

ಮಂಡ್ಯ: ಒತ್ತಡ ರಹಿತ ಹಾಗೂ ಭಯ ಮುಕ್ತ ಕೆಲಸ ನಿರ್ವಹಿಸಲು ಪೂರಕ ವಾತಾವರಣ ನಿರ್ಮಾಣ ಮಾಡಿಕೊಟ್ಟು ತಮ್ಮ ಕುಟುಂಬಕ್ಕೆ ಸಮಯ ನೀಡಲು ಅವಕಾಶ ಮಾಡಿಕೊಡಬೇಕೆಂದು ಗ್ರಾಮ ಆಡಳಿತ ಅಧಿಕಾರಿಗಳ ಸಂಘದಿಂದ ಜಿಲ್ಲಾಧಿಕಾರಿ ಡಾ.ಕುಮಾರ ಅವರಿಗೆ ಮನವಿ ಸಲ್ಲಿಸಲಾಯಿತು.
ನಗರದ ಡಿಸಿ ಕಚೇರಿಗೆ ತೆರಳಿದ ಅಧಿಕಾರಿಗಳು, ಸರ್ಕಾರ ನಿಗದಿಪಡಿಸುವ ಎಲ್ಲ ಕೆಲಸಗಳನ್ನು ಸಂಘಟಿತವಾಗಿ ನಿರ್ವಹಿಸಿಕೊಂಡು ಬರುತ್ತಿದ್ದೇವೆ. ಜಿಲ್ಲೆಯು ರಾಜ್ಯಮಟ್ಟದಲ್ಲಿ ಉತ್ತಮ ಪ್ರಗತಿಯನ್ನು ಸಾಧಿಸಿದೆ. ಆದರೆ, ಕಂದಾಯ ಇಲಾಖೆಯಲ್ಲಿ ರೈತರು ಮತ್ತು ಸಾರ್ವಜನಿಕರಿಗೆ ನೆರವಾಗಿ ಸೇವೆಗಳನ್ನು ಒದಗಿಸಲು ಕಂದಾಯ ಇಲಾಖೆಯ ಇಂಜಿನ್‌ಗಳಂತೆ ಕರ್ತವ್ಯ ನಿರ್ವಹಿಸುತ್ತಿರುವ ಗ್ರಾಮ ಆಡಳಿತ ಅಧಿಕಾರಿಗಳಿಗೆ ಅತಿಯಾದ ಕೆಲಸ ನಿರ್ವಹಣೆಗಳಿಂದಾಗಿ ಒತ್ತಡ ಹೆಚ್ಚಾಗುತ್ತಿದೆ ಎಂದು ಆರೋಪಿಸಿದರು.
ಈ ಬಗ್ಗೆ ಜಿಲ್ಲಾ ಸಂಘವು ಸಾಕಷ್ಟು ಬಾರಿ ಜಿಲ್ಲಾಡಳಿತದ ಗಮನ ಸೆಳೆಯಲಾಗಿರುತ್ತದೆ. ಆದರೆ ಸಮಸ್ಯೆಗೆ ಪರಿಹಾರ ದೊರೆತಿರುವುದಿಲ್ಲ. ಗ್ರಾಮ ಆಡಳಿತ ಅಧಿಕಾರಿಗಳು ಬೆಳೆ ಸಮೀಕ್ಷೆ ಮೇಲ್ವಿಚಾರಣೆ, ಬೆಳೆ ಕಟಾವು ಪ್ರಯೋಗ, ಕೃಷಿ ಗಣತಿ, ಸಂಯೋಜನೆ, ಆಧಾರ್ ಸೀಡಿಂಗ್, ಲ್ಯಾಂಡ್ ಬೀಟ್, ಹಕ್ಕುಪತ್ರ, ಬಗರ್ ಹುಕುಂ ಸೇರಿದಂತೆ ಇತರೆ ಕೆಲಸಗಳನ್ನು ಮೊಬೈಲ್ ಆ್ಯಪ್‌ಗಳಲ್ಲೇ ನಿರ್ವಹಿಸುತ್ತಿದ್ದೇವೆ. ಸರ್ಕಾರದಿಂದ ಯಾವುದೇ ಕನಿಷ್ಟ ಸೌಲಭ್ಯಗಳನ್ನು ಒದಗಿಸಿರುವುದಿಲ್ಲ. ಸ್ವಂತ ಮೊಬೈಲ್‌ಗಳಲ್ಲಿ ಮತ್ತು ಸ್ವಂತ ನಿರ್ವಹಣಾ ವೆಚ್ಚಗಳಲ್ಲಿ ಸರ್ಕಾರದ ಕೆಲಸಗಳನ್ನು ಮಾಡುತ್ತಿರುತ್ತೇವೆ. ಗ್ರಾಮ ಆಡಳಿತ ಅಧಿಕಾರಿಗಳಿಗೆ ಗ್ರಾಮಗಳಲ್ಲಿ ಕಚೇರಿಗಳಿಲ್ಲ. ಅಂತೆಯೇ ಪೀಠೋಪಕರಣ ಇಲ್ಲ. ಆದ್ದರಿಂದ ಈ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಸಿ, ಗ್ರಾಮ ಆಡಳಿತ ಅಧಿಕಾರಿಗಳು ಎದುರಿಸುತ್ತಿರುವ ಸಮಸ್ಯೆಗೆ ಪರಿಹಾರ ಮಾರ್ಗಗಳನ್ನು ಶಿಫಾರಸು ಮಾಡಿ, ಸರ್ಕಾರದ ಗಮನಕ್ಕೆ ತರಬೇಕು ಎಂದು ಒತ್ತಾಯಿಸಿದರು.
ತುರ್ತು ಪರಿಸ್ಥಿತಿಗಳಾದ ಚುನಾವಣೆ, ಶಿಷ್ಟಾಚಾರ, ಪೃಕೃತಿ ವಿಕೋಪಗಳಂತಹ ಕೆಲಸಗಳಲ್ಲಿ ರಜಾ ದಿನಗಳಲ್ಲೂ ಕರ್ತವ್ಯ ನಿರ್ವಹಿಸುತ್ತಿರುತ್ತೇವೆ. ಸರ್ಕಾರಿ ರಜಾ ದಿನದಂದು ಕೆಲಸ ಮಾಡುವಂತೆ ಒತ್ತಡ ನೀಡುವುದನ್ನು ಕೈಬಿಡಬೇಕು. ಗ್ರಾಮ ಆಡಳಿತ ಅಧಿಕಾರಿಗಳಾಗಿ ನೇಮಕಾತಿ ಹೊಂದಿರುವವರನ್ನು ಕಚೇರಿ ಕೆಲಸಕ್ಕೆ ನಿಯೋಜಿಸಿಕೊಳ್ಳಲಾಗಿದೆ. ಇದರಿಂದಾಗಿ ಕ್ಷೇತ್ರದಲ್ಲಿ ಕೆಲಸ ಮಾಡುವ ಗ್ರಾಮ ಆಡಳಿತ ಅಧಿಕಾರಿಗಳಿಗೆ ಹೆಚ್ಚುವರಿ ವೃತ್ತಗಳ ಕೆಲಸಗಳಿಂದಾಗಿ ಒತ್ತಡ ಉಂಟಾಗುತ್ತಿದೆ. ಕ್ಷೇತ್ರ ವ್ಯಾಪ್ತಿಯಲ್ಲಿ ಕೆಲಸವನ್ನು ಮಾಡಿ, ಕಡತಗಳಿಗೆ ವರದಿಯನ್ನು ಸಿದ್ಧಪಡಿಸಿ ಕಡತಗಳನ್ನು ಕಚೇರಿಗೆ ನೀಡಿದರೂ ಸಹ ಕೆಲಸ ಮಾಡಿ, ಕಡತಗಳನ್ನು ಮುಗಿಸಿಕೊಡುವಂತೆ ಒತ್ತಡ ಹಾಕುತ್ತಿದ್ದಾರೆ. ಕಚೇರಿ ಅವಧಿಯ ನಂತರ ಸಭೆ ಕರೆಯುತ್ತಿರುವುದರಿಂದ ನೌಕರರ ಕೌಟುಂಬಿಕ ನಿರ್ವಹಣೆಯಲ್ಲಿ ತೊಂದರೆ ಉಂಟಾಗುತ್ತಿದ್ದು, ಇದನ್ನು ತಪ್ಪಿಸಬೇಕು. ಕಚೇರಿಗಳಲ್ಲಿ ಮೂಲ ಸೌಲಭ್ಯ ನೀಡಬೇಕು ಎಂದು ಒತ್ತಾಯಿಸಿದರು.
ಗ್ರಾಮ ಆಡಳಿತ ಅಧಿಕಾರಿಗಳಿಗೆ ಕಚೇರಿಗೆ ಸಂಬಂಧಿಸಿದಂತೆ ಕೆಲಸ ಮಾಡಲು ತಾಲೂಕು ಕಚೇರಿಗಳಲ್ಲಿ ಯಾವುದೇ ಸೌಲಭ್ಯಗಳಿರುವುದಿಲ್ಲ. ಗ್ರಾಮ ಆಡಳಿತ ಅಧಿಕಾರಿಗಳ ಸಂಘದ ವತಿಯಿಂದ ಕ್ರೀಡಾಕೂಟ ಆಯೋಜಿಸಿಲು ತೀರ್ಮಾನಿಸಲಾಗಿದ್ದು, ಸದರಿ ಕ್ರೀಡಾಕೂಟವನ್ನು ಆಯೋಜಿಸಲು ಅನುಮತಿ ನೀಡಬೇಕು ಎಂದು ಮನವಿ ಮಾಡಿದರು.
ಜಿಲ್ಲಾಧ್ಯಕ್ಷ ಬಿ.ಪಿ.ಹರೀಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುಣಶೇಖರ್, ತಾಲೂಕು ಘಟಕದ ಅಧ್ಯಕ್ಷರಾದ ಈರಣ್ಣ, ರಮೇಶ್, ನಿಂಗೇಗೌಡ, ಕುಮಾರ, ರಾಜ್ಯ ಪರಿಷತ್ ಸದಸ್ಯ ಎಚ್.ಎನ್.ರಾಜು ಇತರರಿದ್ದರು.