ಗರಗ ಗ್ರಾಮದಲ್ಲಿ ಗ್ರಾಮದೇವಿಯರ ಹೊನ್ನಾಟ ಸಂಭ್ರಮ

Village Goddesses' Honnat Celebration in Garaga Village
Published on

ಧಾರವಾಡ: ತಾಲೂಕಿನ ಗರಗ ಗ್ರಾಮದಲ್ಲಿ ದ್ಯಾಮವ್ವ-ದುರ್ಗವ್ವ ದೇವಿಯರ ಹೊನ್ನಾಟ ವಿಜೃಂಭಣೆಯಿಂದ ನಡೆಯುತ್ತಿದೆ.

ಮೇ 10ರಿಂದ ಆರಂಭವಾದ ಹೊನ್ನಾಟದಲ್ಲಿ ಗರಗ ಸೇರಿದಂತೆ ಸುತ್ತಲಿನ ಹಂಗರಕಿ, ತಡಕೋಡ, ಕೊಟಬಾಗಿ, ಮಂಗಳಗಟ್ಟಿ, ಕುರುಬಗಟ್ಟಿ, ಲೋಕೂರ, ಉಪ್ಪಿನಬೆಟಗೇರಿ, ಕಲ್ಲೂರ, ಮಾಧನಬಾವಿ, ಮುಗಳಿಯ ಜನರು ಹೊನ್ನಾಟದಲ್ಲಿ ಪಾಲ್ಗೊಳ್ಳುತ್ತಿದ್ದು, ದಿನದಿಂದ ದಿನಕ್ಕೆ ಭಕ್ತರ ಸಂಖ್ಯೆ ಹೆಚ್ಚಾಗುತ್ತಿದೆ.

ಉಭಯ ದೇವಿಯರನ್ನು ಆಯಾ ಓಣಿಯವರು ಹೊನ್ನಾಟಕ್ಕೆ ತೆಗೆದುಕೊಂಡು ಹೋಗುತ್ತಿದ್ದಾರೆ. ಮೆರವಣಿಗೆಯುದ್ದಕ್ಕೂ ಮಹಿಳೆಯರು ಮತ್ತು ಮಕ್ಕಳು ಸಹಿತ ಎಲ್ಲರೂ ಪರಸ್ಪರ ಭಂಡಾರ ಎರಚುತ್ತ ಸಂಭ್ರಮಿಸುತ್ತಿದ್ದಾರೆ. ದೇವಿಗೆ ಭಕ್ತಿಯಿಂದ ಉಡಿ ತುಂಬಿ ಇಷ್ಟಾರ್ಥ ಸಿದ್ಧಿಗಾಗಿ ಬೇಡಿಕೊಳ್ಳುತ್ತಿದ್ದಾರೆ.

ಸೋಮವಾರ ಗೌಟನ್ ಹಾಗೂ ಹೊಸೂರ ಓಣಿಯ ಭಕ್ತರು ಉಭಯ ದೇವಿಯರನ್ನು ಹೊತ್ತುಕೊಂಡು ಡೊಳ್ಳಿನ ವಾದ್ಯದೊಂದಿಗೆ ಓಣಿಗೆ ತೆರಳಿದರು. ಮಹಿಳೆಯರು ಮತ್ತು ಮಕ್ಕಳು ಪೂರ್ಣಕುಂಭ ಹೊತ್ತು ಪಾಲ್ಗೊಂಡಿದ್ದರು. ಭಕ್ತರು ದ್ಯಾಮವ್ವ-ದುರ್ಗವ್ವ ದೇವಿಯರಿಗೆ ಉಡಿ ತುಂಬಿ ನಮಿಸಿದರು. ಭಕ್ತರಿಗೆ ಅನ್ನ ಪ್ರಸಾದ ಜರುಗಿತು.

ಜಾತ್ರೆ ಅಂಗವಾಗಿ ಭಾನುವಾರ ಸಂಜೆ ಕುರುಬಗಟ್ಟಿ ಗ್ರಾಮದ ಆರ್.ಕೆ. ಮೆಲೊಡೀಸ್ ತಂಡದ ಪ್ರೀತಿಯ ಪಾರಿವಾಳ ಖ್ಯಾತಿಯ ರಮೇಶ ಕುರುಬಗಟ್ಟಿ ಹಾಗೂ ಗಾಯಕರಾದ ಪುಂಡಲೀಕ ಪರಸನಟ್ಟಿ, ಸಂಜು ನರೇಂದ್ರ, ಜ್ಯೋತಿ ತಡಕೋಡ ಅವರು ಚಲನಚಿತ್ರ ಗೀತೆಗಳು, ಜನಪದ ಹಾಡುಗಳನ್ನು ಹಾಡಿದರು. ಶ್ರೀಶಕ್ತಿ ಬಿ.ಕೆ. ಹಳ್ಳಿ ಅವರಿಂದ ಭರತನಾಟ್ಯ, ದಿನೇಶ ಚಿಕ್ಕಮಗಳೂರ ಅವರಿಂದ ಅತ್ಯುತ್ತಮವಾದ ಫೈರ್‌ಡಾನ್ಸ್ ಮಾಡಿ ಜನರನ್ನು ರಂಜಿಸಿದರು. ಅಮೃತಾ ಪೂಜಾರ ಅವರಿಂದ ಡಾನ್ಸ್ ಕಾರ್ಯಕ್ರಮ ಜರುಗಿತು. ಕಾರ್ಯಕ್ರಮವನ್ನು ದೊಡವಾಡ ಗ್ರಾಮದ ಶಿಕ್ಷಕ ಮುತ್ತೂರಾಜ ಮತ್ತಿಕೊಪ್ಪ ನಡೆಸಿಕೊಟ್ಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net