

ಮುದ್ದೇಬಿಹಾಳ: ಪ್ರತಿ ಮೂರು ವರ್ಷಕ್ಕೊಮ್ಮೆ ನಡೆಯುವ ಪಟ್ಟಣದ ಶ್ರೀ ಗ್ರಾಮದೇವತೆ ಜಾತ್ರಾ ಮಹೋತ್ಸವದ ಆಮಂತ್ರಣ ಪತ್ರಿಕೆ, ಪೋಸ್ಟರ್ ಹಾಗೂ ಸಿಕ್ಟರ್‌ಗಳ ಬಿಡುಗಡೆ ಕಾರ್ಯಕ್ರಮ ಬಜಾರ್ ಹನುಮಾನ್ ಮಂದಿರದಲ್ಲಿ ಸೋಮವಾರ ಸಂಜೆ ನಡೆಯಿತು.
ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಎಂ.ಬಿ. ನಾವದಗಿ, ಪುರಸಭೆ ಅಧ್ಯಕ್ಷ ಮಹಿಬೂಬ ಗೊಳಸಂಗಿ, ಕಸಾಪ ಅಧ್ಯಕ್ಷ ಕಾಮರಾಜ ಬಿರಾದಾರ, ನ್ಯಾಯವಾದಿ ಬಸನಗೌಡ ಪಾಟೀಲ ಸರೂರ ಮಾತನಾಡಿ, ಗ್ರಾಮದೇವತೆ ಜಾತ್ರೆಯನ್ನು ಈ ಬಾರಿಯೂ ವೈಭವದಿಂದ ಮಾಡಲಾಗುತ್ತದೆ. ಈಗಾಗಲೇ ಜಾತ್ರೆಯ ಸಕಲ ಸಿದ್ಧತೆ ನಡೆದಿದ್ದಲ್ಲದೆ, ಸದಸ್ಯರು ವಿವಿಧ ಸಮಿತಿ ರಚಿಸಿಕೊಂಡಿದ್ದಾರೆ. ಪಟ್ಟಣದ ಪ್ರಮುಖ ರಸ್ತೆಗಳಿಗೆ ವಿದ್ಯುತ್ ದೀಪಗಳ ಅಳವಡಿಕೆ ನಡೆದಿದೆ. ದೇಣಿಗೆ ಸಂಗ್ರಹ ಕಾರ್ಯವು ಸಾಗಿದೆ. 500 ವರ್ಷಗಳಕ್ಕಿಂತ ಹೆಚ್ಚಿನ ಇತಿಹಾಸ ಹಿನ್ನೆಲೆಯ ಜಾತ್ರೆ ಹಿಂದು ಮುಸ್ಲಿಮರ ಭಾವೈಕ್ಯದಿಂದ ಕೂಡಿದೆ ಎಂದು ತಿಳಿಸಿದರು.
ಮೇ 30 ರಿಂದ ಜೂ. 3ರ ವರೆಗೆ ಐದು ದಿನಗಳು ಜಾತ್ರೆ ನಡೆಯಲಿದ್ದು, ಪ್ರಥಮ ದಿನದ ದೇವಿಯರ ಭವ್ಯ ಮೆರವಣಿಗೆಯಲ್ಲಿ ವಿವಿಧ ಕಲಾ ತಂಡಗಳು ಭಾಗವಹಿಸಲಿವೆ. ಕಿಲ್ಲಾಗಲ್ಲಿಯಿಂದ ಆರಂಭವಾಗುವ ಮೆರವಣಿಗೆ ಗ್ರಾಮದೇವತೆ ಕಟ್ಟೆ ಮಾರ್ಗವಾಗಿ ಬಸವೇಶ್ವರ ವೃತ್ತದಿಂದ ಅಂಬೇಡ್ಕರ್ ವೃತ್ತ ಅಲ್ಲಿಂದ ರಾಯರ ಮಠ, ಶಾರದಾ ದೇವಿ ಮಂದಿರ ಲಕ್ಷ್ಮಿ ವೆಂಕಟೇಶ್ವರ ಮಂದಿರ ಮಾರ್ಗವಾಗಿ ಗ್ರಾಮದೇವತೆ ಕಟ್ಟೆಯವರಗೆ ತೆರಳಲಿದೆ. ಭಕ್ತರಿಗೆ ಐದು ದಿನ ಹಳೆಯ ಪೊಲೀಸ್ ಕ್ವಾಟರ್ಸ್‌ನಲ್ಲಿ ಬೆಳಗ್ಗೆ 10 ರಿಂದ ರಾತ್ರಿ 10 ರ ವರಗೆ ಪ್ರಸಾದ ವ್ಯವಸ್ಥೆ ಮಾಡಲಾಗಿದೆ. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ತಂಗಡಗಿ ರಸ್ತೆಯ ಬಿಡಿಒ ಕ್ವಾಟರ್ಸ್ ಹಾಗೂ ಹುಡ್ಕೋ ಗವಿ ಸಿದ್ಧೇಶ್ವರ ಗಾರ್ಡನ್ ಆವರಣದಲ್ಲಿ ನಡೆಯಲಿವೆ. ಬಾರ ಎತ್ತುವ ಸ್ಪರ್ಧೆ, ಕುಸ್ತಿ ಪಂದ್ಯಾವಳಿ, ಟಗರಿನ ಕಾಳಗ, ಪುಟ್ಟಿಗಾಡಿ ರೇಸ್, ಮಹಿಳೆಯರಿಗೆ ರಂಗೋಲಿ ಸ್ಪರ್ಧೆ ಮತ್ತಿತರ ಕಾರ್ಯಕ್ರಮಗಳು ನಡೆಯಲಿವೆ.
ಮುಖಂಡರಾದ ಬಸವರಾಜ ಮೋಟಗಿ, ಬಸನಗೌಡ ರಾಯನಗೌಡ ಪಾಟೀಲ, ಬಸನಗೌಡ ಪಾಟೀಲ(ಸಕ್ರಿ ಗೌಡ್ರು), ಪುಟ್ಟುಗೌಡ ಪಾಟೀಲ, ಅಬ್ದುಲ್ ಗಫೂರ್ ಮಕಾನದಾರ, ಬಾಬು ಬಿರಾದಾರ, ಸಂತೋಷ ಪಾಟೀಲ, ದಾನಪ್ಪ ನಾಗಠಾಣ, ಚನ್ನಪ್ಪ ಕಂಠಿ, ಮುರಿಗೆಪ್ಪ ಮೋಟಗಿ, ಅಶೋಕ ನಾಡಗೌಡರ, ರಾಜು ಕಲಬುರಗಿ, ಸುನೀಲ ಇಲ್ಲೂರ, ಶರಣು ಸಜ್ಜನ, ರಾಜೇಂದ್ರಗೌಡ ರಾಯಗೊಂಡ, ಸದು ಮಠ, ನಿಂಗಣ್ಣ ಚಟ್ಟೇರ, ಅಶೋಕ ಚಟ್ಟೇರ, ಸಂಗಣ್ಣ ಮೇಲಿನಮನಿ, ಟಿ. ವಿಜಯಭಾಸ್ಕರ್, ಹಣಮಂತ ಭೋವಿ ಮತ್ತಿತರರು ಭಾಗವಹಿಸಿದ್ದರು.