

ಹಂಸಭಾವಿ: ಗ್ರಾಮದಲ್ಲಿ ಪ್ರತಿ ಮೂರು ವರ್ಷಕ್ಕೊಮ್ಮೆ ನಡೆಯುವ ದ್ಯಾಮವ್ವ ದೇವಿ ಹಾಗೂ ದುರ್ಗಾ ದೇವಿಯರ ಜಾತ್ರಾ ಮಹೋತ್ಸವ ಜ. 31ರಿಂದ ಫೆ. 10 ರವರೆಗೆ ವಿಜೃಂಭಣೆಯಿಂದ ನಡೆಯಲಿದೆ.
ಜ. 31ರಂದು ಅಂಕಿ ಹಾಕಲಾಗುವುದು. ಫೆ. 4ರಂದು ಮಧ್ಯಾಹ್ನ ಹಂಸಭಾವಿ, ದಾಸನಕೊಪ್ಪ, ಮುದ್ದಿನಕೊಪ್ಪ, ಮತ್ತೀಹಳ್ಳಿ, ಶ್ರೀರಾಮನಕೊಪ್ಪ,ದೀವಿಗಿಹಳ್ಳಿ, ಯೋಗಿಕೊಪ್ಪ, ಲಿಂಗಾಪುರ, ಚಿಕ್ಕಣಜಿ ಹಾಗೂ ಚಿಕ್ಕಣಜಿ ತಾಂಡಾದ ಭಕ್ತರಿಂದ ಉಡಿ ತುಂಬುವ ಕಾರ್ಯಕ್ರಮ ನಂತರ ಸಂಜೆ ಗ್ರಾಮದ ಕಲ್ಲೇಶ್ವರ ದೇವಸ್ಥಾನ ಆವರಣದಿಂದ ದುರ್ಗಾದೇವಿಯ ಉತ್ಸವ ಮೂರ್ತಿಯ ಮೆರವಣಿಗೆ ದೀಪಾಲಂಕೃತಗೊಂಡ ಮುತ್ತಿನ ರಥದಲ್ಲಿ ನೆರವೇರಲಿದೆ. ಸುಗಂಧಿ ಕಲಾ ತಂಡದವರಿಂದ ಛತ್ರಿ ಚಾಮರ, ಯತೀಶಕುಮಾರ ಗೌರಾಪುರ ತಂಡದವರಿಂದ ಮಹಿಳಾ ವೀರಗಾಸೆ, ಸುಗಂಧಿ ತಂಡ ಹಾನಗಲ್ಲ ಅವರಿಂದ ಸೀತಾ ಅಪಹರಣ ರೂಪಕ, ಘಟೋದ್ಗಜ ರೂಪಕ, ಬೆಳ್ತಂಗಡಿಯ ಸೃಷ್ಟಿ ಕಲಾ ತಂಡದವರಿಂದ ಕೀಲು ಕುದುರೆ ಹಾಗೂ ಗೊಂಬೆ ಕುಣಿತ, ಸುಗಂಧಿ ತಂಡ ಹಾನಗಲ್ಲ ಅವರಿಂದ ಸಂಜೀವಿನಿ ಪರ್ವತ ರೂಪಕ, ರುದ್ರೇಶ ನೀಲನಗೌಡ್ರ ಅವರಿಂದ ಭಕ್ತಪ್ರಹ್ಲಾದ ರೂಪಕ, ಮಂಗಳೂರಿನ ಶಬರಿ ತಂಡದವರಿಂದ ಚಂಡಿ ವಾದ್ಯ ಮೇಳ, ಹೂವಿನ ಹಡಗಲಿಯ ಡಾ.ಕಠಾರೆ ಅವರಿಂದ ಸಂತ ಸೇವಾಲಾಲ್ ಲೇಂಗಿ ನೃತ್ಯ, ಸೃಷ್ಟಿ ಕಲಾ ತಂಡದವರಿಂದ ಚಂಡಿ ವಾದ್ಯ, ಚಾಮುಂಡಿ ದೇವಿ ರೂಪಕ, ರಾಮದೂತ ನಾಸಿಕ್ ಅವರಿಂದ ಡೋಲ್, ರಾಜಾಸಾಬ್ ಅವರ ಬ್ಯಾಂಡ್ಸೆಟ್, ಜಗಜ್ಯೋತಿ ಬಸವೇಶ್ವರರ ರೂಪಕ, ಛತ್ರಪತಿ ಶಿವಾಜಿ ರೂಪಕ, ಎಡೆಯೂರು ಸಿದ್ಧಲಿಂಗೇಶ್ವರರ ರೂಪಕ, ಡಿಜೆ ಸೌಂಡ್ ಸಿಸ್ಟಮ್ ಹೀಗೆ ನಾಡಿನ ಬೇರೆ-ಬೇರೆ ಭಾಗಗಳಿಂದ ಆಗಮಿಸಿದ ವಿವಿಧ ಕಲಾ ತಂಡಗಳು ಮೆರವಣಿಗೆಗೆ ಮೆರುಗು ನೀಡಲಿವೆ.
ದುರ್ಗಾದೇವಿಯ ಉತ್ಸವ ಮೂರ್ತಿಯ ಮೆರವಣಿಗೆ ಪೊಲೀಸ್ ಠಾಣೆಯ ಎದುರಿನ ಮೈದಾನದಲ್ಲಿ ತಮಾಷಾ ಮದ್ದು ಸುಡುವ ಕಾರ್ಯಕ್ರಮ ನಡೆಯಲಿದೆ. ಫೆ. 5ರಂದು ಮಹಿಷಿ ಪೂಜಾ ವಿಧಿ ನಡೆಯಲಿದೆ. ಜಾತ್ರಾ ಮಹೋತ್ಸವದ ಅಂಗವಾಗಿ ಫೆ. 6ರಂದು ಮಧ್ಯಾಹ್ನ 1 ಗಂಟೆಗೆ ಬಯಲು ಜಂಗಿ ಕುಸ್ತಿ, ಸಂಜೆ 6.30ರಿಂದ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿವೆ. ಫೆ. 7ರಂದು ಮಧ್ಯಾಹ್ನ 1 ಗಂಟೆಗೆ ಬಯಲು ಜಂಗಿ ಕುಸ್ತಿ ಮತ್ತು ಸಂಜೆ 7.30ಕ್ಕೆ ಗುರುರಾಜ ಹೊಸಕೋಟೆಯವರಿಂದ ಜಾನಪದ ಸಂಗೀತ ರಸಮಂಜರಿ ಕಾರ್ಯಕ್ರಮ, </p><p>ಫೆ. 8ರಂದು ಗಂಗಾವತಿ ಪ್ರಾಣೇಶ ತಂಡದವರಿಂದ ನಗೆ ಹಬ್ಬ, ಫೆ. 9 ರಂದು ಸಂಜೆ 7.30ಕ್ಕೆ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಯುವಜನ ಹಾಗೂ ಸಾಂಸ್ಕೃತಿಕ ಅಭಿವೃದ್ಧಿ ಕೇಂದ್ರ ಹರ್ಲಾಪುರ ಅವರಿಂದ ಮಲ್ಲಕಂಬ ಪ್ರದರ್ಶನ ಮತ್ತು ಫೆ. 10ರಂದು ಭದ್ರಾವತಿಯ ಸೋನಿ ಆರ್ಕೆಸ್ಟಾ ಅವರಿಂದ ಆರ್ಕೆಸ್ಟಾ ಕಾರ್ಯಕ್ರಮಗಳು ನಡೆಯಲಿವೆ ಎಂದು ಜಾತ್ರಾ ಮಹೋತ್ಸವ ಸಮಿತಿ ಅಧ್ಯಕ್ಷ ರಾಜಶೇಖರ ಪಾಟೀಲ ಕೋರಿದ್ದಾರೆ.