

ಜಮಖಂಡಿ: ಕೊಣ್ಣೂರ ಮಡ್ಡಿ ಪ್ಲಾಟ್ ನಿವಾಸಿಗಳಿಗೆ ಗ್ರಾಪಂನಿಂದ ಎನ್‌ಒಸಿ ಪತ್ರ ನೀಡಬೇಕೆಂದು ಒತ್ತಾಯಿಸಿ ಗ್ರಾಪಂ ಸದಸ್ಯ ಗದಿಗೆಪ್ಪ ಧಾರವಾಡ ಜಮಖಂಡಿ ತಾಪಂ ಕಚೇರಿ ಎದುರು ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸಿದರು.
ಅಲ್ಲಿನ ಒಟ್ಟು 108 ಕುಟುಂಬದವರಿಗೆ ಹಲವಾರು ವರ್ಷಗಳ ಹಿಂದೆ ಹಕ್ಕು ಪತ್ರ ನೀಡಿದ್ದಾರೆ. ಅಂದಿನಿಂದ ಇಲ್ಲಿಯವರೆಗೆ ಗ್ರಾಪಂಗೆ ಟ್ಯಾಕ್ಸ್ ತುಂಬಿಕೊಳ್ಳುತ್ತ ಬಂದಿದ್ದಾರೆ. ಆಶ್ರಯ ಯೋಜನೆಯಡಿ ಮನೆ ನಿರ್ಮಿಸಿಕೊಂಡಿದ್ದಾರೆ. ಆದರೆ, ಈಗ ಗ್ರಾಪಂ ಪಿಡಿಒ ಇಲ್ಲಸಲ್ಲದ ನೆಪ ಹಾಕುವ ಮೂಲಕ ನಿವಾಸಿಗಳಿಗೆ ಸಮಸ್ಯೆ ಉಂಟು ಮಾಡುತಿದ್ದಾರೆ ಎಂದು ಆರೋಪಿಸಿದರು.
ಅಲ್ಲಿನ ನಿವಾಸಿಗಳ ಮನೆಗಳಿಗೆ ವಿದ್ಯುತ್ ಮೀಟರ್ ಅಳವಡಿಸಿಕೊಳ್ಳಲು ಹೆಸ್ಕಾಂನವರು ಗ್ರಾಪಂನಿಂದ ಎನ್‌ಒಸಿ ಪತ್ರ ತರುವಂತೆ ಹೇಳುತ್ತಿದ್ದಾರೆ. ಆದರೆ, ಅವರು ನೀಡದೆ ಸತಾಯಿಸುತ್ತಿದ್ದಾರೆ ಎಂದು ಅಸಾಹಯಕತೆ ತೊಡಿಕೊಂಡರು.
ದೀಪಾವಳಿ ಸಂದರ್ಭ ಮನೆಯಲ್ಲಿ ದೀಪ ಹಚ್ಚಬೇಕು ಎಂದರೆ ಇಲ್ಲಿನ ಪಿಡಿಒ ವರ್ತನೆಯಿಂದ ಕತ್ತಲೆಯಲ್ಲಿ ದೀಪಾವಳಿ ಆಚರಿಸುವ ಸ್ಥಿತಿ ನಿರ್ಮಾಣವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇಲ್ಲಿರುವವರೆಲ್ಲರೂ ಕೂಲಿ ಕಾರ್ಮಿಕರು. ಅವರಿಗೆ ಉದ್ಯೋಗ ಖಾತ್ರಿ ಅಡಿ ಉದ್ಯೋಗ ನೀಡದೆ ಅನ್ಯಾಯ ಮಾಡಿದ್ದಾರೆ ಎಂದು ಗದಿಗೆಪ್ಪ ದೂರಿದರು. ಮುಖಂಡ ಮಹೇಶ ಕನ್ನಗಾರ ಇದ್ದರು.
ಮಡ್ಡಿ ಪ್ಲಾಟ್‌ನ ನಿವಾಸಿಗಳಿಗೆ ಮೂಲ ಸೌಲಭ್ಯ ಒದಗಿಸುವಂತೆ ಆಗ್ರಹಿಸಿ ನಾನು ಗ್ರಾಪಂ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದೆ, ಆದರೆ ಅಧಿಕಾರಿಗಳು ಎಲ್ಲವನ್ನೂ ಸರಿಪಡಿಸುವುದಾಗಿ ಹೇಳಿ ರಾಜೀನಾಮೆ ಸ್ವೀಕರಿಸಿರಲಿಲ್ಲ. ಇಲ್ಲಿಯವರೆಗೂ ಜಿಲ್ಲಾಧಿಕಾರಿಗಳು, ಜಿಪಂ ಸಿಇಒ, ತಾಪಂ ಇಒ ಯಾರೂ ಸ್ಪಂದಿಸಿಲ್ಲ. ಗದಿಗೆಪ್ಪ ಧಾರವಾಡ, ಕೊಣ್ಣೂರ ಗ್ರಾಪಂ ಸದಸ್ಯ