

ಅಳವಂಡಿ: ಕ್ಷೇತ್ರದಲ್ಲಿ ಗ್ರಾಮೀಣಾಭಿವೃದ್ಧಿ, ರಸ್ತೆ ಹಾಗೂ ನೀರಾವರಿಗೆ ಆದ್ಯತೆ ನೀಡಲಾಗುವುದು. ಚೆಕ್‌ಡ್ಯಾಂ ನಿರ್ಮಿಸಿ ನೀರು ನಿಲ್ಲಿಸಿ ಅಂತರ್ಜಲ ಮಟ್ಟ ಹೆಚ್ಚಿಸಲಾಗಿದೆ ಹಾಗೂ ಶಿಂಗಟಾಲೂರು ಏತ ನೀರಾವರಿ ಯೋಜನೆಯಡಿ 47 ಕಿಮೀವರೆಗೆ ನೀರು ಹರಿಸಲಾಗಿದ್ದು, ಅಳವಂಡಿ ಬೆಟಗೇರಿ ಏತ ನೀರಾವರಿ ಯೋಜನೆಯನ್ನು ಜಾರಿಗೊಳಿಸಲಾಗಿದೆ ಎಂದು ಶಾಸಕ ರಾಘವೇಂದ್ರ ಹಿಟ್ನಾಳ ಹೇಳಿದರು.
ಸಮೀಪದ ಮುರ್ಲಾಪುರ ಗ್ರಾಮದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಅಭಿನಂದನೆ ಹಾಗೂ ಜನಸ್ಪಂದನ ಕಾರ್ಯಕ್ರಮದಲ್ಲಿ ಮಾತನಾಡಿ, ಈ ಭಾಗದ 16 ಕೆರೆಗಳಿಗೆ 22 ಕೋಟಿ ರೂ. ವೆಚ್ಚದಲ್ಲಿ ನೀರು ತುಂಬಿಸುವ ಯೋಜನೆ ಜಾರಿಗೊಳಿಸಲಾಗುವುದು. ಗ್ರಾಮಗಳಲ್ಲಿ ಸಿಸಿ ರಸ್ತೆ, ಚರಂಡಿ, ಮುಂತಾದ ಅಭಿವೃದ್ಧಿ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಕೇಸಲಾಪುರ, ಹೈದರನಗರ, ಹಟ್ಟಿ ಬೆಳಗಟ್ಟಿ, ಘಟ್ಟಿರಡ್ಡಿಹಾಳ ಮುಂತಾದ ಗ್ರಾಮಗಳಗೆ ಏತ ನೀರಾವರಿ ಯೋಜನೆ ಜಾರಿಗೊಳಿಸಲಾಗುವದು. ಸಿದ್ದರಾಮಯ್ಯ ಅವರ ಸರ್ಕಾರ ನೀಡಿದ ಐದು ಗ್ಯಾರಂಟಿಗಳ ಪೈಕಿ ಶಕ್ತಿ ಯೋಜನೆ ಜಾರಿಗೊಳಿಸಿದ್ದು ಮಹಿಳೆಯರು ಉಚಿತವಾಗಿ ಬಸ್‌ಗಳಲ್ಲಿ ಸಂಚರಿಸುತ್ತಿದ್ದಾರೆ. ಇತರ ನಾಲ್ಕು ಯೋಜನೆಗಳು ಶೀಘ್ರ ಜಾರಿಗೊಳಿಸಲಾಗುವುದೆಂದರು.
ಪ್ರಮುಖರಾದ ಎಸ್.ಬಿ.ನಾಗರಳ್ಳಿ, ಜುಲ್ಲು ಖಾದ್ರಿ, ಹನುಮರಡ್ಡಿ ಹಂಗನಕಟ್ಟಿ, ವೆಂಕನಗೌಡ್ರ ಹಿರೇಗೌಡ್ರ, ಭರಮಪ್ಪ ನಗರ, ಗುರುಬಸವರಾಜ ಹಳ್ಳಿಕೇರಿ, ಅರವಿಂದಪ್ಪ, ತೋಟಪ್ಪ ಶಿಂಟ್ರ, ಮಹಾಂತೇಶ, ಕೃಷ್ಣರಡ್ಡಿ ಗಲಬಿ, ಗೂಳಪ್ಪ ಹಲಗೇರಿ, ಗುರುಬಸವರಾಜ, ರವೀಂದ್ರ ಸಂಗರಡ್ಡಿ, ಶಿವನಗೌಡ, ಸುರೇಶ, ದೇವಪ್ಪ ಇತರರಿದ್ದರು.