

ಹರಿಹರ: ಅರವತ್ತಾರು ಹಳ್ಳಿಗಳ ಒಡತಿ ಹಾಗೂ ನಗರದ ಗ್ರಾಮದೇವತೆಯಾದ ಊರಮ್ಮ ದೇವಿ ಮಹೋತ್ಸವಕ್ಕೆ ಮಂಗಳವಾರ ದೇವಿಗೆ ಅಭಿಷೇಕ, ಅಲಂಕಾರ ಹಾಗೂ ಸಹಸ್ರಾರು ಮಹಿಳೆಯರು ಉಡಿ ತುಂಬುವ ಮೂಲಕ ಹಬ್ಬದ ಸಂಭ್ರಮ ಮಾಡಿತ್ತು.
ಊರಮ್ಮ ವಜ್ರದ ಮೂಗುತಿ, ಚಿನ್ನದ ಕಿರೀಟ, ಬೆಳ್ಳಿಯ ತ್ರಿಶೂಲಗಳಿಂದ ಸಿಂಗಾರಗೊಂಡಿದ್ದಾಳೆ. ಕಸಬಾ ಹಾಗೂ ಮಹಜೇನಹಳ್ಳಿ ಗ್ರಾಮದೇವತೆಯರು ಸಹ ಆಭರಣಗಳಿಂದ ಅಲಂಕೃತಗೊಂಡು ಕಣ್ಮನ ಸೆಳೆಯುತ್ತಿದ್ದಾರೆ.
ಮಂಗಳವಾರ ಬೆಳಗಿನ ಜಾವ 1.30 ರಿಂದ ಅಮ್ಮನವರಿಗೆ ವಿಶೇಷ ಅಭಿಷೇಕ ಮತ್ತು ಅಲಂಕಾರ ಮಾಡಲಾಯಿತು. ಬೆಳಗ್ಗೆ 3 ರಿಂದ ಮಹಜೇನಹಳ್ಳಿ ದೇವಸ್ಥಾನದಲ್ಲಿ ಉಡಿ ತುಂಬಲು ಮಹಿಳೆಯರು ದೇವಾಲಯದ ಎದುರು ಗಂಟೆಗಟ್ಟಲೆ ಸಾಲಿನಲ್ಲಿ ನಿಂತು ದೇವಿಗೆ ಸೀರೆ, ತೆಂಗಿನಕಾಯಿ, ಹಣ್ಣು, ಕುಪ್ಪಸದ ಬಟ್ಟೆ, ಬಳೆ, ಕುಂಕುಮ ಸಮರ್ಪಿಸಿ ಪುನೀತರಾದರು.
ಮಂಗಳವಾರ ರಾತ್ರಿ 11.30 ರ ಶುಭ ಮುಹೂರ್ತದಲ್ಲಿ ದೇವಿಗೆ ಮಾಂಗಲ್ಯಧಾರಣೆ ನೆರವೇರಿತು. ಬಳಿಕ ಚೌಕಿ ಮನೆಯ ಸಮೀಪ ಸಾವಿರಾರು ಯುವಕರು ಡಿಜೆ ಹಾಡಿಗೆ ಹೆಜ್ಜೆ ಹಾಕುತ್ತ ಉದೋ ಉಧೋ ಎಂದು ಕೂಗುತ್ತಾ ಕುಣಿದು ಕುಪ್ಪಳಿಸಿದರು.
ಕೋಣ ಬಲಿ: ಮಂಗಳವಾರ ಮಧ್ಯರಾತ್ರಿ ನಂತರ ಉಭಯ ಗ್ರಾಮಗಳ ಗಟ್ಟಿ ಗಡಿಗೆಯೊಂದಿಗೆ ಊರಮ್ಮ ದೇವಿಯನ್ನು ಮಹಜೇನಹಳ್ಳಿ ದೇವಸ್ಥಾನದಿಂದ ಚೌಕಿ ಮಂಟಪಕ್ಕೆ ಮೆರವಣಿಗೆಯಲ್ಲಿ ಕರೆತಂದು ಬುಧವಾರ ಬೆಳಗ್ಗೆ 4 ರಿಂದ ಹರಿಜನಕೇರಿಯಿಂದ ಗಟ್ಟಿ ಗಡಿಗೆ ಮತ್ತು ಹಿಟ್ಟಿ(ಕಣಕ)ನಿಂದ ಮಾಡಿದ ಕೋಣವನ್ನು ಉತ್ಸವದ ಮೂಲಕ ಮಂಟಪಕ್ಕೆ ತಂದು ವಧೆ ಮಾಡಲಾಯಿತು.