ನರೇಗಾ ಸದುಪಯೋಗ ಪಡೆದುಕೊಳ್ಳಿ

Oplus_131072
ಯಳಂದೂರು ತಾಲೂಕಿನ ಅಂಬಳೆ ಗ್ರಾಪಂನ ಆವರಣದಲ್ಲಿ ಸೋಮವಾರ ನಡೆದ ಗ್ರಾಮಸಭೆಯಲ್ಲಿ ನೋಡಲ್ ಅಧಿಕಾರಿ ಸಕಲೇಶ್ವರ್ ಮಾತನಾಡಿದರು. ಗ್ರಾಪಂ ಅಧ್ಯಕ್ಷ ಎಲ್. ನವೀನ್ ಪಿಡಿಒ ಸಿ.ಎನ್.ಕಾವ್ಯಾ ಇದ್ದರು.
Published on

ಯಳಂದೂರು: ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಗ್ರಾಮದ ಅಭಿವೃದ್ಧಿಗೆ ಪೂಕರವಾದ ಅನೇಕ ಕಾಮಗಾರಿಗಳಿವೆ. ಜತೆಗೆ ವೈಯಕ್ತಿಕವಾಗಿ ರೈತರಿಗೂ ಅನೇಕ ಕಾಮಗಾರಿಗಳನ್ನು ಮಾಡಿಕೊಳ್ಳಲು ಅವಕಾಶವಿದ್ದು, ಇದರ ಲಾಭವನ್ನು ಪಡೆದುಕೊಳ್ಳಬೇಕು ಎಂದು ಅಂಬಳೆ ಪಿಡಿಒ ಸಿ.ಎನ್.ಕಾವ್ಯಾ ಸಲಹೆ ನೀಡಿದರು.

ಸೋಮವಾರ ತಾಲೂಕಿನ ಅಂಬಳೆ ಗ್ರಾಪಂನಲ್ಲಿ ಹಮ್ಮಿಕೊಂಡಿದ್ದ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಸಾಮಾಜಿಕ ಲೆಕ್ಕ ಪರಿಶೋಧನಾ ಹಾಗೂ 15 ನೇ ಹಣಕಾಸು ಆಯೋಗದ ಗ್ರಾಮಸಭೆಯಲ್ಲಿ ಮಾತನಾಡಿದರು.

ಅಂಬಳೆ ಗ್ರಾಪಂನಲ್ಲಿ ಈ ಸಾಲಿನಲ್ಲಿ ಒಟ್ಟು 132 ಕಾಮಗಾರಿಗಳನ್ನು ಮಾಡಲಾಗಿದೆ. ಇದರಲ್ಲಿ ಗ್ರಾಮ ಪಂಚಾಯಿತಿ ವತಿಯಿಂದ 127 ಕಾಮಗಾರಿಗಳು ಹಾಗೂ ತೋಟಗಾರಿಕಾ ಇಲಾಖೆಯ ವತಿಯಿಂದ 5 ಕಾಮಗಾರಿಗಳು ನಡೆದಿದೆ. ಈ ಅವಧಿಯಲ್ಲಿ ಒಟ್ಟು 49,49 ಲಕ್ಷ ರೂ. ಕೂಲಿ ಮೊತ್ತ, 37.93 ಲಕ್ಷ ರೂ. ಸಾಮಗ್ರಿ ಮೊತ್ತ ಸೇರಿದಂತೆ ಒಟ್ಟು 87.42 ಲಕ್ಷ ರೂ.ಗಳನ್ನು ಪಾವತಿಸಲಾಗಿದೆ ಎಂದು ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಗ್ರಾಮಸ್ಥರು ಇಲ್ಲಿನ ಪೌರ ಕಾರ್ಮಿಕರು ಕರ್ತವ್ಯ ಸರಿಯಾಗಿ ನಿರ್ವಹಿಸುತ್ತಿಲ್ಲ. ಹಾಗಾಗಿ ಗ್ರಾಮದ ಬೀದಿಗಳಲ್ಲಿ ಸ್ವಚ್ಛತೆ ಮರೀಚಿಕೆಯಾಗಿದೆ. ಚರಂಡಿ ಹೂಳು ತೆಗೆಯುವುದಿಲ್ಲ. ರಸ್ತೆಯ ಸ್ವಚ್ಛತೆಯನ್ನು ಮಾಡುತ್ತಿಲ್ಲ ಎಂದು ದೂರಿದರು.

ಇದಕ್ಕೆ ಪಿಡಿಒ ಸಿ.ಎನ್.ಕಾವ್ಯಾ ಮಾತನಾಡಿ, ಈ ಸಂಬಂಧ ನನಗೂ ದೂರುಗಳು ಬಂದಿವೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಸಂಬಂಧಪಟ್ಟ ಪೌರ ಕಾರ್ಮಿಕರಿಗೆ ನೋಟಿಸ್ ನೀಡಲಾಗಿದ್ದು, ಕೂಡಲೇ ಕ್ರಮ ಜರುಗಿಸಲಾಗುವುದು. ಸ್ವಚ್ಛತೆಗೆ ಆದ್ಯತೆ ನೀಡಲಾಗುವುದು ಎಂದು ಸಭೆಗೆ ತಿಳಿಸಿದರು.

ತೋಟಗಾರಿಕೆ ಇಲಾಖೆಯ ಅಧಿಕಾರಿ ಶಿವರಂಜಿನಿ ಮಾತನಾಡಿ, ರಾಷ್ಟ್ರೀಯ ತೋಟಗಾರಿಕಾ ಮಿಷನ್ ಯೋಜನೆಯಡಿ ಶೇ.50ರ ಸಬ್ಸಿಡಿಯಲ್ಲಿ ರೈತರಿಗೆ ಟ್ರಾೃಕ್ಟರ್ ಖರೀದಿ, ಪವರ್ ಟಿಲ್ಲರ್ ಹಾಗೂ ಕೆಲವು ಬೆಳೆಗಳಿಗೆ ಸಬ್ಸಿಡಿ ಸೌಲಭ್ಯವಿದೆ. ಇದು ಎಲ್ಲ ವರ್ಗದ ರೈತರಿಗೂ ಇರುವುದರಿಂದ ಇದರ ಲಾಭವನ್ನು ಪಡೆದುಕೊಳ್ಳುವಂತೆ ಮನವಿ ಮಾಡಿದರು. ಇದಕ್ಕೆ ಕೆಲ ರೈತರು ಇಲಾಖೆಯಲ್ಲಿ ಲಭಿಸುವ ಸೌಲಭ್ಯಗಳ ಮಾಹಿತಿಯಲ್ಲಿ ಗ್ರಾಪಂನ ಕಚೇರಿಯ ಮುಂಭಾಗದಲ್ಲೂ ಅಂಟಿಸಬೇಕು ಎಂದು ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಅಧಿಕಾರಿ ಈ ಬಗ್ಗೆಯೂ ಕ್ರಮ ವಹಿಸುವ ಭರವಸೆ ನೀಡಿದರು.

ನೋಡಲ್ ಅಧಿಕಾರಿ ಸಕಲೇಶ್ವರ್ ಮಾತನಾಡಿದರು. ಗ್ರಾಪಂ ಅಧ್ಯಕ್ಷ ಎಲ್ ನವೀನ್, ಸದಸ್ಯರಾದ ಸಿದ್ದನಾಯಕ, ರಾಣಿ, ರಾಜಣ್ಣ, ಮಹದೇವಸ್ವಾಮಿ, ಕಾರ್ಯದರ್ಶಿ ಪುಟ್ಟರಾಜು ಸೇರಿದಂತೆ ಅನೇಕರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net