ಗ್ರಾಮಕ್ಕೊಬ್ಬ ನೋಡಲ್ ಅಧಿಕಾರಿ ನಿಯೋಜನೆ

27SND-01
Published on

ಸಿಂಧನೂರು: ತುಂಗಭದ್ರಾ ಜಲಾಶಯ ಭರ್ತಿಯಾದ ಹಿನ್ನೆಲೆಯಲ್ಲಿ ನದಿಗೆ 1.5 ಲಕ್ಷ ಕ್ಯೂಸೆಕ್ ನೀರು ಹರಿ ಬಿಡಲಾಗಿದೆ. ಇದರಿಂದಾಗಿ ತಾಲೂಕು ವ್ಯಾಪ್ತಿಯ ತುಂಗಭದ್ರಾನದಿ ಪಾತ್ರದ ಗ್ರಾಮಗಳಲ್ಲಿ ತಾಲೂಕು ಆಡಳಿತ ಹೈಅಲರ್ಟ್ ಘೋಷಿಸಿದ್ದು, ನದಿ ಹತ್ತಿರ ತೆರಳದಂತೆ ಎಚ್ಚರಿಕೆ ನೀಡಿದೆ.

ತುಂಗಭದ್ರಾ ನದಿಗೆ ಸದ್ಯ 1.20 ಲಕ್ಷ ಕ್ಯೂಸೆಕ್ ಒಳಹರಿವು ಇದೆ. 1.50 ಲಕ್ಷ ಕ್ಯೂಸೆಕ್ ನದಿಗೆ ನೀರು ಬಿಡುತ್ತಿರುವುದರಿಂದ ನದಿ ಪಾತ್ರದ ಸಿಂಗಾಪುರ, ಮುಕ್ಕುಂದಾ, ಭೈರೇಶ್ವರ ಕ್ಯಾಂಪ್, ದಢೇಸುಗೂರು, ಕೆಂಗಲ್, ಒಳಬಳ್ಳಾರಿ, ಹೆಡಗಿನಾಳ, ಬಾದರ್ಲಿ, ಚಿತ್ರಾಲಿ, ಚಿಂತಮಾನದೊಡ್ಡಿ, ಆಯನೂರು ಸೇರಿದಂತೆ 13 ಗ್ರಾಮಗಳ ನಿವಾಸಿಗಳು ಆತಂಕ ಪಡುವಂತಾಗಿದೆ.

2.50 ಲಕ್ಷದಿಂದ 3 ಲಕ್ಷ ಕ್ಯೂಸೆಕ್ ನೀರು ಬಿಟ್ಟರೆ ಸಿಂಗಾಪುರದಿಂದ ಆಯನೂರುವರೆಗೆ ಒಟ್ಟು 13 ಗ್ರಾಮಗಳಿಗೆ ನೀರು ನುಗ್ಗುತ್ತದೆ. ಸದ್ಯಕ್ಕೆ ಹೊಲ-ಗದ್ದೆಗಳಲ್ಲಿ ಬೆಳೆ ಇಲ್ಲದಿರುವುದರಿಂದ ನಷ್ಟದ ಭೀತಿಯಿಲ್ಲ. ಆದರೆ, ಹೊಲಗಳು ಹಾಳಾಗುವ ಭೀತಿ ಎದುರಾಗಿದೆ. ಈಗಾಗಲೇ ತಾಲೂಕು ಆಡಳಿತದಿಂದ ಪ್ರತಿ ಗ್ರಾಮಕ್ಕೆ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದ್ದು, ಎಲ್ಲ ಅಧಿಕಾರಿಗಳು ನದಿಪಾತ್ರದ ಹಳ್ಳಿಗಳಲ್ಲಿದ್ದು ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net