ನಲ್ ಜಲ್ ಮಿತ್ರ ಯೋಜನೆಗೆ ಗ್ರಾಪಂಗಳ ವಿರೋಧ?

Nal jal mitra
Published on

| ವಿಲಾಸ ಮೇಲಗಿರಿ ಬೆಂಗಳೂರು

ಮಹಿಳೆಯರನ್ನು ಸ್ವಾವಲಂಬಿಯಾಗಿಸಲು ಹಾಗೂ ಸರ್ಕಾರದ ಕಾರ್ಯಕ್ರಮಗಳ ಸುಲಲಿತ ನಿರ್ವಹಣೆ ಮಾಡಲು ಸ್ವಸಹಾಯ ಸಂಘದ ಮಹಿಳೆಯರಿಗೆ ಬಹು ಕೌಶಲ ತರಬೇತಿ ನೀಡಲು ಸರ್ಕಾರ ಮುಂದಾಗಿದೆ.

ಗ್ರಾಮ ಪಂಚಾಯಿತಿಗಳಲ್ಲಿ ನಲ್ ಜಲ್ ಕಾರ್ಯಕ್ರಮ ನಿರ್ವಹಣೆ ಮಾಡಲು ‘ನಲ್ ಜಲ್ ಮಿತ್ರ’ ಹೆಸರಿನಲ್ಲಿ ನುರಿತ ಮಾನವ ಸಂಪನ್ಮೂಲ ಅಭಿವೃದ್ಧಿಪಡಿಸಲು ತರಬೇತಿ ನೀಡಲಾಗುತ್ತದೆ. ತರಬೇತಿಗೆ ತಗಲುವ ವೆಚ್ಚವನ್ನು ಗ್ರಾಪಂ ಸಂಪನ್ಮೂಲದಲ್ಲಿ ಭರಿಸುವಂತೆ ಸೂಚಿಸಿರುವುದು ಗ್ರಾಪಂಗಳ ಅಸಮಾಧಾನಕ್ಕೆ ಕಾರಣವಾಗಿದೆ.

ಸ್ಥಳೀಯ ವ್ಯಕ್ತಿಗಳಿಗೆ ಬಹು ಕೌಶಲ ತರಬೇತಿಯಡಿ ಕೊಳಾಯಿ, ವಿದ್ಯುತ್ ಕೆಲಸ, ಕಲ್ಲು-ಮಣ್ಣು ಕೆಲಸ, ಉಪಕರಣ ಮತ್ತು ಯಂತ್ರೋಪಕರಣ ರಿಪೇರಿ ಕೆಲಸಗಳ ತರಬೇತಿ ನೀಡಿ ವೃತ್ತಿಪರ ಶಿಕ್ಷಣ ಮತ್ತು ರಾಷ್ಟ್ರೀಯ ತರಬೇತಿ ಮಂಡಳಿ ಪ್ರಮಾಣ ಪತ್ರ ನೀಡಲಾಗುತ್ತದೆ. ಪ್ರತಿ ಗ್ರಾಪಂನಲ್ಲಿ ಇಬ್ಬರಿಗೆ ತರಬೇತಿ ನೀಡಿ ಪ್ರಮಾಣ ಪತ್ರ ನೀಡಲಾಗುತ್ತದೆ. ಸಂಜೀವಿನಿ ಒಕ್ಕೂಟದ ಸ್ವ-ಸಹಾಯ ಸಂಘದ ಇಬ್ಬರು ಸದಸ್ಯರನ್ನು ಗ್ರಾಪಂ ಒಕ್ಕೂಟಗಳು ಗುರುತಿಸಿ ಅಧ್ಯಕ್ಷರು ಮತ್ತು ಪಿಡಿಒಗಳ ಸಹಮತದೊಂದಿಗೆ ಆಯ್ಕೆ ಮಾಡಲಾಗುತ್ತದೆ.

ತರಬೇತಿಗೆ 30 ಕೋಟಿ ರೂ.ವೆಚ್ಚ: ಪ್ರತಿ ಅಭ್ಯರ್ಥಿಗೆ 24,790 ರೂ.ಗಳಂತೆ ಇಬ್ಬರು ಅಭ್ಯರ್ಥಿಗಳಿಗೆ ತಗುಲುವ ತರಬೇತಿ ವೆಚ್ಚವನ್ನು ಗ್ರಾಪಂ 15ನೇ ಹಣಕಾಸು ಆಯೋಗ ಹಾಗೂ ಇತರ ಅನುದಾನದಿಂದ ಭರಿಸಬೇಕು ಎಂದು ಸುತ್ತೋಲೆ ಹೊರಡಿಸಿ ನಿರ್ದೇಶನ ನೀಡಲಾಗಿದೆ. ರಾಜ್ಯದಲ್ಲಿ ಸುಮಾರು 6000 ಗ್ರಾಪಂಗಳಿದ್ದು, ಪ್ರತಿ ಗಾಪಂಗೆ ಇಬ್ಬರಂತೆ ಒಟ್ಟು 12000 ಮಹಿಳಾ ಸ್ವ-ಸಹಾಯ ಸಂಘದ ಸದಸ್ಯರಿಗೆ ಬಹುಕೌಶಲ ತರಬೇತಿ ನೀಡಲಾಗುತ್ತದೆ. ಇದಕ್ಕೆ ಸುಮಾರು 30 ಕೋಟಿ ರೂ.ವೆಚ್ಚ ತಗುಲುತ್ತದೆ.

ಅನೇಕ ಕಡೆ ಯೋಜನೆ ಪೂರ್ಣಗೊಂಡಿಲ್ಲ: ಕೇಂದ್ರ ಸರ್ಕಾರದ ಜಲಶಕ್ತಿ ಸಚಿವಾಲಯ ಕುಡಿಯುವ ನೀರು ಒದಗಿಸಲು ನಲ್ ಜಲ್ ಯೋಜನೆ ರೂಪಿಸಿ 2019 ರಿಂದ ಅನುಷ್ಠಾನಗೊಳಿಸುತ್ತಿದೆ. ರಾಜ್ಯದಲ್ಲಿ ಇನ್ನೂ ಪೂರ್ಣ ಪ್ರಮಾಣದಲ್ಲಿ ಯೋಜನೆ ಅನುಷ್ಠಾನಗೊಂಡಿಲ್ಲ. ಇದುವರೆಗೆ ಶೇ.50-60 ಪ್ರಮಾಣದಲ್ಲಿ ಮಾತ್ರ ಸಾಕಾರಗೊಂಡಿದೆ ಎನ್ನಲಾಗಿದೆ.

ಮುಂದೇನು ಎಂಬ ಸ್ಪಷ್ಟತೆ ಇಲ್ಲ: ತರಬೇತಿ ಬಳಿಕ ಅವರನ್ನು ಹೇಗೆ ಬಳಸಿಕೊಳ್ಳಬೇಕು? ವೇತನ ಹೇಗೆ ನೀಡಬೇಕು? ಯಾರು ನೀಡಬೇಕು? ಎಷ್ಟು ನೀಡಬೇಕು? ಎಷ್ಟು ಗಂಟೆ ಕೆಲಸ? ಸ್ವರೂಪವೇನು? ಎಂಬ ಸ್ಪಷ್ಟತೆ ಸುತ್ತೋಲೆಯಲ್ಲಿ ಇಲ್ಲ. ಹಾಗಾಗಿ ಗ್ರಾಪಂಗಳು ಗೊಂದಲದಲ್ಲಿ ಸಿಲುಕಿವೆ.

ಚಾಲನಾ ತರಬೇತಿ ಯಶಸ್ವಿಯಾಗಿಲ್ಲ: ಈ ಹಿಂದೆ ಕಸ ವಿಲೇವಾರಿ ವಾಹನ ಚಾಲನೆಗೆ ಮಹಿಳೆಯರಿಗೆ ತರಬೇತಿ ನೀಡಲಾಗಿತ್ತು. ಆದರೆ ಅದು ಪೂರ್ಣ ಪ್ರಮಾಣದಲ್ಲಿ ಯಶಸ್ವಿಯಾಗಿಲ್ಲ. ತರಬೇತಿ ಪಡೆದ ಬಹುತೇಕ ಮಹಿಳೆಯರು ಕಸ ವಿಲೇವಾರಿ ಘಟಕ ಚಾಲನೆ ಮಾಡುತ್ತಿಲ್ಲ. ಇದಕ್ಕೆ ಗ್ರಾಪಂಗಳು ಮಾಡಿದ ವೆಚ್ಚ ವ್ಯರ್ಥವಾಗಿದೆ. ಈಗ ನಲ್ ಜಲ್ ಮಿತ್ರ ತರಬೇತಿ ಕೊಟ್ಟರೂ ಯಶಸ್ವಿಯಾಗುವ ಗ್ಯಾರಂಟಿ ಗ್ರಾಪಂ ಸದಸ್ಯರಿಗೆ ಇಲ್ಲ. ಹಾಗಾಗಿ ಈ ಬಗ್ಗೆ ಅಪಸ್ವರ ಕೇಳಿ ಬಂದಿದೆ.

ನೀರಗಂಟಿಗಳಿಗೆ ತರಬೇತಿ ಏಕಿಲ್ಲ?: ಗ್ರಾಪಂ ಮಟ್ಟದಲ್ಲಿ ಇಬ್ಬರು ಕೌಶಲ ತರಬೇತಿ ಪಡೆದವರನ್ನು ಸಿದ್ಧಪಡಿಸಲಾಗುತ್ತದೆ. ತರಬೇತಿ ಪಡೆದವರು ಕೆಲಸ, ವೇತನ ಕೊಡುವಂತೆ ಕೇಳಬಹುದು, ಮುಂದಿನ ದಿನಗಳಲ್ಲಿ ಸಂಘಟಿತರಾಗಿ ನಿಶ್ಚಿತ ವೇತನ, ಕೆಲಸ ಕಾಯಂಗೆ ಬೇಡಿಕೆ ಇಡುವ ಸಾಧ್ಯತೆಗಳನ್ನೂ ತಳ್ಳಿ ಹಾಕುವಂತಿಲ್ಲ. ಅಲ್ಲದೆ ಗ್ರಾಮಗಳಲ್ಲಿರುವ ನೀರು ಗಂಟಿಗಳಿಗೆ ತರಬೇತಿ ಕೊಡಬಹುದಿತ್ತಲ್ಲವೇ ಎಂಬ ಪ್ರಶ್ನೆಯೂ ತಲೆ ಎತ್ತಿದೆ.

ಸರ್ಕಾರ ಹಣದಲ್ಲೇ ತರಬೇತಿ ಕೊಡಬೇಕು: ಕೌಶಲ ಮತ್ತು ಉದ್ಯಮಶೀಲತಾ ತರಬೇತಿ ಇಲಾಖೆಯಿಂದಲೇ ತರಬೇತಿ ಕೊಡುವುದು ಸೂಕ್ತ. ಈಗಾಗಲೇ ಸೀಡಾಕ್, ಇಡಿಐಐ ಮೂಲಕ ಅನೇಕ ತರಬೇತಿ ಕೊಡಲಾಗುತ್ತದೆ. ಅದೇ ರೀತಿ ನಲ್ ಜಲ್ ಮಿತ್ರ ತರಬೇತಿಯನ್ನೂ ನೀಡಬೇಕು. ಗ್ರಾಪಂಗಳ ಅಭಿವೃದ್ಧಿ ಅನುದಾನಕ್ಕೆ ಕೈ ಹಾಕಬಾರದು ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ.

ಮಹಿಳೆಯರನ್ನು ಸ್ವಾವಲಂಬಿ ಮಾಡುವಲ್ಲಿ ತರಬೇತಿ ಕೊಡುವುದು ತಪ್ಪಲ್ಲ. ತರಬೇತಿಗೆ ತಗುಲುವ ವೆಚ್ಚವನ್ನು 15 ನೇ ಹಣಕಾಸು ಆಯೋಗ ಮತ್ತು ಇತರ ಸಂಪನ್ಮೂಲದಿಂದ ಕೊಡುವಂತೆ ಹೇಳುವುದು ಸರಿಯಲ್ಲ. ಮೇಲಿನ ಹಂತದಿಂದ ಕಾರ್ಯಕ್ರಮಗಳನ್ನು ರೂಪಿಸಿ ಗ್ರಾಪಂ ಮಟ್ಟದಲ್ಲಿ ಅವಶ್ಯಕತೆ ಇರಲಿ, ಇಲ್ಲದೇ ಇರಲಿ ಒತ್ತಡ ಹೇರುವುದು ಸೂಕ್ತವಲ್ಲ.

| ನಾಗೇಶ್ ಉಪ್ಪರಕನಹಳ್ಳಿ ರಾಜ್ಯ ಸಂಚಾಲಕ, ರಾಜ್ಯ ಗ್ರಾಪಂ ಸದಸ್ಯರ ಮಹಾ ಒಕ್ಕೂಟ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net