

ಪಾಂಡವಪುರ: ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ರೈತರಿಗೆ ನೀಡಿರುವ ಯೋಜನೆಗಳನ್ನು ತಿಳಿಸಲು ಫೆ.12ರಿಂದ ಗ್ರಾಮ ಪರಿಕ್ರಮ ಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ರೈತಮೋರ್ಚಾ ರಾಜ್ಯ ಉಪಾಧ್ಯಕ್ಷ ಎಂ.ಆರ್.ಕುಮಾರಸ್ವಾಮಿ ತಿಳಿಸಿದರು.
ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರ ಆಶಯದಂತೆ ಗ್ರಾಮ ಪರಿಕ್ರಮ ಯಾತ್ರೆ ದೇಶದಾದ್ಯಂತ ನಡೆಯಲಿದ್ದು, ಫೆ.12ರಂದು ಉತ್ತರ ಪ್ರದೇಶದಲ್ಲಿ ಜೆ.ಪಿ.ನಡ್ಡಾ ಅವರು ಯಾತ್ರೆಗೆ ಚಾಲನೆ ನೀಡಲಿದ್ದಾರೆ. ಅದೇ ರೀತಿ ಮಂಡ್ಯ ಜಿಲ್ಲೆಯ ಚಂದಗಾಲು ಗ್ರಾಮದಲ್ಲಿ ಸೋಮವಾರ ಗೋ ಮತ್ತು ಕೃಷಿ ಪರಿಕರಗಳಿಗೆ ಪೂಜೆ ಸಲ್ಲಿಸುವ ಮೂಲಕ ಯಾತ್ರೆ ಚಾಲನೆಗೊಳ್ಳಲಿದೆ. ಪ್ರತಿದಿನ ನಾಲ್ಕರಿಂದ ಐದು ಗ್ರಾಮಗಳಂತೆ ಒಂದು ತಿಂಗಳು ನಡೆಯಲಿದೆ. ಈ ವೇಳೆ ಬೃಹತ್ ಎಲ್‌ಇಡಿ ಪರದೆಯ ಮೂಲಕ ಕೇಂದ್ರ ಸರ್ಕಾರ ನೀಡಿರುವ ಯೋಜನೆಗಳನ್ನು ರೈತರಿಗೆ ಮನದಟ್ಟು ಮಾಡಿಕೊಡಲಾಗುವುದು ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.
ಕೇಂದ್ರದಿಂದ ನೈಸರ್ಗಿಕ ಕೃಷಿಗೆ ನೀಡಲಾಗಿರುವ ಒತ್ತು, 23 ಬೆಳೆಗಳಿಗೆ ಬೆಂಬಲ ಘೋಷಣೆ ಮಾಡಿರುವುದು, ಫಸಲ್ ಬಿಮಾ ಯೋಜನೆ ಮೂಲಕ 1.4 ಲಕ್ಷ ಕೋಟಿ ರೂ. ವರ್ಗಾವಣೆ, 11.8 ಕೋಟಿ ರೈತರಿಗೆ ಕಿಸಾನ್ ಸಮ್ಮಾನ್ ಯೋಜನೆಯಿಂದ 2.8 ಲಕ್ಷ ಕೋಟಿ ರೂ. ತಲುಪಿಸಿರುವುದು, ಸಿಂಚಾಯಿ ಯೋಜನೆ ಮೂಲಕ 93 ಸಾವಿರ ಕೋಟಿ ರೂ., ಕೃಷಿ ರಫ್ತು 4 ಲಕ್ಷ ಕೋಟಿ ರೂ.ಗೆ ಹೆಚ್ಚಳ, ಕೃಷಿ ಬಜೆಟ್‌ಗೆ ನೀಡುವ ಹಣ ಹೆಚ್ಚಳ, 23 ಕೋಟಿ ರೈತರಿಗೆ ಮಣ್ಣಿನ ಕಾರ್ಡ್ ವಿತರಣೆ, ರಸಗೊಬ್ಬರಗಳ ಸಬ್ಸಿಡಿ 500 ರಷ್ಟು ಏರಿಕೆ ಸೇರಿದಂತೆ ಕೇಂದ್ರದ ಅನೇಕ ಯೋಜನೆಗಳನ್ನು ಕರಪತ್ರವನ್ನು ರೈತ ಕುಟುಂಬಗಳಿಗೆ ವಿತರಿಸಲಾಗುವುದು ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಜೋಗೀಗೌಡ, ಮಂಜು ಇತರರು ಇದ್ದರು.