

ಶಂಕರ ಶರ್ಮಾ ಕುಮಟಾ
ಹಸಿರನ್ನೇ ಉಸಿರೆಂದು ಭಾವಿಸಿದ ತಮ್ಮದೇ ಆದ ಗ್ರಾಮ ಅರಣ್ಯ ಪಂಚಾಯಿತಿ (ವಿಲೇಜ್ ಫಾರೆಸ್ಟ್ ಪಂಚಾಯತ್) ವ್ಯವಸ್ಥೆ ಕುಮಟಾ ತಾಲೂಕಿನ ಹಳಕಾರ ಗ್ರಾಮದಲ್ಲಿ ಬಿಟ್ಟರೆ ಇಡೀ ಜಗತ್ತಿನಲ್ಲೇ ಬೇರೆ ಇಲ್ಲ. ದೇಶದ ಸ್ವಾತಂತ್ರ್ಯಕ್ಕೆ ಬಹಳ ಮುಂಚೆಯೇ ಸ್ಥಾಪನೆಗೊಂಡು ಹಲವು ಹೋರಾಟಗಳ ಬಳಿಕವೂ ತನ್ನ ಅಸ್ತಿತ್ವ ಉಳಿಸಿಕೊಂಡಿರುವ ಹಳಕಾರ ಗ್ರಾಮ ಅರಣ್ಯ ಪಂಚಾಯಿತಿ ದೇಶಕ್ಕೆ ಮಾದರಿಯಾಗಿದ್ದು, ಈ ವರ್ಷವೇ ಶತಮಾನ ಪೂರೈಸಿದೆ.
ಇಂದಿನ ಗ್ರಾಮ ಪಂಚಾಯಿತಿಗಳಂತೆಯೇ ಗ್ರಾಮದ ಜನರೇ ಆಯ್ಕೆಮಾಡಿದ ಪ್ರತಿನಿಧಿಗಳಿಂದ ಕಾರ್ಯನಿರ್ವಹಿಸುತ್ತಿರುವ ಹಳಕಾರ ಗ್ರಾಮ ಅರಣ್ಯ ಪಂಚಾಯಿತಿ ಸ್ಥಾಪನೆಗೊಂಡಿದ್ದು 1924 ರಲ್ಲಿ!. ಅಂದರೆ ನೂರು ವರ್ಷಗಳ ಹಿಂದೆ ಬಾಂಬೆ ಫಾರೆಸ್ಟ್ ಮ್ಯಾನ್ಯುಯಲ್ ಹಾಗೂ ಇಂಡಿಯನ್ ಫಾರೆಸ್ಟ್ ಕಾಯಿದೆಯ ಕಲಂ 27 ರ ಅಡಿಯಲ್ಲಿ ಕಂದಾಯ ಇಲಾಖೆಯಡಿ ಹಳಕಾರ ಗ್ರಾಮ ಅರಣ್ಯ ಪಂಚಾಯಿತಿ ಸ್ಥಾಪನೆಗೊಂಡಿದೆ. ಅಂದು ಗ್ರಾಮದ ಜನವಸತಿ ಸುತ್ತಲೂ ಇರುವ 225 ಎಕರೆ ವ್ಯಾಪ್ತಿಯ ಅರಣ್ಯ ನಿರ್ವಹಣೆಯ ಜವಾಬಾರಿಯನ್ನು ಈ ಅರಣ್ಯ ಪಂಚಾಯಿತಿಯ ಆಡಳಿತಕ್ಕೆ ವಹಿಸಲಾಗಿದೆ. ಅರಣ್ಯ ಬೆಳೆಸುವ ಜತೆಗೆ ಗ್ರಾಮದಲ್ಲಿ ಗೊಬ್ಬರ, ಮೇವು, ಉರುವಲು ಒದಗಿಸುವ ಮೂಲ ಉದ್ದೇಶ ಅರಣ್ಯ ಪಂಚಾಯಿತಿಯದ್ದು. ಅಲ್ಲಿಂದ ಇಂದಿನವರೆಗೂ ಮೂಲ ಉದ್ದೇಶವನ್ನು ಜತನದಿಂದ ಕಾಪಾಡಿಕೊಂಡು ಬಂದಿದ್ದಾರೆ. ಗ್ರಾಮಸ್ಥರು ತಮ್ಮ ಅರಣ್ಯಕ್ಕೆ ಇಂದಿಗೂ ಚಿಕ್ಕ ಕತ್ತಿಯನ್ನೂ ಒಯ್ಯುವುದಿಲ್ಲ.
ಆ ಕಾಲದಲ್ಲೇ ಜಿಲ್ಲೆಯಲ್ಲಿ ಒಟ್ಟು 136 ಅರಣ್ಯ ಪಂಚಾಯಿತಿಗಳು ಹಾಗೂ ಕುಮಟಾ ತಾಲೂಕೊಂದರಲ್ಲೇ 13 ಅರಣ್ಯ ಪಂಚಾಯಿತಿ ಸ್ಥಾಪನೆಯಾಗಿದ್ದವು. ಆದರೆ, ದೇಶದ ಕಾನೂನು ಬದಲಾವಣೆ ಇನ್ನಿತರ ಕಾರಣಕ್ಕೆ ಜಿಲ್ಲೆಯಲ್ಲಿ ಮಾತ್ರವಲ್ಲದೇ ಇಡೀ ದೇಶದಲ್ಲೇ ಅರಣ್ಯ ಪಂಚಾಯಿತಿಗಳು ಅಳಿದು ಹೋಗಿವೆ. 1960 ದಶಕದಲ್ಲಿ ಹೊಸ ಅರಣ್ಯ ಕಾಯ್ದೆ ಜಾರಿಗೆ ಬಂದಾಗ ಗ್ರಾಮದ ಉಸ್ತುವಾರಿಯಲ್ಲಿದ್ದ ಅನೇಕ ಅರಣ್ಯ ಪ್ರದೇಶಗಳು ನಾಶವಾಗುತ್ತಿರುವುದನ್ನು ಮನಗಂಡು, ಅರಣ್ಯ ಪಂಚಾಯಿತಿಗಳನ್ನು ರದ್ದುಪಡಿಸಿ, ಅರಣ್ಯ ಭೂಮಿಯನ್ನು ಪುನಃ ಇಲಾಖೆಗೆ ವರ್ಗಾಯಿಸುವಂತೆ 1979 ರಂದು ಅಂದಿನ ಜಿಲ್ಲಾಧಿಕಾರಿ ಆದೇಶಿಸಿದ್ದರು. ಆದರೆ ಹಳಕಾರಿನ ಜನ ಮಾತ್ರ ಸುಮಾರು 10 ವರ್ಷ ಕಾನೂನು ಸಮರ ನಡೆಸಿ, 1989 ರಲ್ಲಿ ಐತಿಹಾಸಿಕ ಜಯ ದಾಖಲಿಸಿ, ಅರಣ್ಯ ಪಂಚಾಯಿತಿ ಉಳಿಸಿಕೊಂಡರು. ಬಳಿಕ 1998ರಲ್ಲಿ ತನ್ನದೇ ಆದ ಕಚೇರಿ ಕಟ್ಟಡ ನಿರ್ಮಿಸಿಕೊಂಡಿದೆ. ಸಾಮಾಜಿಕ ಹಾಗೂ ಶೈಕ್ಷಣಿಕ ಕಾಳಜಿಗೆ ಅರಣ್ಯದ ಕೆಲ ಪ್ರದೇಶವನ್ನು ಗ್ರಾಮದ ಒಟ್ಟಾಭಿಪ್ರಾಯದಿಂದ ನೀಡಿದ್ದು ಬಿಟ್ಟರೆ ಒಂದಿಂಚೂ ಅತಿಕ್ರಮಣ ಈವರೆಗೂ ನಡೆಯಲು ಬಿಟ್ಟಿಲ್ಲ.
ಹಳಕಾರ ಗ್ರಾಮ ಅರಣ್ಯ ಪಂಚಾಯಿತಿಗೆ ಸಂಸ್ಥಾಪಕ ಸರಪಂಚರಾಗಿ ಸ್ಥಳೀಯ ವೆಂಕಟ್ರಮಣ ನಾರಾಯಣ ಭಟ್ಟ ನೇತೃತ್ವದಲ್ಲಿ ಸದಸ್ಯರಾದ ಕೃಷ್ಣ ಮಂಜಯ್ಯ ಗುನಗಾ, ದೇವ ಜಟ್ಟಿ ಪಟಗಾರ, ಹುಲಿಯಾ ಜಟ್ಟಿ ಹರಿಕಂತ್ರ, ಜಟ್ಟಿ ದಾಸು ಹರಿಕಂತ್ರ, ಕಾರ್ಯದರ್ಶಿಯಾಗಿ ದತ್ತಾತ್ರಯ ಶಿವರಾಮ ಭಟ್ಟ ಕಾರ್ಯನಿರ್ವಹಿಸಿದ್ದರು. ಕಾಲಾಂತರದಲ್ಲಿ ಕೆಲ ಅರಣ್ಯ ಪಂಚಾಯಿತಿಗಳು ಲಾಭಕ್ಕಾಗಿ ಅರಣ್ಯಕ್ಕೆ ಕೊಡಲಿಯೇಟು ಹಾಕಿದ್ದರಿಂದ ಸರ್ಕಾರದ ಅದೇಶಕ್ಕೆ ತಲೆಬಾಗಿ ಅರಣ್ಯ ಕಳೆದುಕೊಂಡರು. ಸದ್ಯ ಶತಮಾನದ ಸಂಭ್ರಮದಲ್ಲಿರುವ ಹಳಕಾರ ಗ್ರಾಮ ದೇಶಕ್ಕೆ ಮಾದರಿಯಾಗಿ ಹಸಿರಿನ ಜತೆಗೆ ತನ್ನ ಹೆಸರನ್ನು ಇಂದಿಗೂ ಉಳಿಸಿಕೊಂಡಿದೆ. ಆದರೆ ಅರಣ್ಯ ಪಂಚಾಯಿತಿಯನ್ನು ಕಷ್ಟ ಮತ್ತು ಇಷ್ಟ ಪಟ್ಟು ನೂರು ವರ್ಷಗಳಿಂದ ನಿರ್ವಹಿಸುತ್ತಿರುವ ಹಳಕಾರಿನ ಜನತೆ ಡಿ. 21 ರಿಂದ 23 ರವರೆಗೆ ಶತಮಾನೋತ್ಸವ ಆಚರಿಸುವ ಸಂಭ್ರಮದಲ್ಲಿದೆ.
ಅರಣ್ಯಕ್ಕಾಗಿ ಕ್ವಿಟ್ ಇಂಡಿಯಾ ಚಳವಳಿಯಿಂದ ದೂರ 1932ರಲ್ಲಿ ಇಡೀ ದೇಶ ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಮುಳುಗಿದ್ದಾಗ ಹಳಕಾರ ಗ್ರಾಮ ಅರಣ್ಯ ಪಂಚಾಯಿತಿ ಮಾತ್ರ ಸ್ವಾತಂತ್ರ್ಯ ಚಳವಳಿಯಲ್ಲಿ ಪಾಲ್ಗೊಳ್ಳದಿರಲು ನಿರ್ಣಯ ಕೈಗೊಂಡಿದ್ದರು. ಪಕ್ಕದ ಅಂಕೋಲಾದ ಬಾರ್ಡೋಲಿಯಲ್ಲಿ ಚಳುವಳಿಯ ಕಿಡಿ ಹೊತ್ತಿ ಉರಿಯುತ್ತಿದ್ದಾಗ, ಅಕ್ಕಪಕ್ಕದ ಹೊಲನಗದ್ದೆ, ಚಿತ್ರಗಿ ಇನ್ನಿತರ ಗ್ರಾಮ ಅರಣ್ಯದ ಜನತೆ ಹೋರಾಟದಲ್ಲಿ ಪಾಲ್ಗೊಂಡರೂ ಹಳಕಾರದವರು ಮಾತ್ರ ತಟಸ್ಥವಾಗಿದ್ದರು. ಅರಣ್ಯ ಭೂಮಿಯನ್ನು ಬ್ರಿಟಿಷ್ ಸರ್ಕಾರ ನೀಡಿದ್ದರಿಂದ ಅವರ ವಿರುದ್ಧ ಹೋರಾಡಿದರೆ ಅರಣ್ಯವನ್ನು ತಮ್ಮಿಂದ ಮರಳಿ ಕಸಿದುಕೊಳ್ಳುವ ಭಯದಲ್ಲಿ ಅಂತಹ ನಿರ್ಣಯ ಮಾಡಿದ್ದರು.
ನಮ್ಮೂರಿನ ಕಾಡು ನಮಗೆ ಹೆಮ್ಮೆ. ಇದು ಮುಂದೆಯೂ ನೂರಾರು ವರ್ಷ ಉಳಿದು ಬೆಳೆಯಲು ಪ್ರೇರಣೆಯಾಗುವಂತೆ ಶತಮಾನೋತ್ಸವ ಆಚರಿಸುತ್ತಿದ್ದೇವೆ. ಅರಣ್ಯ ಪಂಚಾಯಿತಿಯ 219 ಎಕರೆ ಪ್ರದೇಶದಲ್ಲಿ ನೈಸರ್ಗಿಕ ಹಾಗೂ ಔಷಧಿ ಗಿಡ ಬೆಳೆಸಿ ಪ್ರವಾಸಿ ತಾಣವಾಗಿಸುವ ಗುರಿ ಇದೆ. ಸುತ್ತಲೂ ಬೆಳೆಯುತ್ತಿರುವ ಜನವಸತಿ, ಪಟ್ಟಣದ ಅಂಚಿಗೆ ಆತುಕೊಂಡಿರುವ ಹಾಗೂ ನಡುವೆ ಕೊಂಕಣ ರೈಲ್ವೆ ಹಾದು ಹೋಗಿರುವ ಅರಣ್ಯವಾದ್ದರಿಂದ ಪ್ಲಾಸ್ಟಿಕ್ ಮತ್ತಿತರ ಕಸದ ಸಮಸ್ಯೆ ಬಗೆಹರಿಸಲಾಗ ದಂತಾಗಿದೆ. ಸ್ವಚ್ಛತೆಯ ಹೊಣೆ ಎಲ್ಲರ ಮೇಲಿದೆ. ನಾಗರಾಜ ರಾಜಾರಾಮ ಭಟ್ಟ ಅಧ್ಯಕ್ಷ ಹಳಕಾರ ಗ್ರಾಮ ಅರಣ್ಯ ಪಂಚಾಯಿತಿ