

ದೊಡವಾಡ: ಗ್ರಾಮ ವ್ಯಾಪ್ತಿಯ ಕೃಷಿ ಭೂಮಿಯಲ್ಲಿ ಬೆಳೆದ ಕಡಲೆಯನ್ನು ನಿಗದಿತ ಅವಧಿಯಲ್ಲಿ ಸರ್ವೇ ಮಾಡಿ ತಂತ್ರಾಂಶದಲ್ಲಿ ಅಪಡೇಟ್ ಮಾಡದೆ ಕರ್ತವ್ಯ ಲೋಪ ಎಸಗಿದ ಗ್ರಾಮ ಲೆಕ್ಕಾಧಿಕಾರಿ ಹಾಗೂ ಸಿಬ್ಬಂದಿಯನ್ನು ಕೂಡಲೇ ಅಮಾನತು ಮಾಡಬೇಕು ಎಂದು ಜಿಪಂ ಸದಸ್ಯ ಶಂಕರ ಮಾಡಲಗಿ ಅಧಿಕಾರಿಗಳನ್ನು ಆಗ್ರಹಿಸಿದ್ದಾರೆ.
ಕಡಲೆ ಬೆಳೆ ಜಿಪಿಎಸ್ ಸರ್ವೇ ಅಪಡೇಟ್ ಸಂಬಂಧ ಗ್ರಾಮದ ಗ್ರಾಮದೇವತೆ ದೇವಸ್ಥಾನದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಜಿಲ್ಲಾ ಕೃಷಿ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಹಾಗೂ ಗ್ರಾಮದ ರೈತರ ವಿಶೇಷ ಸಭೆ ಉದ್ದೇಶಿಸಿ ಅವರು ಮಾತನಾಡಿದರು.
ಸಂಕಷ್ಟ ಕಾಲದಲ್ಲಿ ರೈತರ ನೆರವಿಗಾಗಿ ಸರ್ಕಾರಗಳು ತರುವ ಯೋಜನೆಗಳನ್ನು ಅರ್ಹರಿಗೆ ಸಕಾಲಕ್ಕೆ ತಲುಪಿಸದೆ ಅನ್ಯಾಯ ಮಾಡುವ ಅಧಿಕಾರಿಗಳು ಇದ್ದಾದರೂ ಏನು ಪ್ರಯೋಜನ. ಜಿಲ್ಲೆ ಮತ್ತು ತಾಲೂಕು ಹಂತದ ಅಧಿಕಾರಿಗಳು ರೈತರ ಸಮಸ್ಯೆಗಳು ಬಂದಾಗ ಮಧ್ಯರಾತ್ರಿ ಕೂಡ ಜನ ಪ್ರತಿನಿಧಿಗಳ ಕರೆ ಸ್ವೀಕರಿಸಿ ಸ್ಪಂದಿಸುತ್ತಾರೆ. ಆದರೆ ಗ್ರಾಮ ಲೆಕ್ಕಾಧಿಕಾರಿಗಳು ಸದಾಕಾಲ ಮೊಬೈಲ್ ಸ್ವಿಚ್ ಆಪ್ ಇಟ್ಟು ರೈತರಿಗೆ ಮೋಸ ಮಾಡುತ್ತಾರೆ. ಅಂಥವರಿಂದ ಗ್ರಾಮೀಣ ಭಾಗದ ರೈತರಿಗೆ ಸಂಕಷ್ಟ ತಪ್ಪಿದ್ದಲ್ಲ. ಆದ್ದರಿಂದ ತಲಾಠಿಯನ್ನು ಅಮಾನತು ಮಾಡಬೇಕು ಎಂದು ಒತ್ತಾಯಿಸಿದರು.
ಕೃಷಿ ಇಲಾಖೆ ಜಂಟಿ ನಿರ್ದೇಶಕ ಜಿಲಾನಿ ಮೊಕಾಶಿ ಮಾತನಾಡಿ, ಈಗಾಗಲೇ ಆಗಿರುವ ಪ್ರಮಾದಕ್ಕೆ ಇಲಾಖೆಯಿಂದ ಕಾಲಾವಕಾಶ ನೀಡಿ ಬೆಳೆ ಸರ್ವೇ ತಂತ್ರಾಂಶದಲ್ಲಿ ಅಪಡೇಟ್ ಮಾಡುವ ಕಾರ್ಯಕ್ಕೆ ಹೆಚ್ಚಿನ ಸಿಬ್ಬಂದಿ ನೀಡಿ ತುರ್ತು ಕೆಲಸ ನಿರ್ವಹಿಸಲಾಗುತ್ತಿದೆ. ತಪ್ಪೆಸಗಿದ ಸಿಬ್ಬಂದಿ ಮೇಲೆ ಕ್ರಮ ಜರುಗಿಸಲಾಗುವುದು. ಯಾವುದೇ ಕಾರಣಕ್ಕೂ ರೈತರಿಗೆ ಅನ್ಯಾಯವಾಗದಂತೆ
ನೋಡಿಕೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಪಿಕೆಪಿಎಸ್ ಅಧ್ಯಕ್ಷ ನಿಂಗಪ್ಪ ಚೌಡಣ್ಣವರ ಮಾತನಾಡಿ, ರೈತರು ಕಷ್ಟ ಪಟ್ಟು ಬೆಳೆದ ಬೆಳೆಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸಬೇಕು. ಜನಪ್ರತಿನಿಧಿಗಳಾದವರು ಸುಳ್ಳು ಭರವಸೆ ನೀಡಿ ರೈತರನ್ನು ಗೊಂದಲಕ್ಕೀಡು ಮಾಡುವುದನ್ನು ಬಿಡಬೇಕು ಎಂದರು.
ತಾಲೂಕು ಪಂಚಾಯಿತಿ ಸದಸ್ಯ ಸಂಗಯ್ಯ ದಾಭಿಮಠ ಮಾತನಾಡಿ, ಕಿಸಾನ್ ಕಾರ್ಡ್ ವಿತರಣೆ ಶೀಘ್ರ ಜಾರಿಗೆ ತರಬೇಕು. ಬೆಳೆ ಮತ್ತು ಮನೆ ಹಾನಿ ಪರಿಹಾರ ವಿತರಣೆಯಲ್ಲಿ ಆಗಿರುವ ಗೊಂದಲ ನಿವಾರಿಸಿ ಅನುಕೂಲ ಮಾಡಿಕೊಡಬೇಕು ಎಂದು ಆಗ್ರಹಿಸಿದರು.
ತಹಸೀಲ್ದಾರ್ ಡಾ.ದೊಡ್ಡಪ್ಪ ಹೂಗಾರ, ರೈತ ಮುಖಂಡ ಸಂಗಣ್ಣ ಕರಿಸೀರಿ ಮಾತನಾಡಿದರು. ತಾಲೂಕು ಕೃಷಿ ಅಧಿಕಾರಿ ಪ್ರತಿಭಾ ಹೂಗಾರ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಗಂಗಪ್ಪ ಕಂಬಾರ, ಭೀಮರಾಯಪ್ಪ ವನಹಳ್ಳಿ ಸೇರಿ ರೈತರು ಸಭೆಯಲ್ಲಿ ಪಾಲ್ಗೊಂಡಿದ್ದರು.