ಗ್ರಾಮ ಲೆಕ್ಕಾಧಿಕಾರಿ ವಿರುದ್ಧ ಕ್ರಮ ಜರುಗಿಸಲು ಬೊಮ್ಮನಾಳ ಗ್ರಾಮಸ್ಥರ ಒತ್ತಾಯ

170120 Bommanahala Villagers appeal
Published on

ದೇವದುರ್ಗ: ರೈತರಿಗೆ ಬೆಳೆ ಪರಿಹಾರ ವಿತರಿಸುವಲ್ಲಿ ಲೋಪ ಎಸಗಿ, ಅವ್ಯವಹಾರ ನಡೆಸಿದ ತಾಲೂಕಿನ ಬೊಮ್ಮನಾಳ ಗ್ರಾಮದ ಗ್ರಾಮ ಲೆಕ್ಕಾಧಿಕಾರಿ ಶರಣಬಸವ ವಿರುದ್ಧ ಕ್ರಮ ಜರುಗಿಸುವಂತೆ ಒತ್ತಾಯಿಸಿ ಪಟ್ಟಣದಲ್ಲಿ ತಹಸೀಲ್ದಾರ್ ಮಂಜುನಾಥ ಭೋಗಾವತಿಗೆ ಗ್ರಾಮಸ್ಥರು ಶುಕ್ರವಾರ ಮನವಿ ಸಲ್ಲಿಸಿದರು.

ಬೊಮ್ಮನಾಳ ಗ್ರಾಮದ ರೈತರಿಗೆ 2018-19 ಹಾಗೂ 2019-20ನೇ ಸಾಲಿನ ಬೆಳೆ ಪರಿಹಾರ ವಿತರಣೆ ಮಾಡುವಲ್ಲಿ ವಿಎ ಶರಣಬಸವ ಅವ್ಯವಹಾರ ನಡೆಸಿದ್ದಾರೆ. ಕೆಲ ಜಮೀನಿನ ಪರಿಹಾರ ಅರ್ಜಿದಾರರನ್ನು ಬಿಟ್ಟು ಬೇರೆಯವರಿಗೆ ಜಮಾ ಆಗಿದೆ. ಈ ಬಗ್ಗೆ ವಿಎಗೆ ವಿಚಾರಿಸಿದರೆ, ತಾಂತ್ರಿಕ ಸಮಸ್ಯೆಯಿಂದ ಆಗಿದೆ ಎಂದು ಹಾರಿಕೆ ಉತ್ತರ ನೀಡುತ್ತಾರೆ. ಹಣ ನೀಡಿದವರಿಗೆ ಮಾತ್ರ ಪರಿಹಾರ ಜಮಾ ಮಾಡಿದ್ದಾರೆ ಎಂದು ಆರೋಪಿಸಿದರು.

ಕೂಡಲೇ ಗ್ರಾಮ ಲೆಕ್ಕಾಧಿಕಾರಿಯ ವ್ಯವಹಾರವನ್ನು ಉನ್ನತ ಮಟ್ಟದ ಅಧಿಕಾರಿಗಳ ತಂಡದಿಂದ ತನಿಖೆ ನಡೆಸಿ, ಕೆಲಸದಿಂದ ಅಮಾನತು ಮಾಡಬೇಕು. ರೈತರಿಗೆ ಎರಡು ವರ್ಷದ ಬೆಳೆ ಪರಿಹಾರ ತಕ್ಷಣವೇ ಜಮಾ ಮಾಡಬೇಕು ಎಂದು ಒತ್ತಾಯಿಸಿದರು. ಗ್ರಾಮಸ್ಥರಾದ ಮಲ್ಲಪ್ಪಗೌಡ, ಶಾಂತಕುಮಾರ, ವೆಂಕಟೇಶ ಕುಂಬಾರ, ನಿಂಗಯ್ಯ, ಮಹೇಶಗೌಡ, ಸುರೇಶ, ಅಂಜಿನೇಯ, ಮಲ್ಲಣ್ಣಗೌಡ, ಮಾರೆಪ್ಪ ಹೊನ್ನಟಗಿ, ಮಾಸ್ತನಿ ನಾಯಕ, ಸುರೇಶಗೌಡ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net