

ಎನ್.ಆರ್.ಪುರ: ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮಂಜೂರಾದ ಮನೆಗಳ ಇ-ಸ್ವತ್ತನ್ನು ಗ್ರಾಪಂನವರೇ ಮಾಡಿಸಿಕೊಡಬೇಕು ಎಂದು ನಾಗಲಾಪುರ ಗ್ರಾಪಂ ನೋಡಲ್ ಅಧಿಕಾರಿ ಹಾಗೂ ತಹಸೀಲ್ದಾರ್ ತನುಜ.ಟಿ.ಸವದತ್ತಿ ಹೇಳಿದರು.
ನಾಗಲಾಪುರ ಗ್ರಾಮ ಪಂಚಾಯಿತಿಯಲ್ಲಿ ನಡೆದ ಗ್ರಾಮ ಸ್ಪಂದನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕಂದಾಯ ಇಲಾಖೆಯಿಂದ ಮನೆ ಕಟ್ಟಿಕೊಂಡಿರುವರಿಗೆ ಹಕ್ಕುಪತ್ರ ನೀಡಲಾಗುವುದು. ನಂತರ ಚೆಕ್ಕಬಂಧಿ ನೋಡಿಕೊಂಡು ಗ್ರಾಮ ಪಂಚಾಯಿತಿಯವರು ಇ-ಸ್ವತ್ತು ಮಾಡಿಕೊಡಬೇಕು. ಈ ಬಗ್ಗೆ ಗ್ರಾಮ ಪಂಚಾಯಿತಿಯವರು ಜಿಪಂ ಕಾರ್ಯನಿರ್ವಹಣಾಧಿಕಾರಿಗಳಿಂದ ಸೂಕ್ತ ಸಲಹೆ ಪಡೆಯಬಹುದು. ಚೆಕ್ಕಬಂಧಿ ವ್ಯತ್ಯಾಸ ಇದ್ದರೆ ಸರ್ವೇ ಮಾಡಿಸಿ ಸರಿಪಡಿಸಬೇಕು. ಗ್ರಾಪಂ ಸಾಮಾನ್ಯ ಸಭೆಯಲ್ಲಿ ಈ ಬಗ್ಗೆ ತೀರ್ಮಾನ ತೆಗೆದುಕೊಂಡು ಮನೆ ಕಟ್ಟಿಕೊಂಡು ಹಕ್ಕುಪತ್ರ ಪಡೆದವರಿಗೆ ಇ-ಸ್ವತ್ತು ಮಾಡಿಸಿಕೊಡಬೇಕು ಎಂದರು.
ಈ ವರ್ಷ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಗ್ರಾಮಸ್ಪಂದನ ಕಾರ್ಯಕ್ರಮ ಪ್ರತಿ ತಿಂಗಳ ಮೂರನೇ ಶನಿವಾರ ಒಂದೊಂದು ಗ್ರಾಪಂಯಲ್ಲಿ ನಡೆಯಲಿದೆ. ತಾಲೂಕಿನಲ್ಲಿ ಪ್ರಥಮ ಬಾರಿಗೆ ನಾಗಲಾಪುರ ಗ್ರಾಪಂನಲ್ಲಿ ಗ್ರಾಮಸ್ಪಂದನ ಪ್ರಾರಂಭವಾಗಿದೆ. ಗ್ರಾಮಸ್ಥರು ತಮ್ಮ ಸಮಸ್ಯೆಗಳ ಬಗ್ಗೆ ಅರ್ಜಿ ನೀಡಬಹುದು ಎಂದರು.