

ಮಡಿಕೇರಿ:
ಯಾವುದೇ ಒಂದು ಪ್ರದೇಶ ಅಭಿವೃದ್ಧಿ ಆಗಬೇಕಾದರೆ ಕೇವಲ ಸರ್ಕಾರದ ನೆರವೊಂದೇ ಸಾಕಾಗುವುದಿಲ್ಲ. ಸಮುದಾಯದ ಸಹಭಾಗಿತ್ವ ಇದ್ದರೆ ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಉತ್ತಮ ಸವಲತ್ತುಗಳನ್ನು ತಲುಪಿಸಬಹುದು. ಸೋಮವಾರಪೇಟೆ ತಾಲೂಕು ಮಾದಾಪುರ ಗ್ರಾಮ ಪಂಚಾಯಿತಿ ಇದಕ್ಕೆ ಉತ್ತಮ ಉದಾಹರಣೆ. ಪ್ರತಿಯೊಂದು ಕೆಲಸಗಳಿಗೂ ಸರ್ಕಾರದ ಅನುದಾನಕ್ಕೆ ಕಾಯದೇ ಸ್ಥಳೀಯ ದಾನಿಗಳ ಸಹಾಯದಿಂದ ಇಲ್ಲಿ ನಡೆಯುತ್ತಿರುವ ಕೆಲಸಗಳು ಜನಮೆಚ್ಚುಗೆಗೆ ಪಾತ್ರವಾಗಿದೆ.
೮ ಗ್ರಾಮಗಳನ್ನು ಒಳಗೊಂಡಿರುವ ಕೊಡಗಿನ ಮಟ್ಟಿಗೆ ಸಾಮಾನ್ಯ ವಿಸ್ತಾರ ಹೊಂದಿರುವ ಗ್ರಾಮ ಪಂಚಾಯಿತಿ ಮಾದಾಪುರ. ಇಲ್ಲಿಯ ಜನಸಂಖ್ಯೆ ಸುಮಾರು ೪.೫ ಸಾವಿರ. ಜಿಲ್ಲಾ ಕೇಂದ್ರ ಮಡಿಕೇರಿಯಿಂದ ೨೦ ಕಿಮೀ ದೂರದಲ್ಲಿರುವ ಈ ಸ್ಥಳ ಮಡಿಕೇರಿ-ಸೋಮವಾರಪೇಟೆ ರಾಜ್ಯ ಹೆದ್ದಾರಿಯಲ್ಲಿ ಬರುತ್ತದೆ. ಬೆಟ್ಟ, ಗುಡ್ಡ, ಕಾಫಿ ತೋಟಗಳನ್ನು ಒಳಗೊಂಡಿರುವ ಮಾದಾಪುರ ರಾಜ್ಯಕ್ಕೆ ಎ.ಎಂ. ಬೆಳ್ಯಪ್ಪ, ಎಂ.ಪಿ. ಅಪ್ಪಚ್ಚುರಂಜನ್ ಅವರಂತಹ ಮಂತ್ರಿಗಳನ್ನೂ ಕೊಟ್ಟಿದೆ. ಈ ಪಂಚಾಯಿತಿ ವ್ಯಾಪ್ತಿಯಲ್ಲಿ ಉತ್ತಮ ಮಳೆಯಾದರೆ ಮಾತ್ರ ಕಾವೇರಿ ಕಣಿವೆಯ ಪ್ರಮುಖ ಜಲಾಶಯಗಳಲ್ಲಿ ಒಂದಾಗಿರುವ ಹಾರಂಗಿ ಭರ್ತಿ ಆಗುತ್ತದೆ. ಇಂತಹ ಗ್ರಾಮ ಪಂಚಾಯಿತಿಯಲ್ಲಿ ಈಗ ಸಮುದಾಯದ ಸಹಭಾಗಿತ್ವದಲ್ಲಿ ನಡೆಯುತ್ತಿರುವ ಕೆಲಸಗಳು ಗಮನ ಸೆಳೆಯುತ್ತಿದೆ.
ಸ್ಥಳೀಯ ಸರ್ಕಾರ ಎಂದೇ ಬಿಂಬಿಸಲಾಗುವ ಗ್ರಾಮ ಪಂಚಾಯಿತಿಗಳಲ್ಲಿ ಸಾರ್ವಜನಿಕ ಕೆಲಸಗಳಿಗೆ ಅನುದಾನದ ಕೊರತೆಯ ಉತ್ತರ ಸಾಮಾನ್ಯ. ಅಥವಾ ಸರ್ಕಾರದ ಅನುದಾನ ಬರುವ ತನಕ ಕಾಯುವ ಅನಿವಾರ್ಯತೆ ಇರುತ್ತದೆ. ಉತ್ತಮ ಆದಾಯದ ಪಂಚಾಯಿತಿಗಳಾದರೆ ಅಗತ್ಯ ಸಂಪನ್ಮೂಲಗಳನ್ನು ತಮ್ಮೊಳಗೆಯೇ ಕ್ರೋಢೀಕರಿಸಿಕೊಳ್ಳುತ್ತವೆ. ಆದರೆ ಸೀಮಿತ ಆದಾಯದ ಚಿಕ್ಕ ಪಂಚಾಯಿತಿಗಳಲ್ಲಿ ಸಿಬ್ಬಂದಿ ವೇತನಕ್ಕೂ ಪರದಾಡುವ ಸ್ಥಿತಿ ಇರುತ್ತದೆ. ಇಂತಹ ಪಂಚಾಯಿತಿಗಳು ತಮ್ಮಲ್ಲಿ ನಡೆಯಬೇಕಾದ ಅಭಿವೃದ್ಧಿ ಕೆಲಸಗಳಿಗಾಗಿ ಸರ್ಕಾರದ ಅನುದಾನಕ್ಕೆ ಎದುರು ನೋಡದೆ ಬೇರೆ ದಾರಿ ಇರುವುದಿಲ್ಲ. ಈ ರೀತಿಯ ಸಂದರ್ಭದಲ್ಲಿ ಸಮುದಾಯದ ಸಹಭಾಗಿತ್ವ ಹೆಚ್ಚು ಮಹತ್ವ ಪಡೆದುಕೊಳ್ಳುತ್ತದೆ.
ಮಾದಾಪುರ ಗ್ರಾಮ ಪಂಚಾಯಿತಿಯಲ್ಲಿ ಈಗ ಸಮುದಾಯದ ಸಹಕಾರದೊಂದಿಗೆ ಒಂದೊಂದೇ ಸಾರ್ವಜನಿಕ ಕೆಲಸಗಳು ಸದ್ದಿಲ್ಲದೆ ನಡೆಯುತ್ತಿದೆ. ಸುತ್ತಮುತ್ತಲ ಎಸ್ಟೇಟ್ ಮಾಲೀಕರು, ಆರ್ಥಿಕವಾಗಿ ಸಬಲರಾಗಿರುವವರ ನೆರವು ಪಡೆದುಕೊಂಡು ಪಂಚಾಯಿತಿ ವ್ಯಾಪ್ತಿಯಲ್ಲಿ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವ ಯೋಜನೆಗಳು ಸಾಕಾರಗೊಳ್ಳುತ್ತಿವೆ. ಆರಂಭದಲ್ಲಿ ಈಗ ಚಿಕ್ಕ ಪುಟ್ಟ ಕೆಲಸಗಳನ್ನು ಮಾಡಿಸಲು ಆದ್ಯತೆ ಕೊಡಲಾಗುತ್ತಿದ್ದು, ಸಮುದಾಯದ ನಂಬಿಕೆಗಳಿಸಿಕೊಂಡು ಮುಂದಿನ ದಿನಗಳಲ್ಲಿ ಪಂಚಾಯಿತಿ ವ್ಯಾಪ್ತಿಯಲ್ಲಿ ಅಗತ್ಯವಿರುವ ದೊಡ್ಡ ಯೋಜನೆಗಳನ್ನೂ ಕಾರ್ಯಗತಗೊಳಿಸುವ ಗುರಿಯನ್ನೂ ಹೊಂದಲಾಗಿದೆ. ಇದಕ್ಕಾಗಿ ಕಾರ್ಪೊರೇಟ್ ಸಂಸ್ಥೆಗಳ ಸಿಎಸ್‌ಆರ್ ನಿಧಿ ಬಳಸಿಕೊಳ್ಳುವ ಬಗ್ಗೆಯೂ ಚಿಂತನೆ ನಡೆದಿದೆ.
ಸಮುದಾಯದ ಸಹಭಾಗಿತ್ವ ಎನ್ನುವ ಕಲ್ಪನೆ ಸುಲಭವಾಗಿ ಕಂಡರೂ ಇದಕ್ಕೆ ದಾನಿಗಳನ್ನು ಮನವೊಲಿಸುವುದು ದೊಡ್ಡ ಸಾಹಸವೇ ಸರಿ. ಕೆಲವು ಕಡೆ ದಾನಿಗಳು ಅವರಾಗಿಯೇ ಮುಂದೆ ಬರುತ್ತಾರೆ ಮತ್ತೆ ಕೆಲವು ಕಡೆಗಳಲ್ಲಿ ಅವರಿಗೆ ಸಮಸ್ಯೆ ಬಗ್ಗೆ ಮನವರಿಕೆ ಮಾಡಿ, ಅವರು ಸಹಾಯ ಮಾಡಿದರೆ ಸಾರ್ವಜನಿಕರಿಗೆ ಆಗುವ ಅನುಕೂಲಗಳ ಬಗ್ಗೆ ತಿಳಿಸಿ ಹೇಳಬೇಕಾಗುತ್ತದೆ. ಇದೊಂದು ಕೌಶಲ್ಯವೂ ಹೌದು. ಮಾದಾಪುರದ ಜನಾನುರಾಗಿ ಪಿಡಿಒ ಎಂ.ಆರ್. ಸುಮೇಶ್ ಅವರಿಗೆ ಇದು ಸಿದ್ದಿಸಿದೆ. ಇವರು ಈ ಹಿಂದೆ ಕೆಲಸ ಮಾಡಿದ್ದ ಕುಶಾಲನಗರ ತಾಲೂಕು ಮುಳ್ಳುಸೋಗೆ ಗ್ರಾ.ಪಂ.ನಲ್ಲೂ ಅವರ ಈ ಪ್ರಯೋಗ ಯಶಸ್ವಿಯಾಗಿತ್ತು. ಈಗ ಮಾದಾಪುರ ಗ್ರಾ.ಪಂ. ಅನ್ನು ಕೂಡ ಅಭಿವೃದ್ಧಿಯತ್ತ ಕೊಂಡೊಯ್ಯಲು ಶ್ರಮಿಸುತ್ತಿದ್ದಾರೆ.
ಹಾಡಗೇರಿ ಗ್ರಾಮದಲ್ಲಿ ಬಸ್ ನಿಲ್ಲುವ ಜಾಗದಲ್ಲಿ ಯಾವುದೇ ತಂಗುದಾಣ ಇರಲಿಲ್ಲ. ಗ್ರಾಮಸ್ಥರೇ ಸೇರಿಕೊಂಡು ನಿರ್ಮಿಸಿದ್ದ ಶೆಡ್ ಶಿಥಿಲಾವಸ್ಥೆ ತಲುಪಿತ್ತು. ಹಾಗಾಗಿ ಸ್ಥಳೀಯ ಭಗವತಿ ಎಸ್ಟೇಟ್ ಮಾಲೀಕರಾದ ರಾಜು ವಿಜಯಕುಮಾರ್ ಪಿಳ್ಳೆ ಮತ್ತು ರಜನಿ ಇಲ್ಲೊಂದು ಸುಸಜ್ಜಿತ ಬಸ್ ನಿಲ್ದಾಣ ನಿರ್ಮಿಸಿಕೊಟ್ಟಿದ್ದಾರೆ. ಎಲ್ಲಾ ಖರ್ಚು ಕೂಡ ಅವರೇ ಭರಿಸಿದ್ದಾರೆ. ಇದರಿಂದ ಸಾರ್ವಜನಿಕರಿಗೆ ಅನುಕೂಲ ಆಗಿದೆ. ಅಪಘಾತ ನಡೆಯುವ ಸ್ಥಳದಲ್ಲಿ ಕಾನ್ವೆಕ್ಸ್ ಮಿರರ್‌ಗಳನ್ನು ಕೂಡ ಎಸ್ಟೇಟ್ ಮಾಲೀಕರ ನೆರವಿನಿಂದ ಅಳವಡಿಸಿದ್ದು, ಅಲ್ಲಿ ನಡೆಯುತ್ತಿದ್ದ ಅಪಘಾತಗಳನ್ನು ತಪ್ಪಿಸಿದಂತಾಗಿದೆ. ಇವೆಲ್ಲಾ ಗ್ರಾಮೀಣಾಭಿವೃದ್ಧಿಗೆ ಸಮುದಾಯದ ಸಹಭಾಗಿತ್ವಕ್ಕೆ ಸ್ಪಷ್ಟ ಉದಾಹರಣೆಗಳಾಗಿವೆ.
ಎಂ.ಆರ್. ಸುಮೇಶ್, ಪಿಡಿಒ, ಮಾದಾಪುರ ಗ್ರಾ.ಪಂ