ಗ್ರಾಮೀಣ ಪ್ರದೇಶಗಳಲ್ಲಿ ನಾಡಬಾಂಬ್ ಕಂಟಕ

bomb
Published on

 ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ

ಕಾಡಂಚಿನ ಗ್ರಾಮಗಳಲ್ಲಿ ನಾಡಬಾಂಬ್ (ಸಿಡಿಮದ್ದು) ತಯಾರಿಕೆ ಹಾಗೂ ಬಳಕೆ ಅವ್ಯಾಹತವಾಗಿದ್ದು ಈ ಕಾನೂನುಬಾಹಿರ ಚಟುವಟಿಕೆಗಳ ಬಗ್ಗೆ ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸದ ಪರಿಣಾಮ ಕೃತ್ಯಗಳು ನಿರಾತಂಕವಾಗಿ ನಡೆಯುತ್ತಿವೆ ಎಂಬ ಆರೋಪ ಕೇಳಿಬರುತ್ತಿವೆ.

ಬೆಳೆಗಳ ರಕ್ಷಣೆ ನೆಪದಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಬಳಸುತ್ತಿರುವ ನಾಡಬಾಂಬ್ (ಸಿಡಿಮದ್ದು) ಕಾಡುಪ್ರಾಣಿಗಳ ಪ್ರಾಣಕ್ಕೆ ಆಪತ್ತು ತಂದೊಡುತ್ತಿರುವ ಜತೆಗೆ ಮನುಷ್ಯರ ಜೀವಕ್ಕೂ ಕಂಟಕವಾಗುವ ಸಾಧ್ಯತೆ ಹೆಚ್ಚಿದೆ.

ಹಂದಿ ಬಾಂಬ್! ನೆಲಮಂಗಲ, ದೊಡ್ಡಬಳ್ಳಾಪುರ ತಾಲೂಕು ವ್ಯಾಪ್ತಿಯ ಅರಣ್ಯದಂಚಿನ ಗ್ರಾಮಗಳಲ್ಲಿ ಈ ರೀತಿಯ ಸ್ಟೋಟಕಗಳನ್ನು ತಯಾರು ಮಾಡುತ್ತಾರೆ, ಮನೆಗಳಲ್ಲೇ ತಯಾರು ಮಾಡಿ ಅವುಗಳನ್ನು ಕಾಡಂಚಿನ ಜಮೀನುಗಳಲ್ಲಿ ಇರಿಸಿ ಕಾಡುಪ್ರಾಣಿಗಳ ಬೇಟೆಯಾಡುತ್ತಾರೆ. ಮೇಲ್ನೋಟಕ್ಕೆ ಕಾಡುಪ್ರಾಣಿಗಳಿಂದ ಬೆಳೆ ರಕ್ಷಣೆಗಾಗಿ ಇಂಥ ಬಾಂಬ್‌ಗಳನ್ನು ತಯಾರು ಮಾಡುತ್ತಾರೆ ಎನ್ನಲಾದರೂ ಪ್ರಮುಖವಾಗಿ ಕಾಡುಹಂದಿಗಳ ಬೇಟಗಾಗಿಯೇ ಈ ಕೃತ್ಯ ಎಸಗುತ್ತಾರೆ. ಇದನ್ನು ‘ಹಂದಿ ಬಾಂಬ್ ’ಎಂದು ಸ್ಥಳೀಯವಾಗಿ ಕರೆಯಲಾಗುತ್ತದೆ, ಇಂಥ ಸಿಡಿಮದ್ದುಗಳು ಸಿಡಿದರೆ ಪ್ರಾಣಿಗಳು ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೆ ಅಸುನೀಗುತ್ತವೆ. ಒಂದು ವೇಳೆ ಮನುಷ್ಯರು ಇಂಥ ಬಾಂಬ್‌ಗಳ ಮೇಲೆ ಕಾಲಿಟ್ಟರೆ ಅವರಿಗೂ ಇದರ ತೀವ್ರತೆ ಎದುರಾಗುತ್ತದೆ, ಸ್ಟೋಟದ ತೀವ್ರತೆ ಮೇಲೆ ಪ್ರಾಣಹಾನಿಯೂ ಸಂಭವಿಸಬಹುದು ಎನ್ನಲಾಗಿದ್ದು ಇದರ ನಿಯಂತ್ರಣಕ್ಕೆ ಪೊಲೀಸರು ಕ್ರಮಕೈಗೊಳ್ಳಬೇಕಿದೆ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಹಂದಿ ಮಾಂಸಕ್ಕೆ ಬೇಡಿಕೆ: ಗ್ರಾಮಾಂತರ ಜಿಲ್ಲಾ ವ್ಯಾಪ್ತಿಯ ಅರಣ್ಯ ಪ್ರದೇಶಗಳಲ್ಲಿ ಕಾಡಂದಿಗಳ ಸಂಖ್ಯೆ ಹೆಚ್ಚಿದೆ, ಇವುಗಳ ಮಾಂಸಕ್ಕೆ ಹೆಚ್ಚಿನ ಬೇಡಿಕೆ ಇರುವುದರಿಂದ ಕಾಡುಹಂದಿಗಳ ಬೇಟೆಗೆ ಈ ರೀತಿ ಬಾಂಬ್ ಬಳಸುತ್ತಾರೆ, ನೆರೆ ಜಿಲ್ಲೆಗಳು ಸೇರಿ ಬೆಂಗಳೂರಿನಂಥ ನಗರಗಳಿಗೂ ಈ ಕಾಡುಹಂದಿ ಮಾಂಸ ರವಾನೆಯಾಗುತ್ತದೆ, ಕೆಜಿಗೆ ಸಾವಿರ ರೂಪಾಯಿವರೆಗೆ ಬಿಕರಿಯಾಗುತ್ತದೆ, ಸ್ಥಳೀಯವಾಗಿ ಮಾಂಸಕ್ಕೆ ಬೇಟೆಯಾಡುವವರು ಒಂದಡೆಯಾದರೆ ಇದನ್ನು ದಂಧೆಯನ್ನಾಗಿಸಿಕೊಂಡವರೂ ಬಹಳಷ್ಟು ಮಂದಿ ಇದ್ದಾರೆ. ಈ ಹಿನ್ನೆಲೆಯಲ್ಲಿ ಸಿಡಿಮದ್ದು ತಯಾರಿಕೆ ದೊಡ್ಡಮಟ್ಟದಲ್ಲಿಯೇ ಸಕ್ರಿಯವಾಗಿದೆ ಎಂದು ಸಾರ್ವಜನಿಕರು ತಿಳಿಸಿದ್ದಾರೆ.

 ಕರಡಿ ಬಾಯಿ ಛಿದ್ರ: ನೆಲಮಂಗಲ ತಾಲೂಕು ಸೋಂಪುರ ಹೋಬಳಿಯ ಶ್ರೀಪತಿಹಳ್ಳಿ ಗ್ರಾಮದ ಜಮೀನಿನಲ್ಲಿ ನ.29ರಂದು ಸಿಡಿಮದ್ದು ಸಿಡಿದು ಹೆಣ್ಣುಕರಡಿ ಬಾಯಿ ಛಿದ್ರಗೊಂಡು,್ದ ಗಂಭೀರವಾಗಿ ಗಾಯಗೊಂಡಿದೆ. ಕಾಡು ಹಂದಿ ಹಾವಳಿ ನಿಯಂತ್ರಣಕ್ಕೆ ಜಮೀನಿನಲ್ಲಿ ಇಟ್ಟಿದ್ದ ಸಿಡಿಮದ್ದಿಗೆ ಕರಡಿ ಬಾಯಿ ಹಾಕಿದಾಗ ಅದು ಸ್ಟೋಟಗೊಂಡಿದೆ. ಸುಮಾರು 6 ವರ್ಷದ ಹೆಣ್ಣು ಕರಡಿ ರಾತ್ರಿ ವೇಳೆ ಆಹಾರ ಹುಡುಕುತ್ತಾ ಬಂದ ವೇಳೆ ಈ ದುರ್ಘಟನೆ ನಡೆದಿದೆ ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದ ದೃಶ್ಯ ಗಮನಿಸಿದ ಸ್ಥಳೀಯರು ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದರು.

ಸಿಡಿಮದ್ದಿಗೆ ಯುವಕ ಬಲಿಯಾಗಿದ್ದ: ಹೊಸಕೋಟೆ ತಾಲೂಕು ಜಡಿಗೇನಹಳ್ಳಿ ಹೋಬಳಿ ದೊಡ್ಡನಲ್ಲಾಳ ಗ್ರಾಮದಲ್ಲಿ ಇತ್ತೀಚಿಗೆ ನಡೆದ ಘಟನೆಯಲ್ಲಿ ಕಾಡುಹಂದಿಗಳ ಬೇಟೆಗಾಗಿ ಮದ್ದಿನ ಪುಡಿ ತಯಾರಿಸುವಾಗ ಸ್ಫೋಟಗೊಂಡು 21 ವರ್ಷದ ಪವನ್ ಎಂಬ ಯುವಕ ಸ್ಥಳದಲ್ಲೇ ಮೃತಪಟ್ಟಿದ್ದ , ಆತನ ತಂದೆ ನಾಗೇಶ್ ಎಂಬುವರ ಕಾಲಿಗೆ ತೀವ್ರ ಪೆಟ್ಟಾಗಿತ್ತು ಜಡಿಗೇನಹಳ್ಳಿ ಹೋಬಳಿ ವ್ಯಾಪ್ತಿಯಲ್ಲಿ ಕಾಡುಹಂದಿಗಳನ್ನು ಬೇಟೆಯಾಡಲಾಗುತ್ತದೆ ಇದಕ್ಕಾಗಿ ನಾಡಬಾಂಬ್ ಮಾದರಿಯಲ್ಲಿ ಮನೆಯಲ್ಲಿಯೇ ಸ್ಫೋಟಕ ತಯಾರಿಸಲಾಗುತ್ತದೆ. ಇದೇ ರೀತಿ ಪವನ್ ಮದ್ದಿನಪುಡಿ ತಯಾರಿಸುವಾಗ ಸ್ಫೋಟಗೊಂಡಿತ್ತು. ಇನ್ನು ಮನೆಯಲ್ಲಿ ಮತ್ತಷ್ಟು ಜೀವಂತ ನಾಡಬಾಂಬ್‌ಗಳು ಪತ್ತೆಯಾಗಿದ್ದು, ಸ್ಥಳಕ್ಕೆ ಎಫ್‌ಎಸ್‌ಎಲ್ ತಂಡ ಹಾಗೂ ಬಾಂಬ್ ನಿಷ್ಕ್ರಿಯದಳ ತೆರಳಿ ಬಾಂಬ್ ತೆರವು ಮಾಡಿತ್ತು.

ಸಿಡಿಮದ್ದು ತಯಾರಿಕೆ ಹಾಗೂ ಬಳಕೆ ಎರಡೂ ಕಾನೂನುಬಾಹೀರ ಚಟುವಟಿಕೆಯಾಗಿದ್ದು, ಇಂಥ ಪ್ರಕರಣಗಳು ಕಂಡುಬಂದರೆ ಕಾನೂನು ಕ್ರಮಜರುಗಿಸಲಾಗುವುದು. ನೆಲಮಂಗಲ ತಾಲೂಕು ಸೋಂಪುರ ಹೋಬಳಿಯ ಶ್ರೀಪತಿಹಳ್ಳಿ ಗ್ರಾಮದ ಜಮೀನಿನಲ್ಲಿ ಸಿಡಿಮದ್ದು ಸಿಡಿದು ಹೆಣ್ಣುಕರಡಿ ಗಾಯಗೊಂಡ ಪ್ರಕರಣ ಮಾಹಿತಿ ಪಡೆಯಲಾಗುತ್ತಿದೆ. ಸಿಡಿಮದ್ದು ತಯಾರಿಸುವವರ ಮಾಹಿತಿ ನೀಡಿದರೆ ಕ್ರಮಕೈಗೊಳ್ಳಲಾಗುವುದು. ಈ ಬಗ್ಗೆ ಸ್ಥಳೀಯರು ದೂರು ನೀಡಬೇಕು.

ಸಿ.ಕೆ.ಬಾಬಾ, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ

ಕಾಡುಹಂದಿ ಅಥವಾ ಯಾವುದೇ ಕಾಡುಪ್ರಾಣಿಗಳನ್ನು ಕೊಲ್ಲಲು ಕಾನೂನಿನಲ್ಲಿ ಅವಕಾಶವಿಲ್ಲ, ಬೆಳೆ ರಕ್ಷಣೆಗೆ ಪರ್ಯಾಯ ಮಾರ್ಗಗಳನ್ನು ಅನುಸರಿಸಬೇಕು ಹೊರತು ಪ್ರಾಣಿಗಳನ್ನು ಕೊಲ್ಲುವಂತಿಲ್ಲ. ಕರಡಿ ಗಾಯಗೊಂಡ ಪ್ರಕರಣ ಸಂಬಂಧ ಜಿಲ್ಲಾ ಪೊಲೀಸರೊಂದಿಗೆ ಮಾತುಕತೆ ನಡೆಸಿದ್ದು ಅಗತ್ಯ ಕ್ರಮಕೈಗೊಳ್ಳುವಂತೆ ಮನವಿ ಮಾಡಲಾಗಿದೆ. ಅರಣ್ಯ ಇಲಾಖೆ ಕಾಯ್ದೆಯಡಿ ಇದು ಗಂಭೀರ ಅಪರಾಧ ಪ್ರಕರಣವಾಗಲಿದೆ.

ಸರಿನಾ ಸಿಕ್ಕಲಿಗಾರ್, ಉಪ ಅರಣ್ಯ ಸಂರಕ್ಷಾಧಿಕಾರಿ ಬೆಂ.ಗ್ರಾಮಾಂತರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net