

ಉಡುಪಿ: ಸರ್ಕಾರದ ಯೋಜನೆಗಳನ್ನು ಅರ್ಹ ಲಾನಿಭವಿಗಳಿಗೆ ತಲುಪಿಸುವುದು, ಮನೆ ಬಾಗಿಲಲ್ಲಿ ಸೇವೆ ಒದಗಿಸುವುದು, ಕಾರ್ಯಕ್ರಮಗಳ ಅನುಷ್ಠಾನದಲ್ಲಿ ಮಾಹಿತಿ ಕೊರತೆಯಿಂದ ಆಗುವ ತೊಡಕುಗಳನ್ನು ನಿವಾರಿಸುವುದು ವಿಕಸಿತ ಭಾರತ ಸಂಕಲ್ಪ ಯಾತ್ರೆಯ ಉದ್ದೇಶ ಎಂದು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಹಾಗೂ ಆಹಾರ ಸಂಸ್ಕರಣಾ ಉದ್ದಿಮೆಗಳ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.
ಶನಿವಾರ ತೋನ್ಸೆಯಲ್ಲಿ ವಿಕಸಿತ ಭಾರತ ಸಂಕಲ್ಪ ಯಾತ್ರೆ ವಾಹನ ಸ್ವಾಗತಿಸಿ ಮಾತನಾಡಿದರು. ಪ್ರಧಾನಿ ನರೇಂದ್ರ ಮೋದಿ ಅವರ ಸಂಕಲ್ಪದಂತೆ 2047ರ ಹೊತ್ತಿಗೆ ಭಾರತವನ್ನು ಜಗತ್ತಿನ ಅಭಿವೃದ್ಧಿ ಹೊಂದಿದ ರಾಷ್ಟ್ರ ಮಾಡುವುದು ನಮ್ಮೆಲ್ಲರ ಜವಾಬ್ದಾರಿ ಇದೆ. ಇದು ಪಕ್ಷಾತಿತ ಕಾರ್ಯಕ್ರಮ. ಎಲ್ಲರ ಸಹಕಾರದೊಂದಿಗೆ ಯೋಜನೆಗಳನ್ನು ನಿಜವಾದ ಫಲಾನುಭವಿಗಳಿಗೆ ತಲುಪಿಸಲಾಗುವುದು. ಎಲ್ಲರೂ ಅವರವರ ಜವಾಬ್ದಾರಿ ನಿರ್ವಹಿಸಿದರೆ ದೇಶದ ಅಭಿವೃದ್ಧಿಯಾಗುತ್ತದೆ ಎಂದು ಅವರು ಹೇಳಿದರು.
ಮುಖ್ಯ ಅತಿಥಿಗಳಾಗಿದ್ದ ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಸ್ವನಿಧಿ ಯೋಜನೆ, ವಿಶ್ವಕರ್ಮ ಯೋಜನೆ ಮುಂತಾದ ಜನಪರ ಕಾರ್ಯಕ್ರಮಗಳು ಮನೆಮನೆಗೆ ತಲುಪಬೇಕು. ಇತಿಹಾಸದಲ್ಲಿ ಪ್ರಥಮ ಬಾರಿಗೆ ಸರ್ಕಾರಕ್ಕೆ ಅರ್ಜಿ ಕೊಡದೆ ಅನುದಾನ ಒದಗಿಸುತ್ತಿರುವ ಕಿಸಾನ್ ಸಮ್ಮಾನ್ ಯೋಜನೆ ರೈತರಿಗೆ ತಲುಪುತ್ತಿದೆ, ಆಯುಷ್ಮಾನ್ ಭಾರತ್ ಯೋಜನೆಯಿಂದ ಬಡವರಿಗೆ 5 ಲಕ್ಷದವರೆಗೆ ಆಸ್ಪತ್ರೆ ಖರ್ಚು ಭರಿಸಲಾಗುತ್ತಿದೆ ಎಂದು ಅವರು ಹೇಳಿದರು.
ಉಡುಪಿ ಶಾಸಕ ಯಶಪಾಲ್ ಸುವರ್ಣ ಮಾತನಾಡಿ, ಕಟ್ಟಕಡೆಯ ವ್ಯಕ್ತಿಗೂ ಯೋಜನೆಗಳನ್ನು ಪಕ್ಷಾತಿತವಾಗಿ ತಲುಪಿಸುವುದು ನಮ್ಮ ಆದ್ಯತೆಯಾಗಬೇಕು. ವಿಕಸಿತ ಭಾರತ ಸಂಕಲ್ಪ ಯಾತ್ರೆ ಈವರೆಗೆ ಯೋಜನೆಗಳು ತಲುಪದೇ ಇದ್ದವರನ್ನು ತಲುಪುತ್ತಿದೆ ಎಂದು ಹೇಳಿದರು.
ಕಾಪು ಶಾಸಕ ಗುರ್ಮೆ ಸುರೇಶ ಶೆಟ್ಟಿ , ತೊನ್ಸೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕುಸುಮಾ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಅರುಣ್ , ಕೆನರಾ ಬ್ಯಾಂಕಿನ ಪ್ರಾದೇಶಿಕ ಪ್ರಬಂಧಕಿ ಶೀಲಾ ಸಾಜನ್ , , ದೂರದರ್ಶನದ ಉಪನಿರ್ದೇಶಕ ಯಶವಂತ್ , ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದ ಡಾ. ಧನಂಜಯ್ ಉಪಸ್ಥಿತರಿದ್ದರು.