ಕಟ್ಟೆಹಾಡಿಯಲ್ಲಿ ಗ್ರಾಮ ಅರಣ್ಯ ಸಮಿತಿ ಸಭೆ

Village forest committee meeting in Kattehadi
Published on

ಕುಶಾಲನಗರ:

ಐಟಿಡಿಪಿ ಇಲಾಖೆ ಅಧಿಕಾರಿಗಳು ಜೇನು ಕುರುಬರ ಹಾಡಿಗಳಿಗೆ ಬರುತ್ತಿಲ್ಲ. ಕಾರುಗಳು ಹೋಗುವಂತಹ ರಸ್ತೆಗಳು ಇರುವ ಕಡೆಗಳಲ್ಲಿ ಮಾತ್ರ ಹೋಗ್ತಾರೆ ಎಂದು ಜೇನು ಕುರುಬರ ಮುಖಂಡರೂ ಆದ ನಂಜರಾಯಪಟ್ಟಣ ಗ್ರಾಮ ಪಂಚಾಯಿತಿ ಸದಸ್ಯ ಆರ್.ಕೆ. ಚಂದ್ರು ಆರೋಪಿಸಿದರು. ಕುಶಾಲನಗರ ತಾಲೂಕು ಚಿಕ್ಲಿಹೊಳೆ ಜಲಾಶಯದ ಬಳಿ ಇರುವ ಕಟ್ಟೆಹಾಡಿಯಲ್ಲಿ ಬುಧವಾರ ಆಯೋಜಿಸಿದ್ದ ಗ್ರಾಮ ಅರಣ್ಯ ಸಮಿತಿ ಸಭೆಯಲ್ಲಿ ಮಾತನಾಡಿದರು.

ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಹಾಡಿಗಳೇ ಗೊತ್ತಿಲ್ಲ. ಇಂತಹ ಬೇಜಾವಬ್ದಾರಿ ಇಲಾಖಾಧಿಕಾರಿಗಳಿಂದ ಜೇನು ಕುರುಬ ಜನಾಂಗಕ್ಕೆ ಸರ್ಕಾರದ ಯಾವುದೇ ಸೌಲಭ್ಯಗಳು ಸಿಗುತ್ತಿಲ್ಲ. ಜೇನು ಕುರುಬರ ಹೆಸರಿನಲ್ಲಿ ಉಳ್ಳವರು ಹಾಗೂ ಜೇನು ಕುರುಬರಲ್ಲದವರು ಜಾತಿ ಪ್ರಮಾಣ ಪತ್ರಗಳನ್ನು ಮಾಡಿಸಿಕೊಂಡು ನಿಜವಾದ ಅರ್ಹ ಫಲಾನುಭವಿಗಳಿಗೆ ವಂಚಿಸುತ್ತಿದ್ದಾರೆ.
ಸರ್ಕಾರದ ವಿವಿಧ ಇಲಾಖೆಗಳಲ್ಲಿ ಮೀಸಲಿಡುವ ಪರಿಶಿಷ್ಟರ ಅನುದಾನದ ಶೇ.25 ರಷ್ಟು ಹಣ ಜೇನು ಕುರುಬರಿಗೆ ಸಲ್ಲಬೇಕು. ವಾಲ್ಮೀಕಿ ಅಭಿವೃದ್ಧಿ ನಿಗಮ ನಮ್ಮ ಸಮುದಾಯಕ್ಕೆ ಮಾರಕವಾಗಿದೆ. ನಮಗೆ ಯಾವೊಂದು ಅಭಿವೃದ್ದಿ ಯೋಜನೆಗಳೂ ಆಗಲಿಲ್ಲ. ಜೇನು ಕುರುಬರಿಗಾಗಿ ಸರ್ಕಾರ ನೀಡುವ 5 ಲಕ್ಷ ರೂ.ಗಳ ಮನೆ ನಿರ್ಮಾಣದ ಹಣ ಪ್ರಾಮಾಣಿಕವಾಗಿ ಅರ್ಹ ಫಲಾನುಭವಿಗಳಿಗೆ ತಲುಪಿಸುವಲ್ಲಿ ಪಂಚಾಯಿತಿ ಪಿಡಿಒ ಗಳು ಮುಂದಾಗಬೇಕು ಎಂದರು.

ಜೇನು ಕುರುಬರ ಅಭಿವೃದ್ದಿ ಸಂಘದ ಅಧ್ಯಕ್ಷ ಮಾವಿನಹಳ್ಳ ಹಾಡಿಯ ಜೆ.ಟಿ. ಕಾಳಿಂಗ ಮಾತನಾಡಿ, ದೇಶಕ್ಕೆ ಸ್ವಾತಂತ್ರ‍್ಯ ಬಂದು 75 ವರ್ಷಗಳು ಕಳೆದರೂ ಕೂಡ ನಮ್ಮ ಕಾಡು ಜನರಿಗೆ ಸರ್ಕಾರದ ಸೌಲಭ್ಯಗಳು ದೊರಕುತ್ತಿಲ್ಲ.
ಇದೂವರೆಗೂ ನಮ್ಮ ಹಾಡಿಗಳಲ್ಲಿ ಜೇನು ಕುರುಬ ಮಂದಿ ವಾಸಿಸುತ್ತಿರುವ ಗುಡಿಸಲುಗಳಲ್ಲಿ ಸರಿಯಾಗಿ
ಕರೆಂಟಿಲ್ಲ. ಗುಡಿಸಲುಗಳಿಗೆ ಸರಿಯಾದ ಹೊದಿಕೆ ಇಲ್ಲ. ಹಾಡಿಗಳ ನಿವಾಸಿಗಳು ಬಾಲ್ಯ ವಿವಾಹ ಪದ್ದತಿ ತಡೆಗಟ್ಟಬೇಕು.
ಜಾಗೃತರಾಗುವ ಮೂಲಕ ಸರ್ಕಾರದ ಸವಲತ್ತುಗಳನ್ನು ಪಡೆದುಕೊಳ್ಳುವ ಉದ್ದೇಶದಿಂದಲೇ ಗ್ರಾಮ
ಅರಣ್ಯ ಸಮಿತಿ ರಚನೆಯಾಗಿವೆ. ಅದರಡಿ ಅಧಿಕಾರಿಗಳು ಕಾರ್ಯನಿರ್ವಹಿಸುವ ಕಾರಣ ಜೇನು ಕುರುಬರು ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕೆ ಗಮನ ಕೊಡಬೇಕು. ಸರ್ಕಾರ ಜೇನು ಕುರುಬರು ಹಾಗೂ ಹಿಂದುಳಿದವರಿಗೆAದೇ ವಿವಿಧ ಶಾಲೆಗಳು ಹಾಗೂ ವಸತಿ ನಿಲಯಗಳನ್ನು ತೆರೆದಿದ್ದು ಅವುಗಳ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಹೇಳಿದರು.

ಸಭೆಯಲ್ಲಿ ಯಡವನಾಡು ಹಾಡಿಯ ಮುಖಂಡ ನಂಜಣ್ಣ, ಮಾವಿನಹಳ್ಳ ಜೇನು ಕುರುಬರ ಹಾಡಿಯ ಯಜಮಾನ ಪುಟ್ಟ, ಗೋಪಾಲ, ಸಜ್ಜಳ್ಳಿ ಹಾಡಿಯ ಮುಖಂಡ ವಿಶ್ವ ಇದ್ದರು.
ಇದೇ ಸಂದರ್ಭ ಸಭೆಯಲ್ಲಿ ಅರಣ್ಯ ಹಕ್ಕು ಸಮಿತಿಯನ್ನು ರಚಿಸಲಾಯಿತು. ಮಾವಿನಹಳ್ಳ ಹಾಡಿ ಅರಣ್ಯ ಹಕ್ಕು ಸಮಿತಿಯ ಅಧ್ಯಕ್ಷರಾಗಿ ಜೆ.ಆರ್.ಗೋಪಾಲ, ಉಪಾಧ್ಯಕ್ಷರಾಗಿ ಜೆ.ಎಂ.ಸರ್ವಮAಗಳ, ಕಾರ್ಯದರ್ಶಿಯಾಗಿ ಜೆ.ಎಸ್.ಪಾಪಣ್ಣ, ಕಟ್ಟೆಹಾಡಿ ಸಮಿತಿಯ ಅಧ್ಯಕ್ಷರಾಗಿ ಅಪ್ಪು, ಉಪಾಧ್ಯಕ್ಷರಾಗಿ ಗೌರಿ, ಕಾರ್ಯದರ್ಶಿಯಾಗಿ ಚಂದ್ರಿಕಾ ಅವರನ್ನು ನೇಮಕ ಮಾಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net