ಜೋಕುಮಾರಸ್ವಾಮಿ ವೃತ್ತಾಂತ ಸಾರಿದ ಮಹಿಳೆಯರು

dj aml jokumara
Published on

ಐಮಂಗಲ: ಜೋಕುಮಾರ ಸ್ವಾಮಿ ಬಂದವ್ನೆ ಮೀಸಲಕ್ಕಿ ನೀಡಿರವ್ವ ಎನ್ನುತ್ತ ಪುಟ್ಟಿ ಹೊತ್ತ ಮಹಿಳೆಯರು ಜನಪದ ಹಾಡುಗಳನ್ನು ಹಾಡುತ್ತಾ ಮನೆ ಮನೆಗೆ ಭೇಟಿ ನೀಡಿ ಅಕ್ಕಿ, ಬೇಳೆ, ಬೆಲ್ಲ, ಉಪ್ಪು, ಮೆಣಸಿನಕಾಯಿ, ಈರುಳ್ಳಿ ಸಂಗ್ರಹಿಸುತ್ತಾ ಮುಂದೆ ಸಾಗಿದರು.

ಬಿದಿರಿನ ಬುಟ್ಟಿಯಲ್ಲಿ ಬೇವಿನ ಸೊಪ್ಪು ಹಾಕಿ ಜೋಕುಮಾರ ಸ್ವಾಮಿಯನ್ನು ಪ್ರತಿಷ್ಠಾಪಿಸಿ ವಿವಿಧ ಬಣ್ಣದ ಹೂವುಗಳಿಂದ ಅಲಂಕರಿಸಿ, ಹೊತ್ತು ತಂದ ಹಿರಿಯೂರಿನ ಭಾಗ್ಯಮ್ಮ, ನಾಗವೇಣಿ, ರತ್ನಮ್ಮ, ಜ್ಯೋತಿ ಸ್ವಾಮಿಯ ಕತೆಯನ್ನು ಹೇಳಿದರು.

ಗಣೇಶ ಚತುರ್ಥಿಯ ಮರುದಿನ ಹುಟ್ಟುವ ಜೋಕುಮಾರಸ್ವಾಮಿ ಏಳು ದಿನಗಳ ಕಾಲ ಹಳ್ಳಿ ಹಳ್ಳಿ ಸುತ್ತುತ್ತಾನೆ, ಇದರ ಹಿಂದೊಂದು ಕತೆಯಿದೆ.

ಗಂಗಾಮತಸ್ಥರ ಮನೆಯಲ್ಲಿ ಜನಿಸಿದ ಜೋಕುಮಾಸ್ವಾಮಿ ಕುಂಬಾರರ ಮನೆಯಲ್ಲಿ ರೂಪ ಪಡೆಯುತ್ತಾನೆ. ಬೆಳೆಯುತ್ತ ದೊಡ್ಡವನಾದಾಗ, ಹೆಣ್ಣು ನೋಡುತ್ತೇನೆ ಮದುವೆ ಆಗು ಎಂದು ತಾಯಿ ಹೇಳುತ್ತಾಳೆ.

ಜೋಕುಮಾರಸ್ವಾಮಿ ತಾಯಿಯಂತೆಯೇ ಸುಂದರಿಯಾದ ಹೆಣ್ಣು ನೋಡು ಎನ್ನುತ್ತಾನೆ. ಇವನು ನನ್ನನ್ನೇ ಭ್ರಮಿಸಿ ಮಾತನಾಡುತ್ತಿದ್ದಾನೆ ಎಂದು ತಾಯಿ ತಪ್ಪು ತಿಳಿದು ಮಜ್ಜಿಗೆ ಕಡೆಯುವ ಕಡಗೋಲಿನಿಂದ ಹೊಡೆದು ಪುಡಿ ಮಾಡಿ ಬಿಳಿ ಬಟ್ಟೆಯಲ್ಲಿ ಸುತ್ತಿ ನದಿಗೆ ಎಸೆಯುತ್ತಾಳೆ.

ಬೆಸ್ತ ಸಮುದಾಯದ ಯುವಕ ಮೀನು ಹಿಡಿಯಲು ನದಿಯಲ್ಲಿ ಬಲೆ ಹಾಕಿದಾಗ ಮುಂಡವಿಲ್ಲದ ಜೋಕುಮಾರ ಸ್ವಾಮಿ ಸಿಕ್ಕಿಕೊಂಡಿರುತ್ತದೆ. ಇದಾದ ನಂತರ ಪ್ರತಿ ದಿನ ಜೋಕುಮಾರಸ್ವಾಮಿ ಕನಸಿನಲ್ಲಿ ಕಾಣಿಸಿಕೊಳ್ಳುತ್ತಿರುತ್ತಾನೆ.

ಹೀಗೇಕೆ ಎಂದು ವಿಚಾರಿಸಲಾಗಿ ಜೋಕುಮಾರ ಸ್ವಾಮಿ ಮನೆಯಲ್ಲಿದ್ದು, ಅದಕ್ಕೆ ಶಾಸ್ತ್ರೋಕ್ತವಾಗಿ ವರ್ಷಕೊಮ್ಮೆ ಪೂಜಿಸಿ ನೀರಿನಲ್ಲಿ ಬಿಡಬೇಕೆಂದು ಹೇಳುತ್ತಾರೆ. ಅದರಂತೆ ಪ್ರತಿವರ್ಷ ಗಣೇಶ ಹಬ್ಬದ ಮರುದಿನ ನಾಡಿಗೆ ಜೋಕುಮಾರಸ್ವಾಮಿ ಬರುತ್ತಾನೆ.

ಶಿವನ ಮಡದಿಯಾದ ಗೌರಮ್ಮ ಜನರ ಕಷ್ಟ ಸುಖ ವಿಚಾರಿಸಲು ಭೂಲೋಕಕ್ಕೆ ಬರುತ್ತಾಳೆ. ಆಕೆ ದೇವಲೋಕಕ್ಕೆ ಮರಳಿ ಬಾರದಿದ್ದಾಗ ಕರೆಯಲು ಗಣಪತಿ ಭೂಲೋಕಕ್ಕೆ ಬರುತ್ತಾನೆ.

ಜನ ಗಣಪತಿಯನ್ನು ಗೌರವದಿಂದ ನೋಡಿಕೊಳ್ಳುತ್ತಾರೆ. ಗೌರಿ ಗಣೇಶ ಇಬ್ಬರೂ ದೇವಲೋಕಕ್ಕೆ ವಾಪಸು ಬರದಿದ್ದಾಗ ಜೋಕುಮಾರಸ್ವಾಮಿ ಬರುತ್ತಾನೆ ಎಂಬುದು ಹಿರಿಯರ ಮಾತು.

ಜೋಕುಮಾರ ಸ್ವಾಮಿಯನ್ನು ಮಹಿಳೆಯರು ಬುಟ್ಟಿಯಲ್ಲಿ ಪ್ರತಿಷ್ಠಾಪಿಸಿ ಪದಗಳನ್ನು ಹೇಳುತ್ತಾ ಮನೆಗಳಿಗೆ ಭೇಟಿ ನೀಡಿ ಅಕ್ಕಿ, ಬೇಳೆ, ಬೆಲ್ಲ ಕಾಣಿಕೆ ಸ್ವೀಕರಿಸುತ್ತಾರೆ. ಆಗ ಜೋಕುಮಾರ ಸ್ವಾಮಿಯು ಭೂಲೋಕದಲ್ಲಿ ಜನ ಕಷ್ಟದಿಂದ ಇದ್ದಾರೆ.

ಮಳೆ, ಬೆಳೆ ಬೇಕು ಎಂದು ಶಿವನಿಗೆ ವರದಿ ಒಪ್ಪಿಸುತ್ತಾನೆ. ನಂತರ ಭೂಲೋಕಕ್ಕೆ ಮಳೆ ಬೆಳೆಯಾಗುತ್ತದೆ ಎಂಬ ಪ್ರತೀತಿ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net