

ಸೋಮವಾರಪೇಟೆ: ಗೌಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚನ್ನಾಪುರ ಗ್ರಾಮದಲ್ಲಿ ಗ್ರಾಮದೇವತೆ ಪೂಜೆ ಶುಕ್ರವಾರ ಜರುಗಿತು.
ಚನ್ನಾಪುರ ಗ್ರಾಮಾಭಿವೃದ್ಧಿ ಮಂಡಳಿ ಅಧ್ಯಕ್ಷ ಸಿ.ಎನ್.ಅಶೋಕ್ ಹಾಗೂ ಗ್ರಾಮದ ಹಿರಿಯರಾದ ಸುಬ್ಬಯ್ಯ ಅವರು ದೇವತೆಗೆ ಪೂಜೆ ಸಲ್ಲಿಸಿದರು. ಗ್ರಾಮಸ್ಥರು ಎಡೆ ಅರ್ಪಿಸಿ ಗ್ರಾಮದ ಸಮೃದ್ಧಿಗಾಗಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಗ್ರಾಮದಲ್ಲಿರುವ ಮರದ ಬುಡದಲ್ಲಿ ಕಲ್ಲುಗಳನ್ನು ಇಟ್ಟು ನೂರಾರು ವರ್ಷಗಳಿಂದಲೂ ಪೂಜೆ ನಡೆಸಿಕೊಂಡು ಬರಲಾಗುತ್ತಿದೆ. ಹಿರಿಯರು ಪ್ರಕೃತಿಯನ್ನೇ ಗ್ರಾಮದೇವತೆ ಎಂದು ಕರೆದು ಪೂಜೆ ಮಾಡಿದ್ದರು. ಆ ಪದ್ಧತಿಯನ್ನು ಮುಂದುವರಿಸಿಕೊಂಡು ಹೋಗಲಾಗುತ್ತಿದೆ ಎಂದು ಅಧ್ಯಕ್ಷ ಅಶೋಕ್ ಮಾಹಿತಿ ನೀಡಿದರು. ಗ್ರಾಮದೇವತೆಯ ಆಶೀರ್ವಾದಿಂದಲೇ ಮಳೆ ಬೆಳೆಯಾಗುತ್ತಿದೆ ಎಂಬ ನಂಬಿಕೆ ಕೃಷಿಕರಲ್ಲಿದೆ. ಮಳೆಯನ್ನೇ ನಂಬಿ ಕೃಷಿ ಮಾಡಲಾಗುತ್ತಿದೆ. ಗ್ರಾಮದೇವತೆಗೆ ಪೂಜೆ ಸಲ್ಲಿಸಿಯೇ ಶುಭ ಕಾರ್ಯ ಮಾಡಲಾಗುತ್ತದೆ ಎಂದು ತಿಳಿಸಿದರು.
ಪೂಜೆ ಬಳಿಕೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ಗ್ರಾಮಸ್ಥರಾದ ಸಿ.ಎನ್.ಅಶ್ವಥ್, ಸಿ.ಎಸ್.ಉಮೇಶ್, ಸಿ.ಎಸ್.ವೀರೇಶ್, ಸಿ.ಎ.ಗಣೇಶ್, ಪ್ರದೀಪ್‌ಗಾಂದಿ, ದೀಪಕ್, ಸುರೇಶ್ ಇದ್ದರು.