

ಕೊಪ್ಪಳ: ಗ್ರಾಮ ಅಭಿವೃದ್ಧಿಯಲ್ಲಿ ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಸದಸ್ಯರ ಪಾತ್ರ ಬಹು ಮುಖ್ಯವಾಗಿದೆ ಎಂದು ಜಿಪಂ ಸಿಇಒ ರಾಹುಲ್ ರತ್ನಂ ಪಾಂಡೆಯ ಹೇಳಿದರು.
ನಗರದ ಕೆವಿಕೆಯಲ್ಲಿ ಅಬ್ದುಲ್ ನಜೀರ್ ಸಾಬ್ ಗ್ರಾಮೀಣಾಭಿವೃದ್ಧಿ ಸಂಸ್ಥೆಯಿಂದ ಪಜಾ, ಪಪಂ ಗ್ರಾಪಂ ಅಧ್ಯಕ್ಷ-ಉಪಾಧ್ಯಕ್ಷರಿಗೆ ಗುರುವಾರ ಹಮ್ಮಿಕೊಂಡಿದ್ದ ಸಾಮರ್ಥ್ಯ ಅಭಿವೃದ್ಧಿ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಗ್ರಾಪಂ ವ್ಯಾಪ್ತಿಯಲ್ಲಿ ನೈರ್ಮಲ್ಯ ಕಾಪಾಡುವಿಕೆ, ಗ್ರಾಮಸ್ಥರು ಶೌಚಗೃಹ ಬಳೆಕ ಮಾಡುವಂತೆ ನೋಡಿಕೊಳ್ಳಿ. ತ್ಯಾಜ್ಯ ವಿಲೇವಾರಿ ವೈಜ್ಞಾನಿಕವಾಗಿ ಆಗಬೇಕು.
ಶಾಲಾ-ಕಾಲೇಜು ಆವರಣದಲ್ಲಿ ಶುಚಿತ್ವ ಕಾಪಾಡುವಿಕೆ, ಗ್ರಾಮದ ವಿದ್ಯಾರ್ಥಿಗಳಲ್ಲಿ ಓದುವಿಕೆ, ಕೌಶಲಾಭಿವೃದ್ಧಿ ಬೆಳೆಸುವಲ್ಲಿ ನೀವು ಶ್ರಮಿಸಿ. ಗ್ರಾಮ ಆ ಊರಿನ ಆಸ್ತಿ. ಅದನ್ನು ಕಾಪಾಡಿಕೊಳ್ಳುವ ಜವಾಬ್ದಾರಿ ಗ್ರಾಮಸ್ಥರು ಹಾಗೂ ನಿಮ್ಮದಾಗಿದೆ.
ಎಲ್ಲರಿಗೂ ಜನ ಸೇವೆ ಮಾಡುವ ಅವಕಾಶ ಸಿಗುವುದಿಲ್ಲ. ನಿಮ್ಮ ಆಡಳಿತ ಅವಧಿಯಲ್ಲಿ ಜನರು ಮೆಚ್ಚುವಂತೆ ಕೆಲಸ ಮಾಡಿ ಎಂದು ಸಲಹೆ ನೀಡಿದರು. ಜತೆಗೆ ಅಧ್ಯಕ್ಷ-ಉಪಾಧ್ಯಕ್ಷರ ಕರ್ತವ್ಯಗಳನ್ನು ವಿವರಿಸಿದರು.
ಬಳಿಕ ಅ.2ವರೆಗೆ ಹಮ್ಮಿಕೊಂಡಿರುವ ಸ್ವಚ್ಛತಾ ಹಿ ಸೇವಾ ಅಭಿಯಾನದ ಪ್ರತಿಜ್ಞಾ ವಿಧಿ ಬೋಧಿಸಿದರು.
ಜಿಪಂ ಮುಖ್ಯ ಯೋಜನಾಧಿಕಾರಿ ಮಂಜುನಾಥ, ತಾಪಂ ಇಒ ದುಂಡಪ್ಪ ತುರಾದಿ, ತಾಪಂ ಲೆಕ್ಕಾಧಿಕಾರಿ ಎಚ್.ಎಸ್.ಹೊನ್ನುಚಿ, ಭೀಮಪ್ಪ ಹವಳ್ಳಿ ಇತರರಿದ್ದರು.