

ಹೊನ್ನಾವರ: ಭೂಕುಸಿತದ ಅಪಾಯದಲ್ಲಿರುವ ಬೇರಂಕಿ ಗ್ರಾಮ ಪಂಚಾಯಿತಿ ಕಚೇರಿ ಕಟ್ಟಡ ಸ್ಥಳಾಂತರಿಸಬೇಕು ಎಂದು ಆಗ್ರಹಿಸಿ ಗ್ರಾಮಸ್ಥರು ತಾಲೂಕು ಪಂಚಾಯಿತಿ ಕಚೇರಿಗೆ ಮುತ್ತಿಗೆ ಹಾಕಿದ ಘಟನೆ ಶುಕ್ರವಾರ ನಡೆದಿದೆ.
ಮೂರು ತಿಂಗಳ ಹಿಂದೆ ಮಳೆಯಿಂದಾಗಿ ಕಚೇರಿ ಸಮೀಪ ಭೂಕುಸಿತದ ಅಪಾಯ ಎದುರಾಗಿತ್ತು. ತಹಸೀಲ್ದಾರ್ ಮತ್ತು ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳು ಕಚೇರಿಯನ್ನು ರಕ್ಷಿತ ಕಟ್ಟಡ ಮತ್ತು ಗ್ರಾಪಂ ಸ್ವಾಮಿತ್ವದ ಕಟ್ಟಡಕ್ಕೆ ಸ್ಥಳಾಂತರಿಸುವಂತೆ ಸೂಚಿಸಿದ್ದರು. ಆದ್ದರಿಂದ ಕಚೇರಿಯನ್ನು ತಾತ್ಕಾಲಿಕವಾಗಿ ಕೊಡಾಣಿಯ ಗ್ರಾಮ ಪಂಚಾಯಿತಿಗೆ ಸ್ಥಳಾಂತರಿಸಲಾಗಿತ್ತು.
ಈ ಬಗ್ಗೆ ಗಣಿ ಮತ್ತು ಭೂವಿಜ್ಞಾನ ಇಲಾಖೆ ಯಾವುದೇ ಸ್ಥಳ ತಪಾಸಣೆ ನಡೆಸಿಲ್ಲ. ಕಟ್ಟಡ ಯೋಗ್ಯವಾಗಿಲ್ಲ ಎಂದು ತೀರ್ವನವನ್ನು ಅಧಿಕೃತವಾಗಿ ನೀಡಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಾಲೂಕು ಆಡಳಿತಾಧಿಕಾರಿ ಎನ್.ಆರ್. ಹೆಗಡೆ ಜನರ ಮನವಿಗೆ ಸ್ಪಂದಿಸಿ ತಮ್ಮ ಕೈಲಾದ ಸಹಾಯ ಮಾಡುತ್ತೇನೆ. ಈ ವಿಚಾರವಾಗಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಜರೂರಾಗಿ ಸ್ಥಳ ಪರೀಶೀಲನೆ ಮಾಡಿ ವರದಿ ನೀಡುವಂತೆ ಪತ್ರವನ್ನು ಕಳುಹಿಸಿದರು. ನಂತರ ಗ್ರಾಮಸ್ಥರು ಪ್ರತಿಭಟನೆ ನಿಲ್ಲಿಸಿದರು.