

ದೇವದುರ್ಗ: ಕುಡಿವ ನೀರಿನ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ, ಪ್ರತಿಯೊಬ್ಬರಿಗೂ ಸಮರ್ಪಕವಾಗಿ ಕುಡಿವ ನೀರಿನ ಸೌಲಭ್ಯ ಕಲ್ಪಿಸಬೇಕು ಎಂದು ಅಧಿಕಾರಿಗಳಿಗೆ ಜಿಪಂ ಯೋಜನಾ ನಿರ್ದೇಶಕ ವಿ.ಪ್ರಕಾಶ ಸೂಚಿಸಿದರು.
ಪಟ್ಟಣದ ತಾಪಂ ಕಚೇರಿಯಲ್ಲಿ ಜೆಜೆಎಂ ಹಾಗೂ ನರೇಗಾ ಸೇರಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಪರಿಶೀಲನೆ ಸಭೆಯಲ್ಲಿ ಗುರುವಾರ ಮಾತನಾಡಿದರು. ಶುದ್ಧ ಕುಡಿವ ನೀರಿನ ಘಟಕಗಳನ್ನು ಯಾವುದೇ ಕಾರಣಕ್ಕೂ ಬಂದ್ ಆಗದಂತೆ ನೋಡಿಕೊಳ್ಳಬೇಕು. ಬಾವಿ, ಬೋರ್‌ವೆಲ್, ನಾಲೆ ನೀರು ಸದ್ಬಳಕೆ ಮಾಡಿಕೊಂಡು ಪ್ರತಿಯೊಂದು ಹಳ್ಳಿಗೆ ನೀರು ತಲುಪಿಸಬೇಕು. ಎಲ್ಲಿಯೂ ಕುಡಿವ ನೀರಿನ ಸಮಸ್ಯೆಆಗದಂತೆ ನೋಡಿಕೊಳ್ಳಬೇಕು ಎಂದು ತಾಕೀತು ಮಾಡಿದರು.
ಪ್ರಧಾನಮಂತ್ರಿ ಜಲಜೀವನ ಮಿಷನ್ ಬಗ್ಗೆ ಜನರಲ್ಲಿ ಅರಿವು ಮೂಡಿಸಿ ಪ್ರತಿಯೊಂದು ಮನೆಗೆ ನಲ್ಲಿ ನೀರು ತಲುಪುವಂತೆ ಕ್ರಮ ಕೈಗೊಳ್ಳಬೇಕು. ಎಲ್ಲ ಮನೆಗಳಿಗೂ ನಲ್ಲಿ ಸಂಪರ್ಕ ಕಡ್ಡಾಯವಾಗಿ ಕಲ್ಪಿಸಬೇಕು. ಸ್ವಚ್ಛ ಭಾರತ ಯೋಜನೆಗೆ ಪಿಡಿಒಗಳು ಆದ್ಯತೆ ನೀಡಬೇಕು. ಕಸ ವಿಲೇವಾರಿ, ಹಳ್ಳಿಗಳಲ್ಲಿ ಶೌಚಗೃಹ, ಇಂಗುಗುಂಡಿ ನಿರ್ಮಿಸಲು ಪ್ರೋತ್ಸಾಹಿಸಬೇಕು. ವಾರದಲ್ಲಿ ಮೂರು ದಿನ ಪ್ರತಿಹಳ್ಳಿಗೆ ಕಸಸಂಗ್ರಹ ವಾಹನ ಕಳಿಸಬೇಕು. ಈ ಮೂಲಕ ಎಲ್ಲಿಯೂ ಕಸ ವಿಲೇವಾರಿ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು ಎಂದರು.
ನರೇಗಾ ಯೋಜನೆ ಬಗ್ಗೆ ಹಲವು ದೂರುಗಳು ಕೇಳಿಬರುತ್ತಿದ್ದು ರೈತ ಸಂಘ ಹಾಗೂ ಕೃಷಿಕೂಲಿಕಾರರ ಸಂಘದ ಮುಖಂಡರು ಮನವಿ ಸಲ್ಲಿಸಿದ್ದಾರೆ. ಉದ್ಯೋಗ ಕೇಳಿಬರುವ ಎಲ್ಲ ಅರ್ಜಿದಾರರಿಗೆ ಕೆಲಸ ನೀಡಬೇಕು. ಸಮರ್ಪಕ ಕೆಲಸ ಮಾಡಿಸಿಕೊಂಡು ಮಾನದಂಡ ಪ್ರಕಾರ ಕೂಲಿ ಬಿಡುಗಡೆ ಮಾಡಬೇಕು. ಯಾವುದೇ ಕಾರಣಕ್ಕೂ ಕೂಲಿ ಪಾವತಿಯಲ್ಲಿ ವಿಳಂಬವಾಗದಂತೆ ನೋಡಿಕೊಳ್ಳಬೇಕು. ಬೋಗಸ್ ಕಾರ್ಡ್, ಬಿಲ್‌ಗಳಿಗೆ ಅವಕಾಶ ನೀಡಬಾರದು. ನಮ್ಮ ಹೊಲ ನಮ್ಮ ದಾರಿ, ಗೋಕಟ್ಟೆ, ಬದು ನಿರ್ಮಾಣ, ಕೃಷಿ ಹೊಂಡ ನಿರ್ಮಾಣಕ್ಕೆ ಆದ್ಯತೆ ನೀಡಬೇಕು ಎಂಧು ಪ್ರಕಾಶ ತಿಳಿಸಿದರು.