ ಜನಸಂಪರ್ಕ ಸಭೆ ನಡೆಸಿ, ಗ್ರಾಮಸ್ಥರಿಂದ ಅಹವಾಲು ಸ್ವೀಕರಿಸಿ, ಆಯಾ ಗ್ರಾಮಗಳಿಗೆ ಸಿಕ್ಕಿರುವ ಸೌಲಭ್ಯಗಳ ವಿವರಗಳನ್ನು ಜನತೆಗೆ ತಿಳಿಸಿ ಅವರು ಮಾತನಾಡಿದರು.

ಹೊಳಿದಂಡಿಯ ಮುಳುಗಡೆ ಪ್ರದೇಶದಲ್ಲಿ ವಿದ್ಯುತ್ ಕಂಬ ಹಾಕುವ ಕಂದಗನೂರ ಸೇರಿ ಇತರ ಹಳ್ಳಿಗಳ ಜನರ ಬೇಡಿಕೆಗೆ ಉತ್ತರಿಸಿದ ಶಾಸಕರು, ಅಂಥ ಕಡೆ ಕಂಬ ಹಾಕಲು ಅವಕಾಶ ಇಲ್ಲ. ಹೊಳೆಯಲ್ಲಿ ಪ್ರವಾಹ ಬಂದಾಗ ಸಮಸ್ಯೆ ಆಗುತ್ತದೆ. ನೀರು ಹೆಚ್ಚು ನಿಲ್ಲದ ಕಡೆ ಕಂಬ ಹಾಕಬೇಕು. ಪ್ರವಾಹದ ಲೆವೆಲ್‌ಗಿಂತ 2 ಮೀಟರ್ ದೂರದಲ್ಲಿ ಕಂಬ ಹಾಕಿ ಅನುಕೂಲ ಮಾಡಿಕೊಂಡುವಂತೆ ಹೆಸ್ಕಾಂನ ಸೆಕ್ಷನ್ ಅಧಿಕಾರಿ ಬಿ.ಎಸ್.ಯಲಗೋಡಗೆ ಸೂಚಿಸಿದರು.

ರಾಜ್ಯ ಸರ್ಕಾರದ ಮುಖ್ಯಮಂತ್ರಿ ಆರೋಗ್ಯ ಯೋಜನೆ, ಸಮುದಾಯ ಭವನಗಳಿಗೆ ಜಾಗದ ಸಮಸ್ಯೆ, ಪರಿಶಿಷ್ಟರಿಗೆ ಸ್ಮಶಾನ ಇಲ್ಲದಿರುವ ಸಮಸ್ಯೆ, ಕುಡಿವ ನೀರಿನ ಸಮಸ್ಯೆ, ಜೆಜೆಎಂ ಕಾಮಗಾರಿ ಕಳಪೆ, ಸವಳು ಜವಳು ಸಮಸ್ಯೆ, ರಸ್ತೆ ನಿರ್ಮಾಣ, ಶಾಲೆಗಳ ಕೊಠಡಿ ದುರಸ್ತಿ, ಕಾಂಪೌಂಡ್ ನಿರ್ಮಾಣ, ಸಮುದಾಯ ಶೌಚಗೃಹ, ಸೇತುವೆ ನಿರ್ಮಾಣ, ಮಾಶಾಸನ ಸೇರಿ ಹಲವು ವಿಚಾರಗಳು ಸಭೆಯಲ್ಲಿ ಚರ್ಚೆಗೆ ಬಂದವು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗುರು ತಾರನಾಳ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಬಿ.ಕೆ.ಬಿರಾದಾರ, ಆಯಾ ಗ್ರಾಪಂಗಳ ಪ್ರತಿನಿಧಿಗಳು, ಸ್ಥಳೀಯ ಮುಖಂಡರು, ಅಧಿಕಾರಿಗಳು ಇದ್ದರು.

ಉತಾರ ಸಮೇತ ಅರ್ಜಿ ಸಲ್ಲಿಸಿ: ಮತಕ್ಷೇತ್ರದಲ್ಲಿ ತೊಗರಿ ಸಮಸ್ಯೆಗೀಡಾಗಿರುವ ಮಾಹಿತಿ ಇದೆ. ಯಾವ ಕಾರಣಕ್ಕಾಗಿ ಹೀಗಾಗಿದೆ, ಬೀಜದ ಸಮಸ್ಯೆಯೋ, ಹವಾಮಾನ ಕಾರಣವೋ ಎನ್ನುವುದು ಕೃಷಿ ವಿಜ್ಞಾನಿಗಳು ಕೊಡುವ ವರದಿಯಿಂದ ಖಚಿತವಾಗುತ್ತದೆ. ಪತ್ರಿಕೆಗಳಲ್ಲಿ (ವಿಜಯವಾಣಿ ದಿನಪತ್ರಿಕೆ) ತೊಗರಿ ಬಗ್ಗೆ ಬಂದಿರುವ ವರದಿಗಳು ಸರ್ಕಾರದ ಗಮನಕ್ಕೆ ಬಂದಿವೆ. ಸರ್ಕಾರ ಆದಷ್ಟು ಬೇಗ ಸೂಕ್ತ ತೀರ್ಮಾನ ಕೈಗೊಳ್ಳುತ್ತದೆ. ಸಮಸ್ಯೆ ಎದುರಿಸುತ್ತಿರುವ ರೈತರು ವಿಮೆ ಮಾಡಿಸಿದ್ದರೆ ತಕ್ಷಣ ಉತಾರ ಸಮೇತ ಅರ್ಜಿ ಸಲ್ಲಿಸಬೇಕು. ವಿಮೆ ಮಾಡಿಸದವರಿಗೆ ಹೇಗೆ ನೆರವಾಗಬೇಕು ಅನ್ನೋದು ಸರ್ಕಾರದ ಮಟ್ಟದಲ್ಲಿ ತೀರ್ಮಾನವಾಗಬೇಕಿದೆ ಎಂದು ನಾಡಗೌಡರು ತಿಳಿಸಿದರು.

ಸಚಿವ ಸ್ಥಾನದ ಆಕಾಂಕ್ಷಿ: ನಾನು ಸಚಿವ ಸ್ಥಾನದ ಆಕಾಂಕ್ಷಿ. ಸೀನಿಯಾರಿಟಿಯಲ್ಲಿ 10-11ನೇ ಸ್ಥಾನದಲ್ಲಿದ್ದೇನೆ. ಸೀನಿಯಾರಿಟಿ, ಪಕ್ಷನಿಷ್ಠೆ, ಚಾರಿತ್ರೃ, ಹಿನ್ನೆಲೆ, ಪಕ್ಷಾಂತರ ಮಾಡಿದ್ದಾರೆಯೇ?, ಜನತೆಗೆ ಮೋಸ ಮಾಡಿದ್ದಾರೆಯೇ? ಮುಂತಾದವುಗಳನ್ನು ನೋಡಿ ಎಲ್ಲ ಅರ್ಹತೆಗಳಿದ್ದವರಿಗೆ ಸಚಿವ ಸ್ಥಾನ ಕೊಡಬೇಕು. ಇದು ಪಕ್ಷಕ್ಕೆ ಶಕ್ತಿ, ಮೆರುಗು ನೀಡುತ್ತದೆ ಎಂದು ನಾಡಗೌಡರು ತಮ್ಮ ಮನದಿಂಗಿತ ಬಿಚ್ಚಿಟ್ಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net