ಮನೆಬಾಗಿಲಿಗೆ ಆಡಳಿತ, ಬಿಜೆಪಿ ಸಂಕಲ್ಪ ; ಸಚಿವ ಎಂಟಿಬಿ ನಾಗರಾಜ್ ಅಭಿಮತ

1
Published on

ಜಡಿಗೇನಹಳ್ಳಿ: ಆಡಳಿತವನ್ನು ಜನರ ಮನೆ ಬಾಗಿಲಿಗೆ ತಲುಪಿಸುವುದು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಂಕಲ್ಪವಾಗಿದ್ದು, ಈ ನಿಟ್ಟಿನಲ್ಲಿ ಜನಪರ ಆಡಳಿತ ನೀಡಲು ಬಿಜೆಪಿಯಿಂದ ಸಾಧ್ಯವಾಗಿದೆ ಎಂದು ಪೌರಾಡಳಿತ ಮತ್ತು ಸಣ್ಣ ಕೈಗಾರಿಕೆ ಖಾತೆ ಸಚಿವ ಎಂಟಿಬಿ ನಾಗರಾಜ್ ಹೇಳಿದರು.

ಹೊಸಕೋಟೆ ತಾಲೂಕು ವಾಗಟ ಗ್ರಾಮದಲ್ಲಿ ಸೋಮವಾರ ‘ಜಿಲ್ಲಾಧಿಕಾರಿ ನಡೆ ಹಳ್ಳಿಯ ಕಡೆಗೆ’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಜನರು ನೀಡಿರುವ ಅಧಿಕಾರವನ್ನು ಉತ್ತಮವಾಗಿ ಬಳಸಿಕೊಂಡು ಆಡಳಿತವನ್ನು ಜನರ ಮನೆಬಾಗಿಲಿಗೆ ತಲುಪಿಸುವ ಮಹತ್ವಾಕಾಂಕ್ಷಿ ಯೋಜನೆ ಇದಾಗಿದೆ ಎಂದು ಹೇಳಿದರು.

ಸರ್ಕಾರದ ಎಲ್ಲ ಇಲಾಖೆಯ ಅಧಿಕಾರಿಗಳನ್ನು ಒಂದೇ ವೇದಿಕೆಯಲ್ಲಿ ಸೇರಿಸಿ ಸ್ಥಳೀಯ ಜನಪ್ರತಿನಿಧಿಗಳ ಸಮ್ಮುಖದಲ್ಲೇ ಜನರ ಅಹವಾಲುಗಳನ್ನು ಆಲಿಸಲಾಗುತ್ತದೆ. ಎಲ್ಲರೂ ಇದರ ಸದುಪಯೋಗ ಪಡೆಯಬೇಕು. ಕಳೆದ 5 ತಿಂಗಳ ಹಿಂದೆ ಆರಂಭಗೊಂಡ ಈ ಕಾರ್ಯಕ್ರಮ ಈಗಾಗಲೇ ತಾಲೂಕಿನ ನಾಲ್ಕು ಗ್ರಾಪಂಗಳ ವ್ಯಾಪ್ತಿಯಲ್ಲಿ ನಡೆಸಲಾಗಿದ್ದು, ಐದನೇ ಕಾರ್ಯಕ್ರಮ ಇದಾಗಿದೆ ಎಂದರು.

ಕಚೇರಿಗೆ ಅಲೆಯುವಂತಿಲ್ಲ:ಸರ್ಕಾರದ ವಿವಿಧ ಸವಲತ್ತುಗಳನ್ನು ಪಡೆದುಕೊಳ್ಳಲು ಕಚೇರಿಗಳಿಗೆ ಅಲೆಯುವುದನ್ನು ತಪ್ಪಿಸುವ ಉದ್ದೇಶದಿಂದ ರೂಪಿಸಿರುವ ಈ ಕಾರ್ಯಕ್ರಮ ಗ್ರಾಮದ ಕಟ್ಟಕಡೆಯ ವ್ಯಕ್ತಿಯನ್ನು ತಲುಪುವ ಗುರಿ ಹೊಂದಿದೆ ಎಂದು ತಹಸೀಲ್ದಾರ್ ಮಹೇಶ್ ಕುಮಾರ್ ಹೇಳಿದರು.

ಸವಲತ್ತು ವಿತರಣೆ: ಕೃಷಿ, ಆರೋಗ್ಯ,ಕಂದಾಯ, ಆಹಾರ, ರೇಷ್ಮೆ, ಅರಣ್ಯ ಇಲಾಖೆ ಸೇರಿ ವಿವಿಧ ಇಲಾಖೆಗಳ ಸವಲತ್ತುಗಳು ಮತ್ತು ಸರ್ಕಾರಿ ಆದೇಶ ಪತ್ರಗಳನ್ನು ಸಚಿವರು ಅರ್ಹ ಫಲಾನುಭವಿಗಳಿಗೆ ವಿತರಿಸಿದರು. ಇದೇ ವೇಳೆ ಸ್ವಯಂಪ್ರೇರಿತ ರಕ್ತ ದಾನ ಶಿಬಿರದಲ್ಲಿ 50ಕ್ಕೂ ಹೆಚ್ಚು ಯುನಿಟ್ ರಕ್ತ ಸಂಗ್ರಹಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net